ದೆಹಲಿ ಸೆಪ್ಟೆಂಬರ್ 19: ಭೂ ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ನವಾಡದಲ್ಲಿ (Nawada)ಸುಮಾರು 21 ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪರಿಸ್ಥಿತಿ ಪರಿಶೀಲಿಸಲು ನವಾಡಕ್ಕೆ ಭೇಟಿ ನೀಡುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADG) ಕಾನೂನು ಮತ್ತು ಸುವ್ಯವಸ್ಥೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar)ಆದೇಶಿಸಿದ್ದಾರೆ. ಒಂದರ ಹಿಂದೆ ಒಂದರಂತೆ ದುಷ್ಕರ್ಮಿಗಳು ಮನೆಗಳಿಗೆ ಬೆಂಕಿ ಹಚ್ಚಲು ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಂಝಿ ತೋಲಾದಲ್ಲಿ ಈ ಘಟನೆ ನಡೆದಿದ್ದು, ಇದುವರೆಗೆ ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ 15 ಮಂದಿಯನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
“ಮಾಂಜಿ ತೋಲಾದಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಂಜೆ 7.30 ರ ಸುಮಾರಿಗೆ ಕರೆ ಬಂದಿತು. ತಕ್ಷಣ ಪೊಲೀಸರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಸ್ವಲ್ಪ ಸಮಯ ಹಿಡಿಯಿತು. ಗ್ರಾಮಸ್ಥರ ಪ್ರಕಾರ, ರಾತ್ರಿ 7 ಗಂಟೆ ಸುಮಾರಿಗೆ ಜನರ ಗುಂಪು ಮನೆಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿತು ಎಂದು ಅಲ್ಲಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಯ ಮೇಲೆ ಯಾವುದೇ ಸಂಭಾವ್ಯ ಭುಗಿಲು ತಡೆಯಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ನಿರಾಶ್ರಿತರಿಗೆ ಆಹಾರ ಪೊಟ್ಟಣ, ಕುಡಿಯುವ ನೀರು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ನೀಡುತ್ತಿದ್ದೇವೆ. ಸಂತ್ರಸ್ತರಿಗಾಗಿ ತಾತ್ಕಾಲಿಕ ಡೇರೆಗಳನ್ನು ಸ್ಥಾಪಿಸಲಾಗಿದೆ” ಎಂದು ನವಾಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ವರ್ಮಾ ಹೇಳಿದರು. ಅದೇ ವೇಳೆ ಜಾನುವಾರುಗಳನ್ನು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯನ್ನು ನಿರಾಕರಿಸಿದ ವರ್ಮಾ “ಅದನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ” ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತರ ಮೇಲಿನ ಅಪರಾಧವನ್ನು ಖಂಡಿಸಿದ್ದು ಬಿಜೆಪಿ ಮತ್ತು ಅದರ ಎನ್‌ಡಿಎ ಮಿತ್ರಪಕ್ಷಗಳು ಇಂಥಾ ಅಪರಾಧಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ಆರೋಪಿಸಿದರು.
बिहार के नवादा में महादलित टोला पर दबंगों का आतंक NDA की डबल इंजन सरकार के जंगलराज का एक और प्रमाण है।
बेहद निंदनीय है कि करीब 100 दलित घरों में आग लगाई गई, गोलीबारी की गई और रात के अँधेरे में ग़रीब परिवारों का सब कुछ छीन लिया गया।
भाजपा और उसके सहयोगी दलों की दलितों-वंचितों…
— Mallikarjun Kharge (@kharge) September 19, 2024
“ಬಿಹಾರದ ನವಾಡದಲ್ಲಿರುವ ಮಹಾದಲಿತ ಕಾಲೋನಿಯಲ್ಲಿ ನಡೆದಿರುವುದು ರೌಡಿಗಳ ಭಯೋತ್ಪಾದನೆ ಎನ್‌ಡಿಎ ಡಬಲ್ ಎಂಜಿನ್ ಸರ್ಕಾರದ ಜಂಗಲ್ ರಾಜ್‌ಗೆ ಮತ್ತೊಂದು ಪುರಾವೆಯಾಗಿದೆ. ರಾತ್ರಿ ಹೊತ್ತಲ್ಲಿ ಸುಮಾರು 100 ದಲಿತರ ಮನೆಗಳಿಗೆ ಬೆಂಕಿ ಹಚ್ಚಿ, ಗುಂಡು ಹಾರಿಸಿ ಬಡ ಕುಟುಂಬಗಳ ಸರ್ವಸ್ವವನ್ನು ಕಿತ್ತುಕೊಂಡಿರುವುದು ಅತ್ಯಂತ ಖಂಡನೀಯ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ದಲಿತರು ಮತ್ತು ವಂಚಿತರ ಬಗ್ಗೆ ಸಂಪೂರ್ಣ ಅಸಡ್ಡೆ ಹೊಂದಿದ್ದು, ಸಮಾಜ ವಿರೋಧಿ ಅಂಶಗಳ ಪ್ರಚಾರವು ಈಗ ಅದರ ಉತ್ತುಂಗದಲ್ಲಿದೆ. ಪ್ರಧಾನಿ ಮೋದಿ ಎಂದಿನಂತೆ ಮೌನವಾಗಿದ್ದಾರೆ, ಅಧಿಕಾರದ ದುರಾಸೆಯಲ್ಲಿ ನಿತೀಶ್ ನಿರಾತಂಕರಾಗಿದ್ದಾರೆ ಮತ್ತು ಎನ್‌ಡಿಎ ಮಿತ್ರಪಕ್ಷಗಳು ಮೂಕರಾಗಿದ್ದಾರೆ,” ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯು “ಅತ್ಯಂತ ದುಃಖಕರ ಮತ್ತು ಗಂಭೀರವಾಗಿದೆ” ಎಂದು ಹೇಳಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಂತ್ರಸ್ತರ ಪುನರ್ವಸತಿಗೆ ಕರೆ ನೀಡಿದರು. “ಬಿಹಾರದ ನವಡಾದಲ್ಲಿ ಗೂಂಡಾಗಳು ಅನೇಕ ಬಡ ದಲಿತರ ಮನೆಗಳನ್ನು ಸುಟ್ಟುಹಾಕಿ ಅವರ ಜೀವನವನ್ನು ಹಾಳು ಮಾಡಿದ ಘಟನೆ ಅತ್ಯಂತ ದುಃಖಕರ ಮತ್ತು ಗಂಭೀರವಾಗಿದೆ. ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರ ಪುನರ್ವಸತಿಗೆ ಸಂಪೂರ್ಣ ಆರ್ಥಿಕ ಸಹಾಯವನ್ನು ನೀಡಬೇಕು, ”ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ