Patiala Violence ಖಲಿಸ್ತಾನ್ ವಿರೋಧಿ ಮೆರವಣಿಗೆಗೆ ಕರೆ ನೀಡಿದ ಹರೀಶ್ ಸಿಂಗ್ಲಾ ಬಂಧನ; ಪಕ್ಷದಿಂದ ಹೊರಹಾಕಿದ ಪಂಜಾಬ್ ಶಿವಸೇನಾ

Patiala Violence ಖಲಿಸ್ತಾನ್ ವಿರೋಧಿ ಮೆರವಣಿಗೆಗೆ ಕರೆ ನೀಡಿದ ಹರೀಶ್ ಸಿಂಗ್ಲಾ ಬಂಧನ; ಪಕ್ಷದಿಂದ ಹೊರಹಾಕಿದ ಪಂಜಾಬ್ ಶಿವಸೇನಾ
ಹರೀಶ್ ಸಿಂಗ್ಲಾ

ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯ ನಂತರ, ಪಟಿಯಾಲಾದ ಕಾಳಿ ದೇವಿ ಮಂದಿರದ ಬಳಿ ಇಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಹರೀಶ್ ಸಿಂಗ್ಲಾ ಅವರನ್ನು ಬಂಧಿಸಲಾಗಿದೆ.

TV9kannada Web Team

| Edited By: Rashmi Kallakatta

Apr 29, 2022 | 10:16 PM

ಪಟಿಯಾಲ(ಪಂಜಾಬ್):  ಪಟಿಯಾಲ (Patiala) ನಗರದಲ್ಲಿ ಉದ್ವಿಗ್ನತೆ  ಉಂಟಾಗಿ ಶಿವಸೇನಾ (ShivSena) ಕಾರ್ಯಕರ್ತರು ಮತ್ತು ನಿಹಾಂಗ್ ಸಿಖ್ ಸಮುದಾಯದ ಸದಸ್ಯರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ ಗಂಟೆಗಳ ನಂತರ, ಖಲಿಸ್ತಾನ್ ವಿರೋಧಿ ಮೆರವಣಿಗೆಗೆ (anti-Khalistan march) ಕರೆ ನೀಡಿದ ನಾಯಕನನ್ನು ಶಿವಸೇನಾದ ಪಂಜಾಬ್ ಘಟಕ ಶುಕ್ರವಾರ ಹೊರಹಾಕಿದೆ. ಶಿವಸೇನಾದ (ಬಾಳ್ ಠಾಕ್ರೆ) ಕಾರ್ಯಾಧ್ಯಕ್ಷ ಎಂದು ಹೇಳಿಕೊಳ್ಳುವ ಹರೀಶ್ ಸಿಂಗ್ಲಾ ಅವರನ್ನು ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಮತ್ತು ಯುವ ವಿಭಾಗದ ಮುಖ್ಯಸ್ಥ ಆದಿತ್ಯ ಠಾಕ್ರೆ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ದೇಸಾಯಿ ಅವರ  ಆದೇಶದ ನಂತರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಗಿದೆ ಎಂದು ಶಿವಸೇನೆಯ ರಾಜ್ಯ ಮುಖ್ಯಸ್ಥ ಯೋಗರಾಜ್ ಶರ್ಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶರ್ಮಾ ಅವರಿಗೆ ನನ್ನನ್ನು ಹೊರಹಾಕಲು “ಹಕ್ಕು ಇಲ್ಲ” ಎಂದು ಸಿಂಗ್ಲಾ ಹೇಳಿದರು. “ಪಂಜಾಬ್‌ನಲ್ಲಿ ಸೇನಾ ಮುಖ್ಯಸ್ಥರಾಗಿ ಅವರು ಹೊಸ ಸದಸ್ಯರನ್ನು ಮಾತ್ರ ಸೇರಿಸಬಹುದು ಆದರೆ ನನ್ನಂತಹ ಹಿರಿಯ ನಾಯಕನನ್ನು ಹೊರಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಆದಾಗ್ಯೂ, ಸಿಂಗ್ಲಾ ಪಕ್ಷದ ರಾಜ್ಯ ಉಪಾಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರಲ್ಲ ಎಂದು ಶರ್ಮಾ ಪ್ರತಿಕ್ರಿಯಿಸಿದ್ದಾರೆ. “ಹರೀಶ್ ಸಿಂಗ್ಲಾ ನೀಡಿದ ಕರೆಗೂ ಶಿವಸೇನಾಗೂ ಯಾವುದೇ ಸಂಬಂಧವಿಲ್ಲ ಮತ್ತು ಇದು ಸಿಂಗ್ಲಾ ಅವರ ವೈಯಕ್ತಿಕ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮವಲ್ಲ ಎಂದು ನಾವು 10 ದಿನಗಳ ಹಿಂದೆ ಪಟಿಯಾಲ ಪೊಲೀಸರಿಗೆ ಸ್ಪಷ್ಟಪಡಿಸಿದ್ದೇವೆ” ಎಂದು ಶರ್ಮಾ ಹೇಳಿದರು.

15 ದಿನಗಳ ಹಿಂದೆ ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್‌ನ ಗುರುಪತ್‌ವಂತ್ ಸಿಂಗ್ ಪನ್ನುನ್ ಅವರು “ಹರಿಯಾಣದ ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ಖಲಿಸ್ತಾನ್ ಸ್ಥಾಪನಾ ದಿವಸ್ (ಖಲಿಸ್ತಾನ್ ಸಂಸ್ಥಾಪನಾ ದಿನ)” ಆಚರಿಸಲು ಕರೆ ನೀಡಿದ ನಂತರ ಸುಮಾರು 15 ದಿನಗಳ ಹಿಂದೆ ಖಲಿಸ್ತಾನ್ ವಿರೋಧಿ ಪ್ರತಿಭಟನಾ ಮೆರವಣಿಗೆಯನ್ನು ಘೋಷಿಸಲಾಯಿತು ಎಂದು ಸಿಂಗ್ಲಾ ಹೇಳಿದರು.

ಅವರು ವಿವಿಧ ಕಾರ್ಯಕ್ರಮಗಳಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಬಹುದಾದರೆ, ನಾವು ಖಲಿಸ್ತಾನಿ ವಿರೋಧಿ ಘೋಷಣೆಗಳನ್ನು ಏಕೆ ಕೂಗಬಾರದು? ಪಂಜಾಬ್‌ನಲ್ಲಿ ಉಗ್ರಗಾಮಿಗಳಿಂದ ಸಾವಿರಾರು ಹಿಂದೂಗಳು ಕೊಲ್ಲಲ್ಪಟ್ಟರು. ಮುಂದಿನ ಕ್ರಮವನ್ನು ನಿರ್ಧರಿಸಲು ಸಭೆಯನ್ನು ಕರೆದಿದ್ದೇನೆ ಎಂದು ಸಿಂಗ್ಲಾ ಹೇಳಿದರು. ಶಿವಸೇನಾದ ಪತ್ರಿಕಾ ಕಾರ್ಯದರ್ಶಿ ಜುಗಲ್ ಕಿಶೋರ್ ಲೂಂಬಾ ಅವರ ಪ್ರಕಾರ, ರಾಜ್ಯದಲ್ಲಿ ಶಿವಸೇನಾ (ಕೇಸ್ರಿ), ಶಿವಸೇನಾ (ಭಗವಾ), ಶಿವಸೇನಾ (ತಕ್ಸಲಿ), ಶಿವಸೇನಾ ಪಂಜಾಬ್, ರಾಷ್ಟ್ರವಾದಿ ಶಿವಸೇನಾ, ಶಿವಸೇನಾ (ಅಮೃತಸರ), ಶಿವಸೇನಾ (ಇಂಕ್ವಿಲಾಬ್), ಶಿವಸೇನಾ (ಹಿಂದ್) ಮತ್ತು ಶಿವಸೇನಾ (ಹಿಂದೂಸ್ತಾನ್) ಸಂಘಟನೆಗಳಿವೆ.

ಪಟಿಯಾದಲ್ಲಿ ಇಂದು ನಡೆದ ಘಟನೆಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್  “ಅತೀ  ದುರದೃಷ್ಟಕರ” ಎಂದು ಕರೆದಿದ್ದಾರೆ. “ನಾನು ಡಿಜಿಪಿ ಜೊತೆ ಮಾತನಾಡಿದ್ದೇನೆ, ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಲಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪಂಜಾಬ್‌ನ ಶಾಂತಿ ಮತ್ತು ಸೌಹಾರ್ದತೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.

ದೇವಾಲಯದ ಒಳಗೆ ಹಾಜರಿದ್ದ ಸಿಖ್ ಕಾರ್ಯಕರ್ತರು ಹಾಗೂ ಹಿಂದೂ ಮುಖಂಡರು ಕಲ್ಲು ತೂರಾಟ ನಡೆಸಿದ ವರದಿಗಳು ಬಂದಿದ್ದು, ಸಿಖ್ ಪ್ರತಿಭಟನಾಕಾರರು ಪ್ರವೇಶಿಸದಂತೆ ಗೇಟ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಗುಂಡು ಹಾರಿಸಿದಾಗ, ಕೆಲವು ನಿಹಾಂಗ್‌ಗಳು ಅವರ ಮುಂದೆ ಪ್ರತಿರೋಧ ತೋರಿದರು. ಆ ಸಮಯದಲ್ಲಿ ಪಟಿಯಾಲ ಎಸ್‌ಎಸ್‌ಪಿ ನಾನಕ್ ಸಿಂಗ್ ಸ್ಥಳದಲ್ಲಿದ್ದರು. ಆದರೆ ನಿಹಾಂಗ್‌ಗಳು ಮತ್ತು ಸಿಖ್ಖರು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದರೂ ಪಟ್ಟು ಬಿಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಮತ್ತು ಸ್ಥಳದಲ್ಲಿದ್ದ ಡ್ಯೂಟಿ ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಪಡೆದ ನಂತರ ಅದೇ ರೀತಿ ಮಾಡಲಾಯಿತು” ಎಂದು ಐಜಿ ಹೇಳಿದ್ದಾರೆ.

ಸಿಂಗ್ಲಾ ಬಂಧನ

ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯ ನಂತರ, ಪಟಿಯಾಲಾದ ಕಾಳಿ ದೇವಿ ಮಂದಿರದ ಬಳಿ ಇಂದು ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಹರೀಶ್ ಸಿಂಗ್ಲಾ ಅವರನ್ನು ಬಂಧಿಸಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada