ಹಲವು ಕೇಂದ್ರ ಸಚಿವರು, ಆರ್ಎಸ್ಎಸ್ ನಾಯಕರ ಫೋನ್ ಟ್ಯಾಪ್?-ಕುತೂಹಲ ಹುಟ್ಟಿಸಿದ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್
ಸುಬ್ರಹ್ಮಣಿಯನ್ ಸ್ವಾಮಿಯವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರಿಯೆನ್, ಕೇವಲ ಮೋದಿ ಸಂಪುಟದಲ್ಲಿರುವ ಸಚಿವರ ಫೋನ್ಗಳಷ್ಟೇ ಅಲ್ಲ, ಪ್ರತಿಪಕ್ಷಗಳ ಹಲವು ನಾಯಕರ ಫೋನ್ಗಳ ಕದ್ದಾಲಿಕೆಯೂ ಆಗಿದೆ ಎಂದಿದ್ದಾರೆ.
ನೆನಪಿರಬಹುದು..2019ರಲ್ಲಿ ಇಸ್ರೇಲ್ನ ಪೆಗಾಸಸ್(Pegasus) ಎಂಬ ಸ್ಪೈವೇರ್ (Spyware) ದೊಡ್ಡಮಟ್ಟದ ಸುದ್ದಿಯಾಗಿತ್ತು. ಭಾರತದ ಪ್ರಮುಖ ಪರ್ತಕರ್ತರು, ಮಾನವ ಹಕ್ಕು ಕಾರ್ಯಕರ್ತರ ವಾಟ್ಸ್ಆ್ಯಪ್ ಖಾತೆಗಳ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಪೆಗಾಸಸ್ ಸ್ಪೈವೇರ್ ತಂತ್ರಜ್ಞಾನದ ಹಿಂದೆ ಇಸ್ರೇಲ್ (Israel)ನ ಕಣ್ಗಾವಲು ಸಂಸ್ಥೆ ಎನ್ಎಸ್ಒ (NSO) ಗ್ರೂಪ್ ಕಾರ್ಯನಿರ್ವಹಿಸುತ್ತಿದೆ. ಜಗತ್ತಿನಾದ್ಯಂತ ಭಾರತ ಸೇರಿ ನಾಲ್ಕು ದೇಶಗಳ ಹಲವು ಗಣ್ಯರ ಸುಮಾರು 1400 ವಾಟ್ಸ್ಆ್ಯಪ್ ಖಾತೆಗಳ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂಬುದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ವಾಟ್ಸ್ಆ್ಯಪ್ ಕಂಪನಿ ಈ ಎನ್ಎಸ್ಒ ಗ್ರೂಪ್ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಮೊಕದ್ದಮೆಯನ್ನೂ ಹೂಡಿತ್ತು.
ಅದೇ ಪೆಗಾಸಸ್ ಸ್ಪೈವೇರ್ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಒಂದು ಟ್ವೀಟ್ ಮಾಡಿದ್ದಾರೆ. ಇಸ್ರೇಲಿ ಪೆಗಾಸಸ್ ಸ್ಪೈವೇರ್ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಲವು ಸಚಿವರು, ಆರ್ಎಸ್ಎಸ್ನ ಪ್ರಮುಖ ಮುಖಂಡರು, ಸುಪ್ರೀಂಕೋರ್ಟ್ನ ಜಡ್ಜ್ಗಳು, ಪತ್ರಕರ್ತರ ಫೋನ್ ಟ್ಯಾಪ್ ಮಾಡಿದೆ ಎನ್ನಲಾಗುತ್ತಿದೆ. ಈ ದೂರವಾಣಿ ಕದ್ದಾಲಿಕೆ ಪ್ರಕರಣದ ಬಗ್ಗೆ ವಾಷಿಂಗ್ಟನ್ ಪೋಸ್ಟ್, ಲಂಡನ್ ಗಾರ್ಡಿಯನ್ ಸೇರಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಲಿವೆ.. ಯಾರ್ಯಾರ ಫೋನ್ ಕದ್ದಾಲಿಕೆ ಆಗಲಿದೆ ಎಂಬುದನ್ನು ಬಹಿರಂಗಪಡಿಸಲಿವೆ ಎಂಬ ಬಗ್ಗೆ ಬಲವಾದ ವದಂತಿ ಹರಡಿದೆ. ಹಾಗೊಮ್ಮೆ ವರದಿ ಮಾಡಿ, ನನಗೆ ಅದು ಸಿಕ್ಕರೆ ಖಂಡಿತ ನಾನೂ ಅದನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ.
Strong rumour that this evening IST, Washington Post & London Guardian are publishing a report exposing the hiring of an Israeli firm Pegasus, for tapping phones of Modi’s Cabinet Ministers, RSS leaders, SC judges, & journalists. If I get this confirmed I will publish the list.
— Subramanian Swamy (@Swamy39) July 18, 2021
ಈ ಟ್ವೀಟ್ನ್ನು ಅವರು ಯಾವ ಕಾರಣಕ್ಕೆ ಮಾಡಿದ್ದಾರೆ ಗೊತ್ತಿಲ್ಲ. ಅದನ್ನು ನೋಡಿದ ಕೆಲವರು, ಸುಬ್ರಹ್ಮಣಿಯನ್ ಸ್ವಾಮಿ ವ್ಯಂಗ್ಯಕ್ಕಾಗಿ ಹೀಗೆಲ್ಲ ಟ್ವೀಟ್ ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ. ಅದರಲ್ಲೊಬ್ಬ ಟ್ವಿಟರ್ ಬಳಕೆದಾರ, ನಿಮ್ಮ ಹೆಸರೂ ಇರುತ್ತದೆ ಆ ಲಿಸ್ಟ್ನಲ್ಲಿ ಎಂದಿದ್ದಾರೆ. ಅದಕ್ಕೆ ಉತ್ತರಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಹಾಗೊಮ್ಮೆ ಆದರೆ ನಾನು ಸುಪ್ರೀಂಕೋರ್ಟ್ಗೆ ಹೋಗುತ್ತೇನೆ ಎಂದಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿಯವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಡೆರೆಕ್ ಒ ಬ್ರಿಯೆನ್, ಕೇವಲ ಮೋದಿ ಸಂಪುಟದಲ್ಲಿರುವ ಸಚಿವರ ಫೋನ್ಗಳಷ್ಟೇ ಅಲ್ಲ, ಪ್ರತಿಪಕ್ಷಗಳ ಹಲವು ನಾಯಕರ ಫೋನ್ಗಳ ಕದ್ದಾಲಿಕೆಯೂ ಆಗಿದೆ ಎಂದು ಹೇಳಿದ್ದಾರೆ. ಕಾರ್ತಿ ಚಿದಂಬರಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ; ಸುಳಿವು ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
Pegasus tapping phones of Union Ministers RSS Leaders Tweet By Subramanian Swamy