ದೆಹಲಿ, ಹರ್ಯಾಣದ ಐದು ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ಬಂದ್; ಚಿತ್ರರಂಗದಲ್ಲಿ ಹೆಚ್ಚಾಯ್ತು ಆತಂಕ
Haryana: ದೆಹಲಿಯಲ್ಲಿ ಕೊರೊನಾ ನಿಯಮಾವಳಿಗಳನ್ನು ಹೇರಲಾಗಿದ್ದು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳನ್ನು ಮುಚ್ಚಲಾಗಿದೆ. ಹರ್ಯಾಣದ ಐದು ಜಿಲ್ಲೆಗಳನ್ನೂ ಇಂದಿನಿಂದ ಈ ನಿಯಮ ಅನ್ವಯವಾಗಲಿದೆ. ಹಲವು ರಾಜ್ಯಗಳಲ್ಲಿ ಅರ್ಧ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಇದು ಚಿತ್ರರಂಗದ ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿದ್ದು ಹಲವು ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಗೆ ತರುವ ಸೂಚನೆ ನೀಡಿವೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಜನರು ಗುಂಪಾಗಿ ಸೇರುವ ಸ್ಥಳಗಳಿಗೆ ಕಠಿಣ ನಿಯಮಾವಳಿ ರೂಪಿಸಿವೆ. ದೆಹಲಿಯಲ್ಲಿ ಶಾಲಾ ಕಾಲೇಜುಗಳು ಹಾಗೂ ಸಿನಿಮಾ ಮಂದಿರಗಳನ್ನು ಹೊಸ ವರ್ಷಕ್ಕೂ ಮುನ್ನವೇ ಮುಚ್ಚಲಾಗಿದೆ. ಚಿತ್ರಮಂದಿರಗಳಲ್ಲಿ ಕಾರ್ಯನಿರ್ವಹಿಸಲು ಬಿಡುವಂತೆ ಚಿತ್ರರಂಗ ದೆಹಲಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ದೆಹಲಿ ಮಾದರಿಯಲ್ಲೇ ಪಕ್ಕದ ರಾಜ್ಯ ಹರ್ಯಾಣದ ಐದು ಜಿಲ್ಲೆಗಳಲ್ಲೂ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಹರ್ಯಾಣದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕೃತ ಆದೇಶದ ಪ್ರಕಾರ ಗುರುಗ್ರಾಮ್, ಫರೀದಾಬಾದ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಸಿನಿಮಾ ಹಾಲ್ಗಳು, ಮಲ್ಟಿಪ್ಲೆಕ್ಸ್ಗಳು ಹಾಗೂ ಕ್ರೀಡಾ ಸಂಕೀರ್ಣಗಳನ್ನು ಜನವರಿ 2ರಿಂದ 12ರವರೆಗೆ ಬಂದ್ ಮಾಡಲು ಅಧಿಕಾರಿಗಳು ಶನಿವಾರ ಆದೇಶ ನೀಡಿದ್ದಾರೆ. ಈ ನಿರ್ಬಂಧಗಳನ್ನು ವಿಧಿಸಲಾಗಿರುವ ಇನ್ನುಳಿದ ಜಿಲ್ಲೆಗಳೆಂದರೆ ಅಂಬಾಲಾ, ಪಂಚ್ಕುಲ ಹಾಗೂ ಸೋನಿಪತ್. ಇದಲ್ಲದೇ ಹರ್ಯಾಣದಲ್ಲಿ ರಾತ್ರಿ ಹನ್ನೊಂದರಿಂದ ಬೆಳಗ್ಗೆ 5ರವೆಗೆ ನೈಟ್ ಕರ್ಫ್ಯೂವನ್ನೂ ಹೇರಲಾಗಿದೆ.
ಹರ್ಯಾಣದಲ್ಲಿ ಶನಿವಾರ 552 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಗುರುಗ್ರಾಮ್ ಜಿಲ್ಲೆಯೊಂದರಲ್ಲೇ 298 ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗುರುಗ್ರಾಮ್ ಕಳೆದ ಒಂದು ವಾರದಿಂದ ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಫರಿದಾಬಾದ್‌ನಲ್ಲಿ 107 ಹೊಸ ಪ್ರಕರಣಗಳು, ಅಂಬಾಲಾ 32 ಮತ್ತು ಪಂಚಕುಲದಲ್ಲಿ 26 ಪ್ರಕರಣಗಳು ವರದಿಯಾಗಿವೆ ಎಂದು ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಈ ಹಿಂದೆ, ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ ದೆಹಲಿ ಸರ್ಕಾರ ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿತ್ತು. ಪ್ರಸ್ತುತ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಚಿತ್ರಮಂದಿರಗಳು 50 ಪ್ರತಿಶತ ಸಾಮರ್ಥ್ಯದೊದಿಗೆ ಕಾರ್ಯ ನಿರ್ವಹಿಸುವಂತೆ ಆದೇಶಿಸಿವೆ.
ಚಿತ್ರತಂಡಗಳಿಗೆ ಆತಂಕವೇಕೆ? ದೆಹಲಿಯಲ್ಲಿ ಚಿತರಮಂದಿರಗಳನ್ನು ಮುಚ್ಚಿದ್ದು ಎರಡು ಬಿಗ್ ಬಜೆಟ್ ಚಿತ್ರಗಳ ಮುಂದೂಡುವಿಕೆಗೆ ಕಾರಣವಾಗಿದೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಹಾಗೂ ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರಗಳನ್ನು ಮುಂದೂಡಲಾಗಿದೆ. ಈ ಚಿತ್ರಗಳು ಮುಂದೂಡಲ್ಪಟ್ಟಿರುವುದರಿಂದ ಬೇರೆ ಚಿತ್ರಗಳ ಭವಿಷ್ಯವೂ ಆತಂಕದಲ್ಲಿದೆ. ‘ರಾಧೆ ಶ್ಯಾಮ್’ ಸೇರಿದಂತೆ ಇತರ ಹಲವು ಚಿತ್ರತಂಡಗಳು ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿವೆ.
ಬಿಗ್ ಬಜೆಟ್ ಚಿತ್ರಗಳು 2022ರ ಪೂರ್ತಿ ಲೈನ್ಅಪ್ ಆಗಿದ್ದವು. ಆದರೆ 2022ರ ಮೊದಲ ತಿಂಗಳಲ್ಲೇ ಕೊರೊನಾ ಹಾಗೂ ಒಮಿಕ್ರಾನ್ ಪ್ರಭಾವ ಕಾಣಿಸಿರುವುದರಿಂದ ಎಲ್ಲವುಗಳ ಭವಿಷ್ಯವೂ ಅನಿಶ್ಚಿತವಾಗಿದೆ. ಈ ಬಾರಿ ಕೊರೊನಾ ಪ್ರಕರಣಗಳು ಏರಿಕೆಯಾದರೆ ಏನಾಗಬಹುದು ಎಂಬ ಕಲ್ಪನೆ ಯಾರಲ್ಲೂ ಇಲ್ಲ. ಲಸಿಕೆ ನೀಡಿರುವುದರಿಂದ ಪರಿಣಾಮ ಕಡಿಮೆ ಇರಲಿದೆ ಎನ್ನಲಾಗಿದ್ದರೂ ರಾಜ್ಯಗಳು ಕಠಿಣ ನಿಯಮಗಳ ಮೊರೆ ಹೋಗುತ್ತಿವೆ. ಅನಿವಾರ್ಯವಾದರೆ ಲಾಕ್ಡೌನ್ ಮಾಡಬೇಕಾಗುತ್ತದೆ ಎಂದು ಹಲವು ರಾಜ್ಯಗಳು ಎಚ್ಚರಿಕೆ ಕೂಡ ನೀಡಿವೆ.
ಈ ಹಿನ್ನೆಲೆಯಲ್ಲಿ ಬಿಗ್ ಬಜೆಟ್ ಚಿತ್ರಗಳು ತಡವಾದರೆ ಉಳಿದ ಬಿಗ್ ಬಜೆಟ್ ಚಿತ್ರಗಳೂ ದಿನಾಂಕ ಹೊಂದಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕಡಿಮೆ ಬಜೆಟ್ ಚಿತ್ರಗಳಿಗೆ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಈ ಅನಿಶ್ಚಿತತೆ ಬಹಳಷ್ಟು ನಿರ್ಮಾಪಕರಿಗೆ ಓಟಿಟಿ ಮೊರೆಹೋಗುವಂತೆ ಮಾಡಿದೆ.
ಇದನ್ನೂ ಓದಿ:
‘ಎಲ್ಲರೆದುರು ಪ್ರಪೋಸ್ ಮಾಡ್ತಿದ್ದೀನಿ, ಮದುವೆ ಆಗ್ತೀರಾ?’; ನಟಿ ಅಮೀಶಾ ಪಟೇಲ್ ಬೆನ್ನು ಬಿದ್ದ ಉದ್ಯಮಿ
‘2022ರಲ್ಲಿ ಕಡಿಮೆ ಎಫ್ಐರ್ ಬೀಳಲಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’; ದೇವರಲ್ಲಿ ಕಂಗನಾ ವಿಶೇಷ ಪ್ರಾರ್ಥನೆ