ಲಂಡನ್ನಲ್ಲಿ ಸ್ವಾಸರಿ-ಕೊರೊನಿಲ್ ಕಿಟ್ ಅನಧಿಕೃತ ಮಾರಾಟ; ಪ್ರಯೋಜನವಿಲ್ಲದ ಮಾತ್ರೆಗಳು ಎಂದ ಲ್ಯಾಬ್ ವರದಿ
ಬರ್ಮಿಂಗ್ಹ್ಯಾಂ ಯೂನಿವರ್ಸಿಟಿಯ ಲ್ಯಾಬ್ನಲ್ಲಿ ಕೊರೊನಿಲ್-ಸ್ವಾಸರಿ ಮಾತ್ರೆಗಳನ್ನು ಪರೀಕ್ಷಿಸಿಲಾಗಿದ್ದು, ಇದರಲ್ಲಿ ಸಸ್ಯಮೂಲ ಪದಾರ್ಥಗಳನ್ನು ಬಳಸಲಾಗಿದೆ ಎಂಬುದು ಸಾಬೀತಾಗಿದೆ. ಆದರೆ ಈ ಪದಾರ್ಥಗಳು ಕೊರೊನಾ ವಿರುದ್ಧ ಹೋರಾಡುವುದಿಲ್ಲ ಎಂದು ಲ್ಯಾಬ್ ರಿಪೋರ್ಟ್ ಸ್ಪಷ್ಟಪಡಿಸಿದೆ.
ಲಂಡನ್: ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದ ದಿನಗಳಲ್ಲಿ ಕೊರೊನಿಲ್ ಮತ್ತು ಸ್ವಾಸರಿ ಎಂಬ ಹೆಸರಿನ ಮಾತ್ರೆಗಳನ್ನು ತಯಾರಿಸಿದ್ದ ಪತಂಜಲಿ ಸಂಸ್ಥೆ, ಇದು ಕೊರೊನಾವನ್ನು ಸಂಪೂರ್ಣ ಗುಣಪಡಿಸುತ್ತದೆ ಎಂದು ಹೇಳಿತ್ತು. ಆದರೆ ನಂತರ ಅದು ವಿವಾದಕ್ಕೂ ಕಾರಣವಾಗಿ ಮಾರಾಟಕ್ಕೆ ಆಯುಷ್ ಇಲಾಖೆ ತಡೆ ನೀಡಿತ್ತು. ಬಳಿಕ. ಈ ಔಷಧವನ್ನು ಕೊರೊನಾ ಗುಣಪಡಿಸುತ್ತದೆ ಎಂಬ ಪ್ರಚಾರ ಮಾಡುವಂತಿಲ್ಲ, ಬದಲಿಗೆ ರೋಗನಿರೋಧಕ ಶಕ್ತಿ ಉತ್ತೇಜಕ ಎಂದಷ್ಟೇ ಪ್ರಚಾರ ಮಾಡಿ, ಮಾರಾಟ ಮಾಡಬಹುದು ಎಂದು ಖಡಾಖಂಡಿತವಾಗಿ ಸೂಚನೆ ನೀಡಿತ್ತು.
ಅದಾದ ಬಳಿಕ ಪತಂಜಲಿ ತನ್ನ ಕೊರೊನಿಲ್ ಮತ್ತು ಸ್ವಾಸರಿ ಮಾತ್ರೆಗಳನ್ನು ಇಮ್ಯೂನಿಟಿ ಬೂಸ್ಟರ್ (ರೋಗನಿರೋಧಕ ಶಕ್ತಿ ಉತ್ತೇಜಕ) ಎಂದೇ ಹೇಳಿ ಮಾರಾಟ ಮಾಡುತ್ತಿದೆ. ಇದು ಬರೀ ಭಾರತದಲ್ಲಿ ಮಾತ್ರವಲ್ಲ. ಲಂಡನ್ನಲ್ಲೂ ಭರ್ಜರಿ ಮಾರಾಟವಾಗುತ್ತಿದೆ. ಈ ಬಗ್ಗೆ ಬಿಬಿಸಿ ವರದಿ ಮಾಡಿದೆ.
ಏಷ್ಯಾದ ಜನರು ಪ್ರಧಾನವಾಗಿ ಇರುವ ಎಲ್ಲ ಪ್ರದೇಶಗಳ ಹಲವು ಅಂಗಡಿಗಳಲ್ಲಿ ಕೊರೊನಿಲ್ ಕಿಟ್ ಮಾರಾಟವೂ ಅಧಿಕವಾಗಿದೆ. ಈ ಮಾತ್ರೆಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ, ಉಸಿರಾಟಕ್ಕೆ ತೊಂದರೆ ಉಂಟುಮಾಡುವ ಸೋಂಕಿನ ವಿರುದ್ಧ ಹೋರಾಡುತ್ತವೆ ಎಂದು ಕಿಟ್ ತಯಾರಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಕೊರೊನಿಲ್-ಸ್ವಾಸರಿ ಮಾತ್ರೆಗಳಲ್ಲಿ ಕೊರೊನಾ ವಿರುದ್ಧ ಹೋರಾಡುವ ಯಾವುದೇ ಶಕ್ತಿಯೂ ಇಲ್ಲ ಎಂಬುದು ಲ್ಯಾಬ್ ಟೆಸ್ಟ್ನಲ್ಲಿ ಸಾಬೀತಾಗಿದೆ ಎಂದು ಬಿಬಿಸಿ ಹೇಳಿದೆ.
ಕೊರೊನಾ ವಿರುದ್ಧ ಹೋರಾಡೋಲ್ಲ ಬರ್ಮಿಂಗ್ಹ್ಯಾಂ ಯೂನಿವರ್ಸಿಟಿಯ ಲ್ಯಾಬ್ನಲ್ಲಿ ಕೊರೊನಿಲ್-ಸ್ವಾಸರಿ ಮಾತ್ರೆಗಳನ್ನು ಪರೀಕ್ಷಿಸಿಲಾಗಿದ್ದು, ಇದರಲ್ಲಿ ಸಸ್ಯಮೂಲ ಪದಾರ್ಥಗಳನ್ನು ಬಳಸಲಾಗಿದೆ ಎಂಬುದು ಸಾಬೀತಾಗಿದೆ. ಆದರೆ ಈ ಪದಾರ್ಥಗಳು ಕೊರೊನಾ ವಿರುದ್ಧ ಹೋರಾಡುವುದಿಲ್ಲ ಎಂದು ಲ್ಯಾಬ್ ರಿಪೋರ್ಟ್ ನೀಡಿದ್ದಾಗಿ ಹೇಳಲಾಗಿದೆ.
ಇನ್ನು ಲಂಡನ್ನ ಕೆಲವು ಅಂಗಡಿಗಳು ಪತಂಜಲಿ ಬಗ್ಗೆ ಭರ್ಜರಿ ಪ್ರಚಾರ ನೀಡುತ್ತಿವೆ. ತಮ್ಮ ವೆಬ್ಸೈಟ್ಗಳಲ್ಲೂ ಕೊರೊನಿಲ್ ಕಿಟ್ ಆ್ಯಡ್ಗಳನ್ನು ನೀಡುತ್ತಿವೆ. ಆದರೆ ಬ್ರಿಟಿಷ್ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣಾ ಏಜೆನ್ಸಿ (MHRA), ತಾವು ಪತಂಜಲಿಯ ಸ್ವಾಸರಿ-ಕೊರೊನಿಲ್ ಕಿಟ್ ಮಾರಾಟಕ್ಕೆ ಇದುವರೆಗೂ ಅನುಮೋದನೆ ನೀಡಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಲಂಡನ್ನ ಯಾವುದೇ ಮಾರುಕಟ್ಟೆಯಲ್ಲಿ ಅನಧಿಕೃತ ಔಷಧಗಳ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 3.05ಲಕ್ಷ; ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ