ದೆಹಲಿ: ಮುಂಗಾರು ಅಧಿವೇಶನದಲ್ಲಿ ಕಲಾಪ ನಡೆಸಲು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಅವಕಾಶವನ್ನೇ ನೀಡಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಈ ಬಾರಿಯ ಅಧಿವೇಶನದಲ್ಲಿ ಚರ್ಚೆ ನಡೆಸಲು ಅವಕಾಶವೇ ಸಿಗಲಿಲ್ಲ. ಇದಕ್ಕೆ ಪ್ರತಿಪಕ್ಷಗಳ ಅಸಹಕಾರದ ಧೋರಣೆಯೇ ಕಾರಣ ಎಂದು ಅವರು ನೇರ ಆರೋಪ ಮಾಡಿದರು.
ವಿಪಕ್ಷಗಳು ಕಲಾಪ ನಡೆಸಲು ಅವಕಾಶ ನೀಡಲೇ ಇಲ್ಲ. ಅಧಿವೇಶನದ ಮೊದಲ ದಿನದಿಂದಲೇ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದವು. ಸರ್ವಪಕ್ಷ ಸಭೆಯಲ್ಲೂ ಗದ್ದಲ ನಡೆಸುವ ಬಗ್ಗೆ ಚರ್ಚಿಸಿಕೊಂಡಿದ್ದ ಪ್ರತಿಪಕ್ಷಗಳು ಇಡೀ ಕಲಾಪ ನಡೆಯದಂತೆ ಮಾಡಿವೆ. ಅಧಿವೇಶನವನ್ನು ಸಮರ್ಪಕವಾಗಿ ನಡೆಸಲು ಸಹಕರಿಸಬೇಕೆಂದು ನಾವು ಅನೇಕ ಬಾರಿ ವಿಪಕ್ಷಗಳ ಜೊತೆ ಚರ್ಚೆ ನಡೆಸಿದೆವು. ನೂತನ ಸಚಿವರ ಪರಿಚಯ ಮಾಡಿಕೊಡಲು ಅವಕಾಶ ನೀಡುವಂತೆ ಕೋರಿದ್ದೆವು. ಆದರೆ ಅದಕ್ಕೂಅದಕ್ಕೂ ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ ಎಂದು ಜೋಶಿ ಹೇಳಿದರು.
ಪ್ರತಿಪಕ್ಷಗಳ ಬೇಡಿಕೆಯಂತೆ ಬೆಲೆ ಏರಿಕೆ ಸೇರಿ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಒಪ್ಪಿಕೊಂಡಿದ್ದೆವು. ಆದರೂ ಕಲಾಪ ನಡೆಸಲು ಅವರು ಅವಕಾಶ ಮಾಡಿಕೊಡಲಿಲ್ಲ. ಸಂಸತ್ ಕಲಾಪ ನಡೆಯದಂತೆ ಮಾಡಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ನಿರ್ಧರಿಸಿದ್ದವು. ಚರ್ಚೆಗೆ ನಾವು ತಯಾರಿದ್ದೇವೆ ಎಂದರೂ ವಿಪಕ್ಷಗಳು ಒಪ್ಪಲಿಲ್ಲ. ರಾಜ್ಯಸಭೆಯಲ್ಲಿ ಗ್ಲಾಸ್ ಒಡೆದು ಒಳಬರುವ ಪ್ರಯತ್ನ ಮಾಡಿದರು. ಈ ವೇಳೆ ಮಹಿಳಾ ಸಿಬ್ಬಂದಿ ಗಾಯಾಗೊಂಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರೈತರ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮೇಜಿನ ಮೇಲೆ ಕುಳಿತು ಗದ್ದಲ ಎಬ್ಬಿಸಲಾಯಿತು. ಸಂಸತ್ ಒಳಗೆ ವಿಡಿಯೊ ಚಿತ್ರೀಕರಣಕ್ಕೆ ಅವಕಾಶವಿಲ್ಲದಿದ್ದರೂ ಅದನ್ನು ವಿಡಿಯೊ ಚಿತ್ರಿಕರಣ ಮಾಡಿ ಮಾಧ್ಯಮಗಳಿಗೆ ಹರಿಬಿಡಲಾಯಿತು. ನಾವು ಸೋಮವಾರದವರೆಗೂ ಅಧಿವೇಶನ ಮುಂದುವರಿಸಲು ತಯಾರಿದ್ದೆವು. ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಅವಕಾಶ ಕೋರಿದ್ದೆವು. ಆದರೆ ಅವರು ಬೆದರಿಕೆಯೊಡ್ಡಿದರು ಎಂದು ವಿವರಿಸಿದರು.
ಈಗ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಕೊಲೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಅವರು ಅವರ ಪಕ್ಷ ಏನು ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ರಾಜ್ಯಸಭಾಧ್ಯಕ್ಷರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜನರು ಪಶ್ಚಿಮ ಬಂಗಾಳದ ರೀತಿಯಲ್ಲೇ ಕಾಂಗ್ರೆಸ್ಗೆ ಮುಂದೆ ಪಾಠ ಕಲಿಸಲಿದ್ದಾರೆ. ಸರ್ಕಾರ ಈಗಲೂ ವಿಪಕ್ಷಗಳ ಸಲಹೆ ಪಡೆಯಲು ಸಿದ್ಧವಿದೆ ಎಂದು ಘೋಷಿಸಿದರು.
ಬಿಜೆಪಿಗೆ ದೇಶದಲ್ಲಿ ಸಿಗುತ್ತಿರುವ ಮನ್ನಣೆಯನ್ನು, 2014 ಮತ್ತು 2019ರಲ್ಲಿ ದೇಶದಲ್ಲಿ ಬಿಜೆಪಿ ಸಿಕ್ಕ ಮನ್ನಣೆಯನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ. ಅಧಿಕಾರ ಎನ್ನುವುದು ತಮಗೆ ಜನ್ಮದತ್ತವಾಗಿ ಬಂದಿದೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ರಾಜ್ಯಸಭೆಯಲ್ಲಿನ ಘಟನೆಗೆ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಸಚಿವ ಜೋಶಿ ಆಗ್ರಹಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
(Parliamentary Affairs Minister Pralhad Joshi Alleges on Opposition Parties for Not Letting To Run Session)
ಇದನ್ನೂ ಓದಿ: ರಾಜ್ಯಸಭೆಗೆ ಗೈರಾದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಪ್ರಧಾನಿ ಮೋದಿ; ಹೆಸರು ನೀಡುವ ಜವಾಬ್ದಾರಿ ಪ್ರಲ್ಹಾದ್ ಜೋಶಿಯವರದ್ದು..
ಇದನ್ನೂ ಓದಿ: ವಿಮಾ ಮಸೂದೆ ಚರ್ಚೆಗೆ ಒತ್ತಾಯಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ: ಶರದ್ ಪವಾರ್