Patiala Violence ಪಟಿಯಾಲದಲ್ಲಿ ಶಿವಸೇನಾ ಮತ್ತು ಖಲಿಸ್ತಾನ್ ಬೆಂಬಲಿಗರ ನಡುವೆ ಘರ್ಷಣೆ; ನಾಳೆವರೆಗೆ ಕರ್ಫ್ಯೂ
ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ವಿರುದ್ಧ ಇಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಎರಡು ಗುಂಪುಗಳು ಘರ್ಷಣೆಗೊಂಡ ನಂತರ ಪಂಜಾಬ್‌ನ ಪಟಿಯಾಲದಲ್ಲಿ ಶುಕ್ರವಾರ ಸಂಜೆ 7 ರಿಂದ ಶನಿವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ.
ಪಟಿಯಾಲ: ಪಂಜಾಬ್‌ನ ಪಟಿಯಾಲದಲ್ಲಿ(Patiala) ಖಲಿಸ್ತಾನಿ ಪರ ಗುಂಪುಗಳ (pro-Khalistani )ವಿರುದ್ಧ ಹರೀಶ್ ಸಿಂಗ್ಲಾ ನೇತೃತ್ವದ ಶಿವಸೇನಾ (Shiv Sena) (ಬಾಲ್ ಠಾಕ್ರೆ) ಕರೆ ನೀಡಿದ್ದು, ಘರ್ಷಣೆ ತಪ್ಪಿಸಲು ಕಾಳೀಮಠ ದೇಗುಲದ ಹೊರಗೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದು ಪಟಿಯಾಲ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ರಾಕೇಶ್ ಅಗರ್ವಾಲ್ ಹೇಳಿದ್ದಾರೆ. “ಕೆಲವು ಪ್ರತಿಭಟನಾಕಾರರ ಮೇಲೆ ದಾಳಿ ಮಾಡಲಾಗಿದೆ ಎಂಬ ವದಂತಿಗಳ ನಂತರ ಉದ್ವಿಗ್ನತೆ ಪ್ರಾರಂಭವಾಯಿತು ಎಂದಿದ್ದಾರೆ ಅವರು. ಶಿವಸೇನಾ ನೀಡಿದ ಮೆರವಣಿಗೆಯನ್ನು ಎದುರಿಸಲು ಮೊದಲು ದುಖ್ ನಿವಾರಣ್ ಸಾಹಿಬ್ ಗುರುದ್ವಾರದಲ್ಲಿ ನಿಹಾಂಗ್‌ಗಳು ಜಮಾಯಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಂತೆ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುತ್ತಾ ಅವರು ದೇವಸ್ಥಾನದ ಕಡೆಗೆ ಮೆರವಣಿಗೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಹಾಂಗ್‌ಗಳು ದೇವಸ್ಥಾನದ ಕಡೆಗೆ ಮೆರವಣಿಗೆ ನಡೆಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಪಟಿಯಾಲ ಪೊಲೀಸ್‌ನ ಸ್ಟೇಷನ್ ಹೌಸ್ ಆಫೀಸರ್ ಕೈಗೆ ಸಣ್ಣ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದಲ್ಲಿ ಪೊಲೀಸರು ಧ್ವಜ ಮೆರವಣಿಗೆ ನಡೆಸುತ್ತಿದ್ದು, ಇತರೆ ಜಿಲ್ಲೆಗಳಿಂದ ಹತ್ತು ಕಂಪನಿ ಪೊಲೀಸ್ ಪಡೆಯನ್ನು ಕೋರಲಾಗಿದೆ ಎಂದು ಐಜಿ ತಿಳಿಸಿದ್ದಾರೆ.
#UPDATE | Curfew imposed in Patiala from 7 pm today, 29th April to 6 am tomorrow, 30th April. This comes in wake of the clash here earlier today.#Punjab https://t.co/aMIDCY5X1H
— ANI (@ANI) April 29, 2022
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯನ್ನು “ಅತೀ ದುರದೃಷ್ಟಕರ” ಎಂದು ಕರೆದಿದ್ದಾರೆ. “ನಾನು ಡಿಜಿಪಿ ಜೊತೆ ಮಾತನಾಡಿದ್ದೇನೆ, ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಲಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.
ದೇವಾಲಯದ ಒಳಗೆ ಹಾಜರಿದ್ದ ಸಿಖ್ ಕಾರ್ಯಕರ್ತರು ಹಾಗೂ ಹಿಂದೂ ಮುಖಂಡರು ಕಲ್ಲು ತೂರಾಟ ನಡೆಸಿದ ವರದಿಗಳು ಬಂದಿದ್ದು, ಸಿಖ್ ಪ್ರತಿಭಟನಾಕಾರರು ಪ್ರವೇಶಿಸದಂತೆ ಗೇಟ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಗುಂಡು ಹಾರಿಸಿದಾಗ, ಕೆಲವು ನಿಹಾಂಗ್‌ಗಳು ಅವರ ಮುಂದೆ ಪ್ರತಿರೋಧ ತೋರಿದರು. ಆ ಸಮಯದಲ್ಲಿ ಪಟಿಯಾಲ ಎಸ್‌ಎಸ್‌ಪಿ ನಾನಕ್ ಸಿಂಗ್ ಸ್ಥಳದಲ್ಲಿದ್ದರು. ಆದರೆ ನಿಹಾಂಗ್‌ಗಳು ಮತ್ತು ಸಿಖ್ಖರು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದರೂ ಪಟ್ಟು ಬಿಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಮತ್ತು ಸ್ಥಳದಲ್ಲಿದ್ದ ಡ್ಯೂಟಿ ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಪಡೆದ ನಂತರ ಅದೇ ರೀತಿ ಮಾಡಲಾಯಿತು” ಎಂದು ಐಜಿ ಹೇಳಿದ್ದಾರೆ.
ಖಲಿಸ್ತಾನಿ ಪರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲು ಸೇನಾ ಕರೆ ನೀಡಿದ್ದು, ಖಲಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗಿದೆ. ಎರಡು ಕಡೆಯ ನಡುವೆ ನೇರ ಮುಖಾಮುಖಿಯಾಗುವುದನ್ನು ತಡೆಯಲು ಸೇನಾ ಸದಸ್ಯರು ಮೆರವಣಿಗೆ ನಡೆಸುತ್ತಿದ್ದ ಒಂದು ಕಿಲೋಮೀಟರ್ ದೂರದಲ್ಲಿರುವ ಆರ್ಯ ಸಮಾಜದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆಯ ಪ್ರತ್ಯೇಕ ತುಕಡಿಯನ್ನು ನಿಯೋಜಿಸಲಾಗಿತ್ತು.
ಪಟಿಯಾಲದಲ್ಲಿ ಕರ್ಫ್ಯೂ ಜಾರಿ ನಿಷೇಧಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ವಿರುದ್ಧ ಇಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಎರಡು ಗುಂಪುಗಳು ಘರ್ಷಣೆಗೊಂಡ ನಂತರ ಪಂಜಾಬ್‌ನ ಪಟಿಯಾಲದಲ್ಲಿ ಶುಕ್ರವಾರ ಸಂಜೆ 7 ರಿಂದ ಶನಿವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಘಟನೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಅದೇ ವೇಳೆ ಹಿಂಸಾಚಾರದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:53 pm, Fri, 29 April 22