ಭರೂಚ್: ಒಂದು ದಿನ ಬೇರೆ ಪಕ್ಷದ ಹಿರಿಯ ನಾಯಕರೊಬ್ಬರು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಸದಾ ನನ್ನನ್ನು ವಿರೋಧಿಸುತ್ತಾರಾದರೂ ನನಗೆ ಅವರ ಬಗ್ಗೆ ಹಳ ಗೌರವವಿದೆ. ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ‘ನೀವು ಎರಡು ಬಾರಿ ಪ್ರಧಾನಿಯಾದರೆ ಸಾಕು. ಎರಡು ಬಾರಿ ಪ್ರಧಾನಿಯಾದರೆ ಏನು ಸಾಧಿಸಬೇಕೋ ಅದನ್ನು ಸಾಧಿಸಬಹುದು’ ಎಂದು ಹೇಳಿದ್ದರು. ನಾನು ಆ ಮಾತನ್ನು ಮರೆತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಳೆಯ ಭೇಟಿಯನ್ನು ಮೆಲುಕು ಹಾಕಿದ್ದಾರೆ. ಆದರೆ, ಆ ನಾಯಕ ಯಾರೆಂಬ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರ ಜೊತೆಗಿನ ಮಾತುಕತೆಯೊಂದನ್ನು ಬಹಿರಂಗಪಡಿಸಿದ್ದಾರೆ. ‘ನೀವು ಎರಡು ಅವಧಿಗೆ ಪ್ರಧಾನಿಯಾಗಿದ್ದೀರಿ, ಅಷ್ಟು ಸಾಕು’ ಎಂದು ಪ್ರತಿಪಕ್ಷದ ನಾಯಕರೊಬ್ಬರು ಹೇಳಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನಲ್ಲಿ ಉತ್ಕರ್ಷ್ ಸಮಾರೋಹ್ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ವಿಚಾರವನ್ನು ಮೋದಿ ಹಂಚಿಕೊಂಡಿದ್ದಾರೆ.
ವಿಧವೆಯರು, ವೃದ್ಧರು ಮತ್ತು ನಿರ್ಗತಿಕ ನಾಗರಿಕರಿಗಾಗಿ ಗುಜರಾತ್ ಸರ್ಕಾರದ ಹಣಕಾಸು ನೆರವು ಯೋಜನೆಗಳ ಫಲಾನುಭವಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವಾಗ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. “ಒಂದು ದಿನ ಬೇರೆ ಪಕ್ಷದ ಬಹಳ ದೊಡ್ಡ ನಾಯಕ ನನ್ನನ್ನು ಭೇಟಿಯಾದರು. ಅವರು ಯಾವಾಗಲೂ ನಮ್ಮನ್ನು ರಾಜಕೀಯವಾಗಿ ವಿರೋಧಿಸುತ್ತಾರೆ. ಆದರೆ ನಾನು ಅವರನ್ನು ಗೌರವಿಸುತ್ತೇನೆ. ನನ್ನ ಕೆಲವು ನಿರ್ಧಾರಗಳ ಬಗ್ಗೆ ಅವರಿಗೆ ತೃಪ್ತಿಯಿಲ್ಲ. ಆದ್ದರಿಂದ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಮೋದಿಯವರೇ, ನೀವು ಎರಡು ಅವಧಿಗೆ ಪ್ರಧಾನಿಯಾಗಿದ್ದೀರಿ. ನಿಮಗೆ ಇನ್ನೇನು ಬೇಕು? ಒಬ್ಬರು ಎರಡು ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ” ಎಂದು ಅವರು ಹೇಳಿದ್ದರು. ನನ್ನನ್ನು ಗುಜರಾತ್ ರಾಜ್ಯ ತಯಾರು ಮಾಡಿದೆ. ಈಗ ವಿಶ್ರಾಂತಿ ಪಡೆಯಬೇಕು ಅಂತ ಸುಮ್ಮನಿರುವುದರಲ್ಲಿ ನನಗೆ ನಂಬಿಕೆ ಇಲ್ಲ. ನನ್ನ ಕನಸಿನ ಎಲ್ಲ ಯೋಜನೆಗಳನ್ನೂ ಶೇ. 100ರಷ್ಟು ಜಾರಿಗೆ ತರಬೇಕೆಂಬುದೇ ನನ್ನ ಗುರಿ. ನನ್ನ ಈ 8 ವರ್ಷಗಳ ಸೇವೆಯನ್ನು ದೇಶದ ಬಡವರ ಕಲ್ಯಾಣಕ್ಕೆ, ಉತ್ತಮ ಆಡಳಿತಕ್ಕೆ ಮೀಸಲಿಟ್ಟಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಮೋದಿ ಹೇಳಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಅವರ ಕುಟುಂಬ ಸದಸ್ಯರ ವಿರುದ್ಧ ಕೇಂದ್ರ ಏಜೆನ್ಸಿಗಳ ಕ್ರಮದ ವಿಷಯವನ್ನು ಪ್ರಸ್ತಾಪಿಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಆದರೆ, ಆ ವಿರೋಧ ಪಕ್ಷದ ಹಿರಿಯ ನಾಯಕ ಯಾರೆಂಬುದರ ಬಗ್ಗೆ ನರೇಂದ್ರ ಮೋದಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ