
ನವದೆಹಲಿ, ಅಕ್ಟೋಬರ್ 19: ಒಐಸಿ (ಇಸ್ಲಾಮಿಕ್ ಸಹಕಾರ ಸಂಸ್ಥೆ) ವೇದಿಕೆಯನ್ನು ಪಾಕಿಸ್ತಾನವು ತನ್ನ ಸ್ವಾರ್ಥ ರಾಜಕೀಯಕ್ಕಾಗಿ ಮತ್ತು ಭಾರತದ ವಿರುದ್ಧ ಅಪಪ್ರಚಾರ ಮಾಡಲು ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ತೀವ್ರವಾಗಿ ಆಕ್ಷೇಪಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಒಐಸಿ ನೀಡಿರುವ ಆಧಾರರಹಿತ ಮತ್ತು ದುರುದ್ದೇಶಪೂರ್ವಕ ಹೇಳಿಕೆಗಳನ್ನು ಭಾರತ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ಪಾಕಿಸ್ತಾನವು ತನ್ನ ಸಂಕುಚಿತ ಅಜೆಂಡಾವನ್ನು ಈಡೇರಿಸಿಕೊಳ್ಳಲು ಒಐಸಿಯಂತಹ ಅಂತಾರಾಷ್ಟ್ರೀಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಾರತ ಕಟುವಾಗಿ ಟೀಕಿಸಿದೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಒಐಸಿಗೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಪಕ್ಷಪಾತ ಧೋರಣೆ ಮತ್ತು ಸ್ವಾರ್ಥ ಹಿತಾಸಕ್ತಿಗಳಿಗೆ ಬಾಗುವ ಮೂಲಕ ಒಐಸಿಯು ತನ್ನ ಸ್ವಂತ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಚ್ಚರಿಸಿದೆ. ಜಾಗತಿಕವಾಗಿ ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದಂತಹ ದೇಶಗಳ ಕೈಗೊಂಬೆಯಾಗಿ ಒಐಸಿ ವರ್ತಿಸುತ್ತಿರುವುದು ಖಂಡನೀಯ ಎಂದು ಭಾರತ ಕಿಡಿಕಾರಿದೆ.
ಭಾರತದ ಸ್ಪಷ್ಟ ನಿಲುವು:
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರ ಆಡಳಿತ ಪ್ರದೇಶಗಳು ಭಾರತದ ಅಭಿಭಾಜ್ಯ ಅಂಗಗಳಾಗಿದ್ದು, ಇಲ್ಲಿನ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳ ಬಗ್ಗೆ ಬೇರೆ ಯಾವುದೇ ಹೊರಗಿನ ಸಂಸ್ಥೆಗಳು ಅಥವಾ ದೇಶಗಳು ಅನಗತ್ಯ ಟೀಕೆ ಮಾಡುವುದು ಅಥವಾ ಹಸ್ತಕ್ಷೇಪ ಮಾಡುವುದನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಭಾರತ ಸರ್ಕಾರ ಪುನರುಚ್ಚರಿಸಿದೆ.
ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು-ಕಾಶ್ಮೀರದಲ್ಲಿ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಸಂಪರ್ಕದ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿಯಾಗಿದ್ದು, ಇದರ ನೇರ ಪ್ರಯೋಜನ ಜನರಿಗೆ ತಲುಪುತ್ತಿದೆ ಎಂದು ಸಚಿವಾಲಯ ಹೇಳಿದೆ. ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪ್ರತಿಭಟನೆ ನಡೆಸುತ್ತಿರುವ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಇಸ್ಲಾಮಾಬಾದ್ ಸರ್ಕಾರ ತೀವ್ರ ಹಿಂಸಾಚಾರ ಮತ್ತು ಭೀಕರ ದೌರ್ಜನ್ಯವೆಸಗಿದೆ. ಎಷ್ಟೇ ಮಾಧ್ಯಮ ನಿರ್ಬಂಧಗಳನ್ನು ಹೇರಿದರೂ ಅಲ್ಲಿ ನಡೆಯುತ್ತಿರುವ ಈ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಭಾರತ ತಿರುಗೇಟು ನೀಡಿದೆ.
ಇಸ್ಲಾಮೋಫೋಬಿಯಾ ಕುರಿತಾದ ದುರುದ್ದೇಶಪೂರ್ವಕ ಆರೋಪಗಳು ಪಾಕಿಸ್ತಾನದ ತಂತ್ರವಾಗಿದೆ. ತನ್ನದೇ ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಶೋಷಣೆ, ಕೋಮು ಹಿಂಸಾಚಾರ, ಆಡಳಿತ ವೈಫಲ್ಯ ಹಾಗೂ ರಾಜಕೀಯ ಆಸ್ಥಿರತೆಯಿಂದ ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಮಾಡುತ್ತಿರುವ ಹತಾಶ ಪ್ರಯತ್ನ ಇದಾಗಿದೆ ಎಂದು ವಿದೇಶಾಂಗ ಸಚಿವಾಲಯ ತರಾಟೆಗೆ ತೆಗೆದುಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ