AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ವಿರುದ್ಧ ಯುದ್ಧವಾದರೆ ಪಾಕಿಸ್ತಾನ ಬೆಂಬಲಿಸುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಹೇಳಿಕೆಗೆ ತೀವ್ರ ಆಕ್ರೋಶ

"ಅಮೆರಿಕ ವಿರುದ್ಧ ಯುದ್ಧವಾದರೆ ಪಾಕಿಸ್ತಾನ ಬೆಂಬಲಿಸುತ್ತೇವೆ" ಎಂಬ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಇದನ್ನು "ಹುಸಿ ರಾಷ್ಟ್ರೀಯತೆ" ಎಂದು ತೀವ್ರವಾಗಿ ಟೀಕಿಸಿವೆ. ನಂತರ, ರಾಥೋಡ್ ಇದು ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಕ್ರೀಡಾ ಮನೋಭಾವದಿಂದ ನೀಡಿದ ಹೇಳಿಕೆ ಎಂದು ಸ್ಪಷ್ಟಪಡಿಸಿದರು. ಮುಂಬರುವ ಉಪಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ.

ಅಮೆರಿಕ ವಿರುದ್ಧ ಯುದ್ಧವಾದರೆ ಪಾಕಿಸ್ತಾನ ಬೆಂಬಲಿಸುತ್ತೇವೆ: ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್ ಹೇಳಿಕೆಗೆ ತೀವ್ರ ಆಕ್ರೋಶ
ಮದನ್ ರಾಥೋಡ್Image Credit source: PTI
ನಯನಾ ರಾಜೀವ್
|

Updated on: Oct 16, 2026 | 12:29 PM

Share

ನವದೆಹಲಿ, ಅಕ್ಟೋಬರ್ 16: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಭಾರೀ ರಾಜಕೀಯ ವಿವಾದದಲ್ಲಿ ಸಿಲುಕಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು (AAP) ಕೇಸರಿ ಪಡೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದಾಗ ರಾಥೋಡ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಪ್ರಶ್ನೆ

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಡಾ. ಶಮಾ ಮೊಹಮ್ಮದ್ ಮಾತನಾಡಿ, “ಪಾಕಿಸ್ತಾನವನ್ನು ಸದಾ ಭಯೋತ್ಪಾದಕ ರಾಷ್ಟ್ರ ಎಂದು ಕರೆಯುವ ಬಿಜೆಪಿಯ ನಾಯಕರು ಈಗ ಪಾಕಿಸ್ತಾನವನ್ನು ಬೆಂಬಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದು ಅವರ ಹುಸಿ ರಾಷ್ಟ್ರೀಯತೆಯನ್ನು ಬಯಲುಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಕ್ಷಣವೇ ಮದನ್ ರಾಥೋಡ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಆಮ್ ಆದ್ಮಿ ಪಕ್ಷದ ಕಿಡಿ:

ರಾಥೋಡ್ ಅವರ ಭಾಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣ ‘ಎಕ್ಸ್​’ ನಲ್ಲಿ ಹಂಚಿಕೊಂಡ ಎಎಪಿ, “ದೇಶದ ಸಾಮಾನ್ಯ ನಾಗರಿಕರು ಸರ್ಕಾರವನ್ನು ಪ್ರಶ್ನಿಸಿದರೆ ಅವರನ್ನು ಪಾಕಿಸ್ತಾನಿಗಳು ಎನ್ನುತ್ತಾರೆ, ಯುವಕರು ಹಕ್ಕೊತ್ತಾಯ ಮಂಡಿಸಿದರೆ ದೇಶದ್ರೋಹಿಗಳು ಎನ್ನುತ್ತಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರೇ ಪಾಕಿಸ್ತಾನದ ಪರ ನಿಲ್ಲುವ ಮಾತನಾಡಿದಾಗ ಮೋದಿಯವರ ದೇಶಭಕ್ತಿ ಎಲ್ಲಿ ಕಣ್ಮರೆಯಾಗುತ್ತದೆ?” ಎಂದು ತರಾಟೆಗೆ ತೆಗೆದುಕೊಂಡಿತು.

ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಇಮ್ರಾನ್ ಹತ್ಯೆ ಶಂಕೆ: ಹಾಡಹಗಲೇ ಬೈಕ್ ಸವಾರನ ಮೇಲೆ ಗುಂಡಿನ ಮಳೆಗರೆದ ಅಪರಿಚಿತ

ಕ್ರಿಕೆಟ್ ಪಂದ್ಯದ ಮಾತು

ಸುದ್ದಿ ಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿದ ಅವರು, “ನಾನು ಮಾತನಾಡಿದ್ದು ಯುದ್ಧದ ಬಗ್ಗೆ ಅಲ್ಲ, ಬದಲಿಗೆ ಕ್ರೀಡೆಯ ಸಂದರ್ಭದಲ್ಲಿ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತಾಗ ಪಟಾಕಿ ಸಿಡಿಸುವವರು ದೇಶಭಕ್ತರಲ್ಲ ಎಂದು ನಾನು ಹೇಳುತ್ತಿದ್ದೆ. ಅದೇ ರೀತಿ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದರೆ ನಾವು ನೆರೆಹೊರೆಯ ಏಷ್ಯಾದ ತಂಡವಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತೇವೆ ಎಂಬ ಅರ್ಥದಲ್ಲಿ ಕ್ರೀಡಾ ಮನೋಭಾವದಿಂದ ಹೇಳಿದ್ದೆ” ಎಂದು ಸ್ಪಷ್ಟಪಡಿಸಿದರು.

ದುರುದ್ದೇಶಪೂರಿತ ಅಪಪ್ರಚಾರ

ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ತಮ್ಮ ಮಾತಿನ ಮೂಲ ಸಂದರ್ಭವನ್ನು ಮರೆಮಾಚಿ, ಸುಳ್ಳು ಮತ್ತು ದುರುದ್ದೇಶಪೂರಿತ ರೀತಿಯಲ್ಲಿ ಪ್ರಚಾರ ಮಾಡುತ್ತಿವೆ ಎಂದು ರಾಥೋಡ್ ಆಕ್ರೋಶ ವ್ಯಕ್ತಪಡಿಸಿದರು. ರಾಜಸ್ಥಾನದ ಹಿರಿಯ ಒಬಿಸಿ ನಾಯಕರಾಗಿರುವ ಮದನ್ ರಾಥೋಡ್ ಅವರನ್ನು ಇತ್ತೀಚೆಗಷ್ಟೇ ರಾಜಸ್ಥಾನ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮತ್ತು ರಾಜ್ಯಸಭಾ ಸಂಸದರನ್ನಾಗಿ ನೇಮಿಸಲಾಗಿತ್ತು. ಮುಂಬರುವ ಉಪಚುನಾವಣೆಗಳ ಹೊಸ್ತಿಲಿನಲ್ಲಿ ಅವರ ಈ ಹೇಳಿಕೆ ಪಕ್ಷಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.

ರಾಷ್ಟ್ರೀಯ ಭದ್ರತೆ, ಗಡಿ ತಂಟೆ ಮತ್ತು ಪಾಕಿಸ್ತಾನದ ವಿಚಾರಗಳನ್ನು ಬಿಜೆಪಿ ಸದಾ ವಿರೋಧ ಪಕ್ಷಗಳ ವಿರುದ್ಧ ಪ್ರಬಲ ಪ್ರಚಾರಾಸ್ತ್ರವಾಗಿ ಬಳಸಿಕೊಳ್ಳುತ್ತಿತ್ತು. ಆದರೆ ಇದೀಗ ಸ್ವತಃ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರೇ ಇಂತಹ ಎಡವಟ್ಟು ಹೇಳಿಕೆ ನೀಡಿರುವುದು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಮುಂಬರುವ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊಸ ಅಸ್ತ್ರವಾಗಿ ಪರಿಣಮಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More