ಪಂಜಾಬ್‌ನ ಪಟಿಯಾಲಾದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ (Patiala Clashes) ಸಂಭವಿಸಿದ ಒಂದು ದಿನದ ನಂತರ, ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜತೆಗೆ ಮೂವರು ಹಿರಿಯ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ರಾಕೇಶ್ ಅಗರ್ವಾಲ್, ಎಸ್‌ಎಸ್‌ಪಿ ನಾನಕ್ ಸಿಂಗ್ ಮತ್ತು ಎಸ್‌ಪಿ ಸಿಟಿ ಹರ್ಪಾಲ್ ಸಿಂಗ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಹೇಳಿಕೆಯಲ್ಲಿ, ಮುಖ್ವಿಂದರ್ ಸಿಂಗ್ ಚಿನ್ನಾ ಅವರನ್ನು ಪಟಿಯಾಲಾದ ಹೊಸ ಐಜಿಯನ್ನಾಗಿ ಮತ್ತು ದೀಪಕ್ ಪಾರಿಕ್ ಮತ್ತು ವಜೀರ್ ಸಿಂಗ್ ಅವರನ್ನು ಕ್ರಮವಾಗಿ ಪಟಿಯಾಲದ ಎಸ್‌ಎಸ್‌ಪಿ ಮತ್ತು ಎಸ್‌ಪಿಯಾಗಿ ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣಗಳನ್ನು ತಿಳಿಸುತ್ತಾ, ಇತ್ತೀಚಿನ ಅಹಿತಕರ ಘಟನೆಗಳಿಂದಾಗಿ ಪಟಿಯಾಲ ಜಿಲ್ಲೆಯ ವ್ಯಾಪ್ತಿಯಲ್ಲಿ ಉದ್ವಿಗ್ನತೆ, ಮಾನವ ಜೀವ ಮತ್ತು ಆಸ್ತಿಗೆ ಅಪಾಯ, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ತಪ್ಪು ಮಾಹಿತಿಯ ಹರಡುವಿಕೆಯನ್ನು ನಿಲ್ಲಿಸಲು ‘ರಾಷ್ಟ್ರವಿರೋಧಿ ಮತ್ತು ಸಮಾಜವಿರೋಧಿ ಗುಂಪುಗಳು ಮತ್ತು ಚಟುವಟಿಕೆಗಳನ್ನು ತಡೆಯಲು ಹಾಗೂ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು, ಯಾವುದೇ ಜೀವಹಾನಿ ಅಥವಾ ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿಯಾಗದಂತೆ ತಡೆಯಲು’ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
‘ಎಲ್ಲಾಸ ಮೊಬೈಲ್ ಇಂಟರ್ನೆಟ್ ಸೇವೆಗಳು (2G/3G/4G/CDMA), ಎಲ್ಲಾ SMS ಸೇವೆಗಳು ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಶನಿವಾರ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಧ್ವನಿ ಕರೆಗಳ ಸೇವೆ ಲಭ್ಯವಿದೆ.
ಮಾರ್ಚ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಅಧಿಕಾರ ವಹಿಸಿಕೊಂಡ ನಂತರ ರಾಜ್ಯ ಕಂಡ ಮೊದಲ ಪ್ರಮುಖ ಘಟನೆ ಇದಾಗಿದೆ. ಶುಕ್ರವಾರ ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿ, ‘‘ಪಟಿಯಾಲದಲ್ಲಿ ನಡೆದ ಘರ್ಷಣೆಯ ಘಟನೆಯು ಅತ್ಯಂತ ದುರದೃಷ್ಟಕರ. ನಾನು ಡಿಜಿಪಿ ಜೊತೆ ಮಾತನಾಡಿದ್ದು, ಆ ಪ್ರದೇಶದಲ್ಲಿ ಈಗ ಶಾಂತಿ ನೆಲೆಸಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ’’ ಎಂದಿದ್ದರು.
ಖಲಿಸ್ತಾನ್ ವಿರೋಧಿ ರ್ಯಾಲಿಯಲ್ಲಿ ಬಲಪಂಥೀಯ ಗುಂಪು ಮತ್ತು ಸಿಖ್ ಮೂಲಭೂತವಾದಿಗಳ ನಡುವಿನ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದರಿಂದ ಶುಕ್ರವಾರದಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ನಗರದ ಕಾಳಿದೇವಿ ದೇವಸ್ಥಾನದ ಬಳಿ ಘರ್ಷಣೆ ನಡೆದಿತ್ತು.
ಎಎನ್ಐ ಹಂಚಿಕೊಂಡ ಎರಡು ಗುಂಪುಗಳ ನಡುವಿನ ಘರ್ಷಣೆಯ ವಿಡಿಯೋ:
#WATCH | Punjab: A clash broke out between two groups near Kali Devi Mandir in Patiala today.
Police personnel deployed at the spot to maintain law and order situation. pic.twitter.com/yZv2vfAiT6
— ANI (@ANI) April 29, 2022
ಶಿವಸೇನೆಯೊಂದಿಗೆ ಸಂಬಂಧ ಹೊಂದಿಲ್ಲದ ಬಲಪಂಥೀಯ ಗುಂಪಾದ ಶಿವಸೇನಾ (ಬಾಲ್ ಠಾಕ್ರೆ) ಸದಸ್ಯರು ಆರ್ಯ ಸಮಾಜ ಚೌಕ್‌ನಿಂದ ಕಾಳಿ ದೇವಿ ದೇವಸ್ಥಾನದವರೆಗೆ ‘ಖಲಿಸ್ತಾನ್ ಮುರ್ದಾಬಾದ್’ ಮೆರವಣಿಗೆಯನ್ನು ಆಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಘಟನೆಯ ಮುಖಂಡ ಹರೀಶ್ ಸಿಂಗ್ಲಾ ಅವರನ್ನು ನಂತರ ಬಂಧಿಸಲಾಗಿದೆ.
ಇನ್ನೂ ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Patiala Violence ಖಲಿಸ್ತಾನ್ ವಿರೋಧಿ ಮೆರವಣಿಗೆಗೆ ಕರೆ ನೀಡಿದ ಹರೀಶ್ ಸಿಂಗ್ಲಾ ಬಂಧನ; ಪಕ್ಷದಿಂದ ಹೊರಹಾಕಿದ ಪಂಜಾಬ್ ಶಿವಸೇನಾ
Patiala Violence ಪಟಿಯಾಲದಲ್ಲಿ ಶಿವಸೇನಾ ಮತ್ತು ಖಲಿಸ್ತಾನ್ ಬೆಂಬಲಿಗರ ನಡುವೆ ಘರ್ಷಣೆ; ನಾಳೆವರೆಗೆ ಕರ್ಫ್ಯೂ