Patiala Violence ಪಟಿಯಾಲ ಘರ್ಷಣೆಯ ಮಾಸ್ಟರ್ ಮೈಂಡ್ ಬರ್ಜಿಂದರ್ ಸಿಂಗ್ ಪರ್ವಾನಾ ಮೊಹಾಲಿಯಲ್ಲಿ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: May 01, 2022 | 1:43 PM

ಪಟಿಯಾಲದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕ (ಪಟಿಯಾಲ ಶ್ರೇಣಿ) ಮುಖ್ವಿಂದರ್ ಸಿಂಗ್ ಚ್ಚಿನಾ, "ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಿಂದ ಬಂಧಿಸಲಾಗಿದೆ" ಎಂದು ಹೇಳಿದರು.

Patiala Violence ಪಟಿಯಾಲ ಘರ್ಷಣೆಯ ಮಾಸ್ಟರ್ ಮೈಂಡ್ ಬರ್ಜಿಂದರ್ ಸಿಂಗ್ ಪರ್ವಾನಾ ಮೊಹಾಲಿಯಲ್ಲಿ ಬಂಧನ
ಬರ್ಜಿಂದರ್ ಸಿಂಗ್ ಪರ್ವಾನಾ
Follow us on

ಪಟಿಯಾಲ: ಪಟಿಯಾಲದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ (Patiala clash) ಹಿಂದಿನ ಮಾಸ್ಟರ್ ಮೈಂಡ್ ಮತ್ತು ಮುಖ್ಯ ಸಂಚುಕೋರ ಬರ್ಜಿಂದರ್ ಸಿಂಗ್ ಪರ್ವಾನಾ (Barjinder Singh Parwana) ಅವರನ್ನು ಬಂಧಿಸಲಾಗಿದೆ ಎಂದು ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಎಂಎಸ್ ಚ್ಚಿನಾ ಭಾನುವಾರ ತಿಳಿಸಿದ್ದಾರೆ. ಪರ್ವಾನಾನ್ನು ಮೊಹಾಲಿಯಿಂದ ಬಂಧಿಸಲಾಗಿದೆ. ಶುಕ್ರವಾರ “ಖಲಿಸ್ತಾನ್ ವಿರೋಧಿ”  (Anti-Khalistan)ಮೆರವಣಿಗೆಗೆ ಕರೆ ನೀಡಿದ್ದ ಶಿವಸೇನಾದ (ಬಾಳ್ ಠಾಕ್ರೆ) ಸದಸ್ಯರು ಮತ್ತು ಸಿಖ್ ಕಾರ್ಯಕರ್ತರು, ನಿಹಾಂಗ್‌ಗಳ ನಡುವೆ ಕಾಳಿ ಮಾತಾ ದೇವಸ್ಥಾನದ ಹೊರಗೆ ಘರ್ಷಣೆ ನಡೆದಿತ್ತು. ಈ ನಡುವೆ ಎರಡೂ ಕಡೆಯವರು ಕಲ್ಲು ತೂರಾಟ ಮಾಡಿದ್ದರು. ಈ ಘಟನೆ ವೇಳೆ  ಪೊಲೀಸ್ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.  ಪಟಿಯಾಲದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕ (ಪಟಿಯಾಲ ಶ್ರೇಣಿ) ಮುಖ್ವಿಂದರ್ ಸಿಂಗ್ ಚ್ಚಿನಾ, “ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಿಂದ ಬಂಧಿಸಲಾಗಿದೆ” ಎಂದು ಹೇಳಿದರು. ಹೆಚ್ಚಿನ ವಿಚಾರಣೆಗಾಗಿ ಪರ್ವಾನಾ ಅವರನ್ನು ಪಟಿಯಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದಿದ್ದಾರೆ ಚ್ಚಿನಾ. ಪಟಿಯಾಲ ರಾಜಪುರ ನಿವಾಸಿಯಾಗಿರುವ ಪರ್ವಾನಾ ಶುಕ್ರವಾರದ ಘಟನೆಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ.


ಹೊಸ ಎಎಪಿ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ನಡೆದ ಮೊದಲ ಹಿಂಸಾಚಾರ ಇದಾಗಿದೆ. ಶುಕ್ರವಾರ ಸಂಜೆ, ಮುಂಬೈನಲ್ಲಿರುವ ಶಿವಸೇನಾ ನಾಯಕತ್ವವು ತನ್ನ ಪಂಜಾಬ್ ಘಟಕಕ್ಕೆ ಘರ್ಷಣೆಯಲ್ಲಿ ಭಾಗಿಯಾಗಿರುವ ಪಕ್ಷಕ್ಕೆ ಸಂಬಂಧಿಸಿದ ಎಲ್ಲರ ವಿರುದ್ಧ “ಕಠಿಣ ಕ್ರಮ” ತೆಗೆದುಕೊಳ್ಳುವಂತೆ ಸೂಚಿಸಿತು. ಪಂಜಾಬ್ ಘಟಕದ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಖಲಿಸ್ತಾನ್ ಮುರ್ದಾಬಾದ್” ಎಂಬ ಮೆರವಣಿಗೆಯನ್ನು ಮುನ್ನಡೆಸಿದ್ದ ಸ್ಥಳೀಯ ನಾಯಕ ಹರೀಶ್ ಸಿಂಗ್ಲಾ ಅವರನ್ನು ಹೊರಹಾಕಲಾಗಿದೆ ಎಂದು ತಿಳಿಸಿದೆ.

ಸಿಂಗ್ಲಾ ಅವರನ್ನು ನಂತರ ಐಪಿಸಿ ಸೆಕ್ಷನ್ 153-ಎ (ದ್ವೇಷ ಉತ್ತೇಜಿಸುವುದು), 186 (ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 188 (ಅಧಿಕೃತ ಆದೇಶಗಳನ್ನು ಪಾಲಿಸದಿರುವುದು) ಮತ್ತು 353 (ಸಾರ್ವಜನಿಕ ಸೇವಕರನ್ನು ತಡೆಯಲು ಹಲ್ಲೆ) ಅಡಿಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಬಂಧಿಸಲಾಗಿದೆ. ಹರೀಶ್ ಸಿಂಗ್ಲಾ ಸಹಚರರಾಗಿರುವ ಶಂಕರ್ ಭಾರದ್ವಾಜ್ ಮತ್ತು ಒಬ್ಬ ಜಗ್ಗಿ ಪಂಡಿತ್ ಅವರನ್ನು ಸಹ ಬಂಧಿಸಲಾಗಿದೆ ಎಂದು ಚ್ಚಿನಾ ಹೇಳಿದ್ದಾರೆ  .ಶುಕ್ರವಾರದ ಘಟನೆಗೆ ಸಂಬಂಧಿಸಿದಂತೆ ಸಿಂಗ್ಲಾ, ದಲ್ಜೀತ್ ಸಿಂಗ್ ಮತ್ತು ಕುಲದೀಪ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದರು. ಈ ಪ್ರಕರಣದಲ್ಲಿ ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಒಟ್ಟು 25 ಮಂದಿಯನ್ನು ಹೆಸರಿಸಲಾಗಿದೆ. ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಯಾರಾದರೂ ಪ್ರಯತ್ನಿಸುತ್ತಿರುವುದು ಕಂಡುಬಂದರೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಚ್ಚಿನಾ ಭಾನುವಾರ ಹೇಳಿದ್ದಾರೆ.

ಘರ್ಷಣೆಯಲ್ಲಿ ಭಾಗಿಯಾಗಿರುವ ಎರಡೂ ಕಡೆಯವರ ದೂರಿನ ಮೇರೆಗೆ “ಅಪರಿಚಿತ ವ್ಯಕ್ತಿಗಳ” ವಿರುದ್ಧ ಕೊಲೆ ಯತ್ನ (IPC ಸೆಕ್ಷನ್ 307) ಸೇರಿದಂತೆ ವಿವಿಧ ಆರೋಪಗಳ ಮೇಲೆ ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Sun, 1 May 22