ದೆಹಲಿ: ದೇಶಾದ್ಯಂತ ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟು ಸಕ್ಕರೆ ಕಾಯಿಲೆಯಂತಹ ರೋಗಗಳಿದ್ದರೆ ಅಂಥವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಸೋಮವಾರದಿಂದ ಈವರೆಗೆ ಕೊರೊನಾ ಲಸಿಕೆ ಪಡೆಯಲು ದೇಶಾದ್ಯಂತ 50 ಲಕ್ಷ ಜನರು CoWIN ತಾಣದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ವೇಳೆ ವೆಬ್ಸೈಟ್ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಎದುರಾಗಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ನೀಡುವ ಕೆಲಸ ಆರಂಭವಾಗಿದೆ. ಈ ವೇಳೆ 2 ಲಕ್ಷ ಜನರಿಗೆ ಈಗಾಗಲೇ ಮೊದಲನೇ ಕೊರೊನಾ ಡೋಸ್ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರ ಸೂಚಿಸಿದ ಮಾನದಂಡಕ್ಕೆ ಅರ್ಹರು ಎನಿಸಿದರೆ ಕೊರೊನಾ ಲಸಿಕೆ ಪಡೆಯಲು cowin.gov.in ವೆಬ್ಸೈಟ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ವೆಬ್ಸೈಟ್ಗೆ ಭೇಟಿ ನೀಡುತ್ತಿದ್ದರೂ ಈ ವರೆಗೆ ವೆಬ್ಸೈಟ್ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.
ಮೊದಲ ಎರಡು ಹಂತಗಳಲ್ಲಿ ದೇಶದಲ್ಲಿ 1,48,55,073 ಕೊವಿಡ್ -19 ಲಸಿಕೆ ನೀಡಲಾಗಿದೆ. ಈ ಪೈಕಿ 67,04,856 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ಮತ್ತು 25, 98,192 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಎರಡನೇ ಹಂತದಲ್ಲಿ ಸಾಕಷ್ಟು ರಾಜಕಾರಣಿಗಳು ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಕೊವಿಡ್-19 ಲಸಿಕೆ ಪಡೆದುಕೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕೊರೊನಾ ಲಸಿಕೆ ಪಡೆದಿದ್ದರು. ಮೇದಾಂತಾ ಆಸ್ಪತ್ರೆಯ ವೈದ್ಯರು ಅಮಿತ್ ಶಾಗೆ ಲಸಿಕೆ ನೀಡಲಾಗಿತ್ತು. ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗಿವೆ. ಅದೇ ರೀತಿ, ಗೃಹ ಸಚಿವ ಅಮಿತ್ ಶಾ ಸಾಕಷ್ಟು ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು.
ಇದನ್ನೂ ಓದಿ: ಕೊರೊನಾ ಲಸಿಕೆಗೆ ‘ತೋಳು ಮಡಚಿದ’ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ