ನವದೆಹಲಿ: ರಾಜ್ಯಸಭಾ ಅಧಿವೇಶನದಲ್ಲಿ (Rajya Sabha Session) ಕಲಾಪಕ್ಕೆ ಅಡ್ಡಿಪಡಿಸಿದ ಕಾರಣದಿಂದ ವಿರೋಧಪಕ್ಷದ 20 ಸಂಸದರನ್ನು ಅಧಿವೇಶನದಿಂದ ಅಮಾನತು (Suspend) ಮಾಡಲಾಗಿತ್ತು. ಸಂಸದರ ಅಮಾನತು ವಿರೋಧಿಸಿ 50 ಗಂಟೆಗಳ ಕಾಲ ಪ್ರತಿಪಕ್ಷಗಳು ಸಂಸತ್ತಿನ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಬುಧವಾರ ರಾತ್ರಿಯಿಂದಲೇ ಪ್ರತಿಭಟನೆ ಶುರುವಾಗಿದ್ದು, ವಿರೋಧ ಪಕ್ಷದ ನಾಯಕರು ಸಂಸತ್ ಹೊರಗೆ ಸಂಸದರು ಎರಡನೇ ರಾತ್ರಿ ಕಳೆದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೊಳ್ಳೆ ಪರದೆಗಳನ್ನು ತರಿಸಿಕೊಂಡು ಸಂಸದರು ನೆಲದ ಮೇಲೆ ಮಲಗಿರುವ ಫೋಟೋಗಳು ವೈರಲ್ ಆಗಿವೆ.
ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಈ ಫೋಟೋಗಳನ್ನು ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಟ್ವೀಟ್ ಮಾಡಿದ್ದಾರೆ. ಬೆಲೆ ಏರಿಕೆ ಕುರಿತು ಚರ್ಚೆಗೆ ಕೋರಿದ್ದಕ್ಕಾಗಿ ಅಮಾನತುಗೊಂಡಿರುವ ಸಂಸದರ ಅಮಾನತು ರದ್ದುಗೊಳಿಸುವಂತೆ ಅವರು ಸಂಸತ್ನಲ್ಲಿ ಒತ್ತಾಯಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರತಿಭಟನೆ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಈ 50 ಗಂಟೆಗಳ ಸುದೀರ್ಘ ಧರಣಿಯು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಸಂಸತ್ತಿಗೆ ಆಗಮಿಸಿದಾಗ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ನೆನಪಿಸಲು ಬಯಸಿದ ಕಾರಣ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಸಂಸತ್ಗೆ ಆಗಮಿಸಿದ ಮೊದಲ ದಿನ ಪ್ರಧಾನಿ ಮೋದಿ ಸಂಸತ್ನ ಹೊರಗಿರುವ ಮೆಟ್ಟಿಲುಗಳ ಮೇಲೆ ತಮ್ಮ ಹಣೆಯನ್ನು ಒತ್ತಿ ಒಳನಡೆದಿದ್ದರು. ಅಂದು ಅವರು ನೀಡಿದ ಭರವಸೆಯನ್ನು ನಾವು ಈ ಧರಣಿ ಮೂಲಕ ನೆನಪಿಸುತ್ತಿದ್ದೇವೆ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ ಎದುರು 50 ಗಂಟೆಗಳ ಪ್ರತಿಭಟನೆಯಲ್ಲಿ ಮೊದಲ ರಾತ್ರಿ ಕಳೆದ ಸಂಸದರು; ಇಂದು ಬೆಳಗ್ಗೆ ಡಿಎಂಕೆಯಿಂದ ತಿಂಡಿ ವ್ಯವಸ್ಥೆ
ರಾಜ್ಯಸಭಾ ಕಲಾಪದಿಂದ ಸೋಮವಾರ ಮತ್ತು ಮಂಗಳವಾರ ಅಮಾನತುಗೊಂಡಿರುವ 20 ಸಂಸದರಲ್ಲಿ ಟಿಎಂಸಿಯಿಂದ 7, ಡಿಎಂಕೆಯಿಂದ 6, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) 3, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 2 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ದ ತಲಾ ಒಬ್ಬರು ಸೇರಿದ್ದಾರೆ.
Due to heavy rain,50hr dharna has moved from Gandhi statue to #Parliament main entrance
29hrs down. 21hrs to go. Oppn MPs still at Dharna demanding Govt to revoke suspension of (now) 27 MPs & discuss #PriceRise #GST@SanjayAzadSln sings his version of a golden hit.Enjoy video! pic.twitter.com/wWejot3rKO
— Derek O’Brien | ডেরেক ও’ব্রায়েন (@derekobrienmp) July 28, 2022
ನಿನ್ನೆ, ಸಂಸದರಿಗೆ ಡಿಎಂಕೆ ಇಡ್ಲಿಯನ್ನು ನೀಡಿತ್ತು. ಬಳಿಕ ಟಿಎಂಸಿ ಪ್ರತಿಭಟನಾ ನಿರತ ಸಂಸದರಿಗೆ ಫಿಶ್ ಫ್ರೈ ಮತ್ತು ತಂದೂರಿ ಚಿಕನ್ ಅನ್ನು ಬಡಿಸಿತ್ತು. ಗಾಂಧಿ ಪ್ರತಿಮೆ ಎದುರು ಮಾಂಸಾಹಾರ ನೀಡುವುದನ್ನು ವಿರೋಧಿಸಿ ಬಿಜೆಪಿ ವಕ್ತಾರರಾದ ಶೆಹಜಾದ್ ಪೂನಾವಾಲಾ ವಿವಾದ ಸೃಷ್ಟಿಸಿದ್ದರು.
ಮಳೆ ಬರಬಹುದೆಂಬ ಭಯದಿಂದ ಪ್ರತಿಭಟನಾ ನಿರತ ಸಂಸದರು ಟೆಂಟ್‌ಗಾಗಿ ಮನವಿ ಮಾಡಿದರೂ ಆವರಣದೊಳಗೆ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಿರಾಕರಿಸಿದ್ದರು. ಹೀಗಾಗಿ, ಹೊರಾಂಗಣದಲ್ಲೇ ಸಂಸದರು 2 ರಾತ್ರಿ ಕಳೆದಿದ್ದಾರೆ.