Shocking News: ಬಾವಿಗೆ ಬಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿ ಪಾಲಾದ 40 ಜನ; ಮೂವರು ಸಾವು, 11 ಮಂದಿ ಕಣ್ಮರೆ
Maharashtra Big Accident: ರಕ್ಷಣಾ ಕಾರ್ಯವನ್ನು ನೋಡಲೆಂದು ಜನ ಬಾವಿಯ ಬಳಿ ಸುತ್ತುವರೆದಿದ್ದಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಿದ್ದು, ಮಣ್ಣು ಕುಸಿದಿದೆ. ಏಕಾಏಕಿ ಮಣ್ಣು ಕುಸಿದಿದ್ದರಿಂದ ತಡೆಗೋಡೆ ಬಳಿ ನಿಂತ 40ಕ್ಕೂ ಹೆಚ್ಚು ಜನ ಬಾವಿ ಪಾಲಾಗಿದ್ದಾರೆ.
ಭೋಪಾಲ್: ಬಾವಿಗೆ ಬಿದ್ದಿದ್ದ ಮಗುವನ್ನು ರಕ್ಷಿಸುವ ಸಂದರ್ಭದಲ್ಲಿ ಮಣ್ಣು ಕುಸಿದು ಸುಮಾರು 40ಕ್ಕೂ ಹೆಚ್ಚು ಜನ ಬಾವಿಗೆ ಬಿದ್ದು, ಮೂವರು ಸಾವಿಗೀಡಾದ ದುರಂತ ಘಟನೆ (Big Accident) ಮಧ್ಯಪ್ರದೇಶದ ವಿದಿಶಾ (Madhya Pradesh – Vidisha) ಜಿಲ್ಲೆಯಲ್ಲಿ ಸಂಭವಿಸಿದೆ. ವಿದಿಶಾ ಜಿಲ್ಲೆಯ ಗಂಜ್ ಬಸೌಡ ಪ್ರದೇಶದಲ್ಲಿ 8 ವರ್ಷದ ಬಾಲಕಿ ನಿನ್ನೆ (ಜುಲೈ 15) ಬಾವಿಗೆ ಬಿದ್ದಿದ್ದು, ತಡರಾತ್ರಿ ವೇಳೆ ಆಕೆಯನ್ನು ರಕ್ಷಿಸಲೆಂದು ಕಾರ್ಯಾಚರಣೆ (Rescue Operation) ನಡೆಸುತ್ತಿದ್ದಾಗಲೇ ಅನಾಹುತ ಘಟಿಸಿದೆ. ರಕ್ಷಣಾ ಕಾರ್ಯವನ್ನು ವೀಕ್ಷಿಸಲೆಂದು ಬಾಯಿಯ ಸುತ್ತ ಜನ ಮುಗಿಬಿದ್ದ ಪರಿಣಾಮ ಅವಘಡ ಸಂಭವಿಸಿದ್ದು, 40 ಅಡಿ ಆಳದ ಬಾವಿಗೆ (Well) 40 ಕ್ಕೂ ಹೆಚ್ಚು ಜನ ಬಿದ್ದಿದ್ದಾರೆ. ಆ ಪೈಕಿ 20ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾದ 11 ಮಂದಿಗಾಗಿ ಎನ್‌ಡಿಆರ್‌ಎಫ್ (NDRF) ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ರಕ್ಷಣಾ ಕಾರ್ಯವನ್ನು ನೋಡಲೆಂದು ಜನ ಬಾವಿಯ ಬಳಿ ಸುತ್ತುವರೆದಿದ್ದಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಿದ್ದು, ಮಣ್ಣು ಕುಸಿದಿದೆ. ಏಕಾಏಕಿ ಮಣ್ಣು ಕುಸಿದಿದ್ದರಿಂದ ತಡೆಗೋಡೆ ಬಳಿ ನಿಂತ 40ಕ್ಕೂ ಹೆಚ್ಚು ಜನ ಬಾವಿ ಪಾಲಾಗಿದ್ದಾರೆ. ಆ ಪೈಕಿ 13 ಜನರನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ 8 ವರ್ಷದ ಬಾಲಕಿ ಹಾಗೂ ನಾಪತ್ತೆಯಾದ ಜನರ ಪರಿಸ್ಥಿತಿ ಬಗ್ಗೆ ಏನೂ ಹೇಳಲಾಗದು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿಸ್ತೃತ ವರದಿ ತರಿಸಿಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಆಳವಾದ ತನಿಖೆಗೆ ಆದೇಶಿಸಿದ್ದಾರೆ. ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರಿಗೆ ಸದರಿ ಘಟನೆಯ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದ್ದು, ಇದೀಗ ರಕ್ಷಣಾ ಕಾರ್ಯ ಮುಂದುವರೆದಿದೆ.
ಸ್ಥಳೀಯರು ಹೇಳಿರುವಂತೆ ಗುರುವಾರ ಸಂಜೆ ವೇಳೆಗೆ ಬಾವಿಯ ಸಮೀಪ ಆಟವಾಡುತ್ತಿದ್ದ ಬಾಲಕಿ ಆಯತಪ್ಪಿಗೆ ಬಾವಿಗೆ ಬಿದ್ದಿದ್ದಾಳೆ. ಈ ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಹರಡುತ್ತಿದ್ದಂತೆಯೇ ಇಡೀ ಗ್ರಾಮಕ್ಕೆ ಗ್ರಾಮವೇ ಬಾವಿಯ ಸುತ್ತ ಜಮಾಯಿಸಿದೆ. ಬಾವಿಯ ತಡೆಗೋಡೆ ಸುತ್ತ ಒತ್ತಡ ಹೆಚ್ಚಾದ ಪರಿಣಾಮ ತಡೆಗೋಡೆ ಮುರಿದು, ಮಣ್ಣು ಕುಸಿದು ಅನಾಹುತ ಘಟಿಸಿದೆ. ಈ ಬಗ್ಗೆ ಮಾತನಾಡಿರುವ ಭೋಪಾಲ್ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಾಯಿ ಮನೋಹರ್ ಕೂಡಾ ಊರವರ ಅಭಿಪ್ರಾಯವನ್ನೇ ಅನುಮೋದಿಸಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಕಾರಣ ಅನಾಹುತ ಸಂಭವಿಸಿದೆ. ಬಾಲಕಿಯನ್ನು ರಕ್ಷಿಸಲು ಹೋಗಿ 40 ಜನ ಬಾವಿಗೆ ಬೀಳುವಂತಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬಾವಿಗೆ ಹಾರಿ ಕುಟುಂಬದ 6 ಮಂದಿ ಆತ್ಮಹತ್ಯೆ; ಮತ್ತೊಂದೆಡೆ ಬಟ್ಟೆ ಒಗೆಯಲು ಹೋಗಿದ್ದ 4 ಸಹೋದರರು ಕೃಷ್ಣಾ ನದಿ ನೀರುಪಾಲು