ಕೋನ್ನಿ (ಪತ್ತನಂತಿಟ್ಟ): ಕೇರಳದ ಜನರು ಎಲ್ಡಿಎಫ್ ಮತ್ತು ಯುಡಿಎಫ್ನಿಂದ ಬೇಸತ್ತಿದ್ದಾರೆ. ಇಲ್ಲಿನ ಜನರಿಗೆ ಬಿಜೆಪಿಯ ಅಭಿವೃದ್ಧಿ ಅಜೆಂಡಾ ಬೇಕಿದೆ. ಎಲ್ಡಿಎಫ್ ಮತ್ತು ಯುಡಿಎಫ್ ಬಗ್ಗೆ ಜನರು ಸಾಕಪ್ಪಾ ಸಾಕು ಎಂದು ಹೇಳುತ್ತಿದ್ದಾರೆ. ಕೇರಳದ ಜನರು ಬಿಜೆಪಿಯ ಅಭಿವೃದ್ದಿ ಕಾರ್ಯಗಳನ್ನು ಬಯಸುತ್ತಿದ್ದಾರೆ. ನಮ್ಮ ಯೋಜನೆ ಮತ್ತು ನೀತಿಗಳನ್ನು ಅವರು ಮೆಚ್ಚಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೋನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ಕೇರಳದ ಎಲ್ಡಿಎಫ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್ಡಿಎಫ್ ಏಳು ಮಹಾ ಪಾಪಗಳನ್ನು ಮಾಡಿದೆ ಎಂದಿದ್ದಾರೆ ಮೋದಿ. ಕೆಲವು ದಿನಗಳ ಹಿಂದೆ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಮೋದಿ, ಜೂಡಸ್ ಬೆಳ್ಳಿಗಾಗಿ ವಂಚಿಸಿದಂತೆ ಎಲ್ಡಿಎಫ್ ಚಿನ್ನಕ್ಕಾಗಿ ಕೇರಳದ ಜನರನ್ನ ವಂಚಿಸಿದೆ ಎಂದಿದ್ದರು. ಇಂದು ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಮೋದಿ, ನಾವು ಏಳು ಮಹಾ ಪಾಪಗಳ ಬಗ್ಗೆ ಕೇಳಿದ್ದೇವೆ. ಯುಡಿಎಫ್ ಮತ್ತು ಎಲ್ಡಿಎಫ್ ಕೇರಳದಲ್ಲಿ ಈ ಏಳು ಮಹಾ ಪಾಪಗಳನ್ನು ಮಾಡಿದೆ ಎಂದು ಒಂದೊಂದನ್ನೇ ವಿವರಿಸಿದ್ದಾರೆ.
ಮೊದಲ ತಪ್ಪು ಸುಳ್ಳು ಗರ್ವ ಮತ್ತು ಸೊಕ್ಕು. ಯುಡಿಎಫ್ ಮತ್ತು ಎಲ್ಡಿಎಫ್ನ್ನು ಯಾವತ್ತೂ ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಹಾಗಾಗಿ ಅವರ ನಾಯಕರಿಗೆ ಸೊಕ್ಕು ಇದೆ. ಅವರು ಬುಡದಿಂದ ಸಂಪರ್ಕ ಕಡಿದುಕೊಂಡಿದ್ದಾರೆ. ಎರಡನೇ ಪಾಪ ಅಂದರೆ ದುರಾಸೆ ಮತ್ತು ಹಣ. ಸೋಲಾರ್ ಹಗರಣ, ಡಾಲರ್ ಹಗರಣ, ಚಿನ್ನ ಹಗರಣ, ಭೂ ಹಗರಣ, ಬಾರ್ ಲಂಚ ಹಗರಣ, ಅಬಕಾರಿ ಹಗರಣ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಎರಡೂ ಪಕ್ಷಗಳು ಪ್ರತಿಯೊಂದು ವಲಯವನ್ನೂ ಲೂಟಿ ಮಾಡಿದೆ. ಮೂರನೇ ಪಾಪ ಏನೆಂದರೆ ಜನರ ಮೇಲಿನ ರೋಷ. ಯಾವ ಸರ್ಕಾರ ಮುಗ್ಧ ಭಕ್ತರ ಮೇಲೆ ಲಾಠಿ ಪ್ರಹಾರ ಮಾಡುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಯಾವ ಸರ್ಕಾರ ಪದೇ ಪದೇ ತಮ್ಮದೇ ನಾಗರಿಕರ ಮೇಲೆ ದಾಳಿ ನಡೆಸುತ್ತದೆ? ಎಂದು ಮೋದಿ ಪ್ರಶ್ನಿಸಿದ್ದಾರೆ.
Kerala is voting NDA this time. Watch from Pathanamthitta. https://t.co/cIlNBQIDqQ
— Narendra Modi (@narendramodi) April 2, 2021
ನಾಲ್ಕನೇ ಪಾಪ ಅಸೂಯೆ. ಯುಡಿಎಫ್ ಮತ್ತು ಎಲ್ಡಿಎಫ್ ಪರಸ್ಪರ ಅಸೂಯೆ ಹೊಂದಿದೆ. ತಪ್ಪುಗಳನ್ನು ಮಾಡುವ ಮೂಲಕ ಅವರು ಪರಸ್ಪರ ಪೈಪೋಟಿ ಮಾಡುತ್ತಿದ್ದಾರೆ. ಅವರಿಬ್ಬರೂ ಹಗರಣಗಳಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳು ತಮಗಿಂತ ಹೆಚ್ಚು ಹಣ ಮಾಡುತ್ತಿದ್ದಾರೆ ಎಂದಾಗ ಅವರಿಗೆ ಹೊಟ್ಟೆಕಿಚ್ಚುವುಂಟಾಗಿದೆ. 5ನೇ ಪಾಪ ಅಧಿಕಾರದ ವ್ಯಾಮೋಹ. ಹಾಗಾಗಿಯೇ ಅವರು ಕೋಮುವಾದಿಗಳು, ಅಪರಾಧಿಗಳು ಮತ್ತು ಸಮಾಜಘಾತುಕ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ. ತ್ರಿವಳಿ ತಲಾಖ್ ಬಗ್ಗೆ ಮುಸ್ಲಿಂ ಲೀಗ್ನ ನಿಲುವು ಏನು? ಎಸ್ಡಿಪಿಐ ಮತ್ತು ಪಿಎಫ್ಐ ಅವರ ಸಾಮಾಜಿಕ ನೀತಿಗಳೇನು?
ಆರನೇ ಪಾಪ ಎಂದರೆ ರಾಜಕೀಯದಲ್ಲಿನ ವಂಶಾಡಳಿತ. ಎರಡೂ ಪಕ್ಷಗಳು ವಂಶಾಡಳಿತದ ಬಗ್ಗೆ ಆತುರ ಹೊಂದಿವೆ. ಇದು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ .ಹಿರಿಯ ನಾಯಕರ ಮಕ್ಕಳು ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಎಲ್ಡಿಎಫ್ನ ಹಿರಿಯ ನಾಯಕರೊಬ್ಬರ ಮಗನ ಪ್ರಕರಣ ಎಲ್ಲರಿಗೂ ಗೊತ್ತಿರುವಂತದ್ದೇ ಆದನ್ನು ವಿವರಿಸುವ ಅಗತ್ಯವಿಲ್ಲ.
There’re times when people speak in one voice against tyrannical forces, that convey a special message to those in power. I am seeing a similar spirit in Kerala today… The people are seeing the development agenda of BJP, they relate with our policies: PM Modi in Pathanamthitta pic.twitter.com/ySjI75mKx1
— ANI (@ANI) April 2, 2021
ಎಂಟನೇ ಪಾಪ ಎಂದರೆ ಕೆಲಸ ಮಾಡಲು ಸೋಮಾರಿತನ. ಹಣ ಮಾಡುವುದರಲ್ಲಿ, ವಂಶಾಡಳಿತವನ್ನು ಪ್ರೋತ್ಸಾಹಿಸುವಲ್ಲಿ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡುವ ಸರ್ಕಾರ ಹಿಂದುಳಿಯುತ್ತಿದೆ. ಎಲ್ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ಕೇರಳದ ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ ಎಂದು ಮೋದಿ ಹೇಳಿದ್ದಾರೆ.
ಏಪ್ರಿಲ್ 6ರಂದು ಕೇರಳದಲ್ಲಿ ಚುನಾವಣೆ ನಡೆಯಿಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: PM Modi in Kerala: ಚಿನ್ನಕ್ಕಾಗಿ ಎಲ್ಡಿಎಫ್ ಸರ್ಕಾರ ಜನರಿಗೆ ಮೋಸ ಮಾಡಿದೆ: ನರೇಂದ್ರ ಮೋದಿ
Published On - 7:22 pm, Fri, 2 April 21