
ಪಾಟ್ನಾ, ಜುಲೈ 15: ನಾಪತ್ತೆಯಾಗಿದ್ದ ಬ್ಯಾಂಕ್ ಮ್ಯಾನೇಜರ್(Bank Manager) ಶವವಾಗಿ ಪತ್ತೆಯಾಗಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ. ಅಭಿಷೇಕ್ ವರುಣ್ ಮೃತದೇಹ ಬಾವಿಯೊಳಗೆ ಪತ್ತೆಯಾಗಿದೆ. ಸ್ಕೂಟರ್ ಕೂಡ ಬಾವಿಯೊಳಗೆ ಸಿಕ್ಕಿದೆ. ಸಾವಿನ ಸುತ್ತ ಕೆಲವು ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಪಾಟ್ನಾದ ಕಂಕರ್‌ಬಾಗ್ ಪೊಲೀಸ್ ಠಾಣೆ ಪ್ರದೇಶದ ಖಾಸಗಿ ಬ್ಯಾಂಕಿನ ವ್ಯವಸ್ಥಾಪಕ ಅಭಿಷೇಕ್ ವರುಣ್ ಸೋಮವಾರ ರಾತ್ರಿಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದರು.
ಅಭಿಷೇಕ್ ತನ್ನ ಪತ್ನಿಯೊಂದಿಗೆ ಪಾರ್ಟಿಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಪಾರ್ಟಿ ನಂತರ ಅವರ ಪತ್ನಿ ಮನೆಗೆ ಮರಳಿದರು, ಆದರೆ ಅಭಿಷೇಕ್ ನಂತರ ಬರುವುದಾಗಿ ಹೇಳಿದ್ದರು. ಅಂದಿನಿಂದ ಅವರ ಯಾವುದೇ ಸುಳಿವು ಸಿಕ್ಕಿಲ್ಲ.
ಅಭಿಷೇಕ್ ಅವರ ಸಹೋದರ ಹೇಳುವಂತೆ, ಬೆಳಗಿನ ಜಾವ 2.45 ರ ಸುಮಾರಿಗೆ ಅಭಿಷೇಕ್ ತನ್ನ ಪತ್ನಿಗೆ ಕರೆ ಮಾಡಿ ತನಗೆ ಅಪಘಾತವಾಗಿದೆ ಎಂದು ಹೇಳಿದ್ದ. ಆದರೆ ಸ್ವಲ್ಪ ಸಮಯದ ನಂತರ ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಾತ್ರಿಯಿಡೀ ಅವನು ಹಿಂತಿರುಗದಿದ್ದಾಗ, ಅವನ ಪತ್ನಿ ಬೆಳಗ್ಗೆ ಕಂಕರ್‌ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ, ಅಭಿಷೇಕ್ ಮೊಬೈಲ್ ಇದ್ದ ಕೊನೆಯ ಸ್ಥಳವು ಬೇವೂರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಕಳೆದ ಮೂರು ದಿನಗಳ ಹಿಂದಷ್ಟೇ ಬಿಜೆಪಿ ನಾಯಕರೊಬ್ಬರನ್ನು ಪಾಟ್ನಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಉದ್ಯಮಿ ಗೋಪಾಲ್ ಖೇಮ್ಕಾ(Gopal Khemka) ಹತ್ಯೆ ನಡೆದು ಒಂದು ವಾರದ ಬಳಿಕ ಬಿಹಾರದ ಪಾಟ್ನಾದಲ್ಲಿ ಬಿಜೆಪಿ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಮೃತರನ್ನು ಸುರೇಂದ್ರ ಕೆವಾತ್ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಗೋಪಾಲ್ ಖೇಮ್ಕಾ ಕೊಲೆ ಪ್ರಕರಣ: ಆರೋಪಿ ವಿಕಾಸ್ ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ
ಬಿಹ್ತಾ-ಸರ್ಮೇರಾ ರಾಜ್ಯ ಹೆದ್ದಾರಿಯಲ್ಲಿರುವ ಅವರ ಜಮೀನಿನ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೆವಾತ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೂ ಮೊದಲು, ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಗಾಂಧಿ ಮೈದಾನದ ಬಳಿಯ ನಗರದ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
ಪಾಟ್ನಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾನುವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಸಂಪುಟವನ್ನು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ