Pahalgam Terror Attack; ಇಂಡಿಗೋ, ಏರ್ ಇಂಡಿಯಾದಿಂದ ಶ್ರೀನಗರದಿಂದ ಹೆಚ್ಚುವರಿ ವಿಮಾನ ಸಂಚಾರ, ಉಚಿತ ಕ್ಯಾನ್ಸಲೇಷನ್ ಸೇವೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಇದೀಗ ಇಂಡಿಗೋ, ಏರ್ ಇಂಡಿಯಾ, ಈಸ್ ಮೈ ಟ್ರಿಪ್ ಕಂಪನಿಗಳು ಈಗಾಗಲೇ ಶ್ರೀನಗರಕ್ಕೆ ಟಿಕೆಟ್ ಬುಕ್ ಮಾಡಿದವರಿಗೆ ಉಚಿತವಾಗಿ ಕ್ಯಾನ್ಸಲೇಷನ್, ಪ್ರಯಾಣದ ಮುಂದೂಡಿಕೆಗೆ ಅವಕಾಶ ಕಲ್ಪಿಸಿವೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನಯಾನ ಸಂಸ್ಥೆಗಳು ಈ ಅವಕಾಶ ಕಲ್ಪಿಸಿವೆ. ಹಾಗೇ, ಶ್ರೀನಗರದಿಂದ ಹೆಚ್ಚುವರಿ ವಿಮಾನಗಳ ಸಂಚಾರವನ್ನು ಕೂಡ ವ್ಯವಸ್ಥೆಗೊಳಿಸಿವೆ. ಏರ್ ಇಂಡಿಯಾ, ಅದರ ಕಡಿಮೆ ವೆಚ್ಚದ ಅಂಗವಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಶ್ರೀನಗರಕ್ಕೆ ವಿಮಾನವನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಉಚಿತ ಕ್ಯಾನ್ಸಲೇಷನ್ ಅವಕಾಶವನ್ನು ನೀಡುತ್ತಿವೆ.

Pahalgam Terror Attack; ಇಂಡಿಗೋ, ಏರ್ ಇಂಡಿಯಾದಿಂದ ಶ್ರೀನಗರದಿಂದ ಹೆಚ್ಚುವರಿ ವಿಮಾನ ಸಂಚಾರ, ಉಚಿತ ಕ್ಯಾನ್ಸಲೇಷನ್ ಸೇವೆ
Indigo

Updated on: Apr 23, 2025 | 4:26 PM

ನವದೆಹಲಿ, ಏಪ್ರಿಲ್ 23: ಏರ್ ಇಂಡಿಯಾ (Air India) ಮತ್ತು ಇಂಡಿಗೋ (IndiGo) ಇಂದು (ಏಪ್ರಿಲ್ 23) ಶ್ರೀನಗರದಿಂದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈಗೆ ಒಟ್ಟು 4 ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸಲಿವೆ. ವಿಮಾನಯಾನ ಸಂಸ್ಥೆಗಳು ಟಿಕೆಟ್ ಮುಂದೂಡಿಕೆ ಮತ್ತು ಕ್ಯಾನ್ಸಲೇಷನ್ ಶುಲ್ಕಗಳನ್ನು ಸಹ ಮನ್ನಾ ಮಾಡಿವೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಸುಂದರವಾದ ಹುಲ್ಲುಗಾವಲಿನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಮತ್ತು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಇಂದು ಶ್ರೀನಗರಕ್ಕೆ ಹೆಚ್ಚುವರಿ ವಿಮಾನಗಳನ್ನು ಘೋಷಿಸಿವೆ.

ಮಂಗಳವಾರ ಮಧ್ಯಾಹ್ನ, ಪಹಲ್ಗಾಮ್‌ನ ಬೈಸರನ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಜನರನ್ನು ಕೊಂದಿದ್ದಾರೆ. ಉಗ್ರರ ದಾಳಿಯ ನಂತರ, ಹಲವಾರು ಪ್ರವಾಸಿಗರು ಕಣಿವೆಯಿಂದ ಹೊರಡಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದಾರೆ. ವಿಮಾನಯಾನ ನಿಯಂತ್ರಕ ಡಿಜಿಸಿಎ, ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಸಿಲುಕಿರುವ ಪ್ರವಾಸಿಗರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.

ಇದನ್ನೂ ಓದಿ
ಕಾಶ್ಮೀರದಲ್ಲಿ ರಕ್ತದೋಕುಳಿ; ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಇದನ್ನೂ ಓದಿ: Video: ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ

“ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ಇಂದು ಶ್ರೀನಗರದಿಂದ ದೆಹಲಿ ಮತ್ತು ಮುಂಬೈಗೆ ಎರಡು ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸಲಿದೆ. ಎರಡು ವಿಮಾನಗಳ ವಿವರಗಳೆಂದರೆ, ಶ್ರೀನಗರದಿಂದ ದೆಹಲಿಗೆ ಬೆಳಿಗ್ಗೆ 11.30 ಮತ್ತು ಶ್ರೀನಗರದಿಂದ ಮುಂಬೈಗೆ ಮಧ್ಯಾಹ್ನ 12 ಗಂಟೆಗೆ ವಿಮಾನದ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ಏರ್ ಇಂಡಿಯಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.


“ಶ್ರೀನಗರಕ್ಕೆ ಮತ್ತು ಅಲ್ಲಿಂದ ನಮ್ಮ ಎಲ್ಲಾ ಇತರ ವಿಮಾನಗಳು ವೇಳಾಪಟ್ಟಿಯ ಪ್ರಕಾರ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಏರ್ ಇಂಡಿಯಾ ಈ ವಲಯಗಳಲ್ಲಿ ಏಪ್ರಿಲ್ 30ರವರೆಗೆ ಆಗಿರುವ ಬುಕಿಂಗ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಉಚಿತ ಮರುಹೊಂದಿಸುವಿಕೆ ಮತ್ತು ರದ್ದತಿಯ ಮೇಲೆ ಪೂರ್ಣ ಮರುಪಾವತಿಯನ್ನು ಸಹ ನೀಡುತ್ತಿದೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಪಹಲ್ಗಾಮ್‌ ದಾಳಿ: ಪತ್ನಿ ಎದುರೇ ಪತಿಯನ್ನು ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಇಂಡಿಗೋ ಕೂಡ ಶ್ರೀನಗರಕ್ಕೆ ಎರಡು ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸುತ್ತಿದೆ. ದೆಹಲಿ ಮತ್ತು ಮುಂಬೈನಿಂದ ತಲಾ ಒಂದು ವಿಮಾನ ಸಂಚರಿಸಲಿದೆ. “ಏಪ್ರಿಲ್ 22ರಂದು ಅಥವಾ ಅದಕ್ಕೂ ಮೊದಲು ಮಾಡಿದ ಬುಕಿಂಗ್‌ಗಳಿಗೆ ಅನ್ವಯವಾಗುವ ಪ್ರಯಾಣದ ಮರುಹೊಂದಿಕೆ ಅಥವಾ ರದ್ದತಿಗೆ ಏಪ್ರಿಲ್ 30ರವರೆಗೆ ವಿನಾಯಿತಿ ನೀಡಿದ್ದೇವೆ” ಎಂದು ಇಂಡಿಗೋ ಹೇಳಿದೆ.


“ಪಹಲ್ಗಾಮ್‌ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಶ್ರೀನಗರಕ್ಕೆ ಮತ್ತು ಅಲ್ಲಿಂದ ಹಾರುವ ತನ್ನ ಅತಿಥಿಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಏಪ್ರಿಲ್ 30ರವರೆಗೆ ಶ್ರೀನಗರದಿಂದ ಅಥವಾ ಶ್ರೀನಗರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಪ್ರಯಾಣಿಸಲು ಬುಕ್ ಮಾಡಿದ ಅತಿಥಿಗಳಿಗೆ ದಿನಾಂಕ ಬದಲಾವಣೆ ಶುಲ್ಕ ಮತ್ತು ದರ ವ್ಯತ್ಯಾಸದ ಸಂಪೂರ್ಣ ಮನ್ನಾದೊಂದಿಗೆ ತಮ್ಮ ಪ್ರಯಾಣವನ್ನು ಮರುಹೊಂದಿಸಲು ಅವಕಾಶ ನೀಡಲಾಗುತ್ತಿದೆ. ಪ್ರಯಾಣಿಕರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಲು ಮತ್ತು ಪೂರ್ಣ ಮರುಪಾವತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶ್ರೀನಗರಕ್ಕೆ ಬೆಂಗಳೂರು, ದೆಹಲಿ, ಹೈದರಾಬಾದ್, ಜಮ್ಮು ಮತ್ತು ಕೋಲ್ಕತ್ತಾ ಈ 5 ಸ್ಥಳಗಳಿಂದ ನೇರ ವಿಮಾನಸೇವೆಯನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ