ಅಯೋಧ್ಯಾ: ಹೊಸ ವರ್ಷದ ಮೊದಲ ದಿನ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಯಾವಾಗಲೂ ಹೆಚ್ಚಾಗಿರುತ್ತದೆ. ಹಾಗೇ ಉತ್ತರಪ್ರದೇಶದ ಅಯೋಧ್ಯೆ(Ayodhya Ram Temple)ಗೆ ನಿನ್ನೆ (ಜನವರಿ 1) ಒಂದೇ ದಿನ ಬರೋಬ್ಬರಿ 1.12 ಲಕ್ಷ ಭಕ್ತರು ಆಗಮಿಸಿ, ಶ್ರೀ ರಾಮಲಲ್ಲಾ(Ram Lalla)ನ ದರ್ಶನ ಪಡೆದಿದ್ದಾರೆ. ಈ ಮಾಹಿತಿಯನ್ನು ದೇವಾಲಯ ಆಡಳಿತ ಮಂಡಳಿಯೇ ಹಂಚಿಕೊಂಡಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ ಎಂದು ಹೇಳಿಕೊಂಡಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರೊಂದಿಗೆ ಅಲ್ಲಿ ಅಭಿವೃದ್ಧಿ ಕೆಲಸಗಳೂ ಭರದಿಂದ ಸಾಗುತ್ತಿವೆ. 2025ರೊಳಗೆ ರಾಮಮಂದಿರ ನಿರ್ಮಾಣ ಕೆಲಸ ಮುಕ್ತಾಯವಾಗಲಿದ್ದು,2023ರ ಹೊತ್ತಿಗೆ ಶ್ರೀರಾಮಮಂದಿ ಪ್ರವೇಶಕ್ಕೆ ಭಕ್ತರಿಗೆ ಪ್ರವೇಶ ಸಿಗುವ ಸಾಧ್ಯತೆಯೂ ಇದೆ ಎಂದೂ ಹೇಳಲಾಗಿದೆ.
ಹಾಗಂತ ಶ್ರೀರಾಮನ ದರ್ಶನ ಪಡೆಯುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅಲ್ಲಿ ಪ್ರತಿದಿನವೂ ಭಕ್ತರು ರಾಮಲಲ್ಲಾನ ದರ್ಶನಕ್ಕೆ ಬರುತ್ತಾರೆ. ಜನವರಿ 1ರ ಹೊಸವರ್ಷದಂದು ಮುಂಜಾನೆ 7ರಿಂದ 11ಗಂಟೆವರೆಗಿನ ವೇಳೆಯಲ್ಲಿ 53 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ. ಅದಾದ ಬಳಿಕ ಮಧ್ಯಾಹ್ನ 2ರಿಂದ 6ಗಂಟೆವರೆಗಿನ ವ್ಯಾಪ್ತಿಯಲ್ಲಿ 59 ಸಾವಿರ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟು, ಶ್ರೀರಾಮನ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಸಹಜವಾಗಿಯೇ ಅಲ್ಲಿನ ಭದ್ರತಾ ಸಿಬ್ಬಂದಿಗೆ ಅವರನ್ನು ನಿಯಂತ್ರಿಸಲು ಕಷ್ಟವಾಗಿತ್ತು.
आज दिनांक 1 जनवरी 2022 को लगभग 1,12,000 श्रद्धालुओं ने श्री रामजन्मभूमि स्थित अस्थायी मन्दिर में विराजमान भगवान श्री रामलला सरकार के दर्शन किए।
Around 1,12,000 devotees had darshans of Bhagwan Shri Ramlalla Sarkar at Shri Ram Janmabhoomi Mandir, on today January 1, 2022. pic.twitter.com/30zI1eyhYV
— Shri Ram Janmbhoomi Teerth Kshetra (@ShriRamTeerth) January 1, 2022
ನಿನ್ನೆ ಒಂದೇ ದಿನ ಅಷ್ಟೆಲ್ಲ ಭಕ್ತರು ದೇಗುಲಕ್ಕೆ ಆಗಮಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ವರ್ಷದ ಮೊದಲನೇ ದಿನ ಶ್ರೀರಾಮಲಲ್ಲಾ ದೇವರ ದರ್ಶನಕ್ಕೆ ಇಷ್ಟೊಂದು ಜನರು ಬರುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲೇ ಇಲ್ಲ ಎಂದಿದ್ದಾರೆ. ನಿನ್ನೆ ಹನುಮಾನ್ ಗರ್ಹಿಯಿಂದ ಶ್ರೀರಾಮಜನ್ಮಭೂಮಿಗೆ ಹೋಗುವ ಕಿರಿದಾದ ಮಾರ್ಗ ಭಕ್ತರಿಂದ ತುಂಬಿ ಹೋಗಿತ್ತು ಎಂದು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ವೈಷ್ಣೋದೇವಿ ದೇಗುಲಕ್ಕೆ ಅಪಾರ ಭಕ್ತರು ತೆರಳಿದ್ದರು. ಈ ವೇಳೆ ಅಲ್ಲಿ ಕಾಲ್ತುಳಿತ ಉಂಟಾಗಿ 12 ಭಕ್ತರು ಮೃತಪಟ್ಟಿದ್ದಾರೆ. ಅಲ್ಲಿ ದುರ್ಘಟನೆ ನಡೆದ ಬೆನ್ನಲ್ಲೇ ಅಯೋಧ್ಯೆಯಲ್ಲೂ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿತ್ತು. ದೇಗುಲದಲ್ಲಿ ತಕ್ಷಣವೇ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿ, ಭಕ್ತರನ್ನು ನಿಯಂತ್ರಣ ಮಾಡಲಾಯಿತು. ಆದರೆ, ಹೊಸವರ್ಷದಂದು ಇಷ್ಟೆಲ್ಲ ಜನ ಒಮ್ಮೆಲೇ ಬಂದಿದ್ದು ಸ್ವಲ್ಪ ಕಷ್ಟವೇ ಆಯಿತು. ಒಂದು ಅಂದಾಜು ಇದ್ದಿದ್ದರೆ ಮೊದಲೇ ಸಿದ್ಧತೆ ಮಾಡಿಕೊಳ್ಳಬಹುದಿತ್ತು ಎಂದು ದೇಗುಲ ಆಡಳಿತ ಒಪ್ಪಿಕೊಂಡಿದೆ.