ಲಾಹೋರ್: ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಜಮಾತ್ ಉದ್ ದಾವ (JuD) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ಗೆ ಪಾಕಿಸ್ತಾನ ನ್ಯಾಯಾಲಯ 15 ವರ್ಷಗಳ ಜೈಲು ಹಾಗೂ 2 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದ್ದ ಆರೋಪದಡಿ ಹಫೀಜ್ ಸಯೀದ್ಗೆ ಲಾಹೋರ್ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ATC) ಗುರುವಾರ ಶಿಕ್ಷೆ ನೀಡಿ ತೀರ್ಪು ಹೊರಡಿಸಿದೆ.
ಆದರೆ, ಪಾಕಿಸ್ತಾನ ಈ ಮೂಲಕ ಜಾಗತಿಕ ಹಣಕಾಸು ಕಾರ್ಯಪಡೆಗೆ (FATF) ಹಾಗೂ ಜಗತ್ತಿನ ಇತರ ದೇಶಗಳಿಗೆ, ತಾನು ಕೂಡ ಟೆರರಿಸ್ಟ್ ವಿರೋಧಿ ಎಂಬ ಕಣ್ಕಟ್ಟಿನ ಸಂದೇಶವನ್ನು ನೀಡಲು ಹೊರಟಿದೆ ಎನ್ನಲಾಗುತ್ತಿದೆ. ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹ ನೀಡುವ ಆರೋಪವನ್ನು ಹಲವು ವರ್ಷಗಳಿಂದ ಎದುರಿಸುತ್ತಿರುವ ಪಾಕಿಸ್ತಾನ, ಹಫೀಜ್ ಸಯೀದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದೆ ಎಂಬ ಅಪವಾದವಿದೆ.
ಲಷ್ಕರ್ ಎ ತಯ್ಯಬಾ ಉಗ್ರವಾದಿ ಸಂಘಟನೆಯ ಸ್ಥಾಪಕನೂ ಆಗಿರುವ ಹಫೀಜ್ ಸಯೀದ್ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದನಾ ದಾಳಿಗೆ ಪಾಕಿಸ್ತಾನವು ಬೆಂಬಲ ನೀಡುತ್ತದೆ ಎಂಬ ವಿದೇಶಗಳ ಆರೋಪವನ್ನು ತಣ್ಣಗಾಗಿಸಲು, ಪಾಕಿಸ್ತಾನ ನ್ಯಾಯಾಲಯ ಹೀಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.
ನಾಲ್ಕು ಭಯೋತ್ಪಾದನಾ ದಾಳಿಗಳಿಗೆ ಹಣ ಒದಗಿಸಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಹಫೀಜ್ ಸಯೀದ್ಗೆ ಈ ಹಿಂದೆ 21 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮತ್ತೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದರೆ, ಈತ ಒಟ್ಟು 36 ವರ್ಷಗಳ ಸೆರೆಮನೆವಾಸ ಅನುಭವಿಸಬೇಕಾಗಿದೆ. ಈಗಾಗಲೇ 70 ವರ್ಷ ವಯಸ್ಸಾಗಿರುವ ಭಯೋತ್ಪಾದಕನಿಗೆ ಇನ್ನು 36 ವರ್ಷ ಜೈಲು ಶಿಕ್ಷೆ ಬಾಕಿ ಇದೆ.
ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ
Published On - 11:32 am, Fri, 25 December 20