ಆರ್ಥಿಕತೆ ಕಟ್ಟಲು ₹20 ಲಕ್ಷ ಕೋಟಿ ಪ್ಯಾಕೇಜ್! ಹೇಗೆ, ಯಾರಿಗೆಲ್ಲಾ ಅನುಕೂಲ ಆಗುತ್ತೆ?
ದೆಹಲಿ: ಕೊರೊನಾ ಕೂಪಕ್ಕೆ ಬಿದ್ದು ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅರ್ಥವ್ಯವಸ್ಥೆ ಅದುರಿ ಹೋಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಜಿಡಿಪಿ ಎಷ್ಟಿದೆ ಅನ್ನೋದೆ ಲೆಕ್ಕಕ್ಕೆ ಸಿಗ್ತಿಲ್ಲ. ಅಭಿವೃದ್ಧಿ ಶೀಲ ರಾಷ್ಟ್ರವಾಗಿದ್ದ ಭಾರತ ಹೆಮ್ಮಾರಿಯ ಹೊಡೆತಕ್ಕೆ ಕಂಗೆಟ್ಟು ಹೋಗಿದೆ. ಬಡವ ಬಲ್ಲಿದ ಬೀದಿಗೆ ಬಿದ್ರು. ಕಾರ್ಮಿಕರ ಕನಸು ಕರಗಿ ಹೋಯ್ತು. ಲಾಕ್‌ಡೌನ್ ಸುಳಿಗೆ ಸಿಕ್ಕು ದೇಶದ ದಶದಿಕ್ಕುಗಳೇ ದಿಕ್ಕೆಟ್ಟು ಹೋದ್ವು. 130 ಕೋಟಿ ಭಾರತೀಯರು ಸಂಕಷ್ಟದಲ್ಲಿರೋ ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲೇ ಪ್ರಧಾನಿ ಮೋದಿ ಭರವಸೆಯ ಬೀಜ ಬಿತ್ತಿದ್ರು. ಕಂಗೆಟ್ಟಿದ್ದ ಅದೆಷ್ಟೋ ಕನಸುಗಳಿಗೆ […]
ದೆಹಲಿ: ಕೊರೊನಾ ಕೂಪಕ್ಕೆ ಬಿದ್ದು ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅರ್ಥವ್ಯವಸ್ಥೆ ಅದುರಿ ಹೋಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಜಿಡಿಪಿ ಎಷ್ಟಿದೆ ಅನ್ನೋದೆ ಲೆಕ್ಕಕ್ಕೆ ಸಿಗ್ತಿಲ್ಲ. ಅಭಿವೃದ್ಧಿ ಶೀಲ ರಾಷ್ಟ್ರವಾಗಿದ್ದ ಭಾರತ ಹೆಮ್ಮಾರಿಯ ಹೊಡೆತಕ್ಕೆ ಕಂಗೆಟ್ಟು ಹೋಗಿದೆ.
ಬಡವ ಬಲ್ಲಿದ ಬೀದಿಗೆ ಬಿದ್ರು. ಕಾರ್ಮಿಕರ ಕನಸು ಕರಗಿ ಹೋಯ್ತು. ಲಾಕ್‌ಡೌನ್ ಸುಳಿಗೆ ಸಿಕ್ಕು ದೇಶದ ದಶದಿಕ್ಕುಗಳೇ ದಿಕ್ಕೆಟ್ಟು ಹೋದ್ವು. 130 ಕೋಟಿ ಭಾರತೀಯರು ಸಂಕಷ್ಟದಲ್ಲಿರೋ ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲೇ ಪ್ರಧಾನಿ ಮೋದಿ ಭರವಸೆಯ ಬೀಜ ಬಿತ್ತಿದ್ರು. ಕಂಗೆಟ್ಟಿದ್ದ ಅದೆಷ್ಟೋ ಕನಸುಗಳಿಗೆ ಮರು ಜೀವ ತುಂಬಿದ್ರು. ದೇಶದ ಜನತೆಯನ್ನ ಉದ್ದೇಶಿಸಿ ಅರ್ಧಗಂಟೆ ಮಾತನಾಡಿ, ಐತಿಹಾಸಿಕ ನಿರ್ಧಾರವನ್ನೇ ಪ್ರಕಟಿಸಿ ಬಿಟ್ರು.
ಬೆಂದು ಹೋಗಿದ್ದ ಭಾರತೀಯರಿಗೆ ಭರವಸೆ ಬೆಳಕು. ಸೊರಗಿರೋ ಜೀವಗಳನ್ನ ಕೈ ಹಿಡಿದು ಮೇಲೆತ್ತೋ ಕಾರ್ಯ. ಬಡವ, ರೈತ, ಶ್ರಮಿಕ, ಉದ್ಯಮಿ, ಕೂಲಿ ಕಾರ್ಮಿಕ, ಮಧ್ಯಮವರ್ಗ ಎಲ್ಲರಿಗೂ ನೆರವಾಗೋ ಮಾತನ್ನ ಪ್ರಧಾನಿ ಮೋದಿ ಆಡಿದ್ರು. ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ಅಂದ್ರೆ, ಜಿಡಿಪಿಯ ಶೇಕಡಾ 10 ರಷ್ಟು ಮೊತ್ತದ 20 ಲಕ್ಷ ಕೋಟಿ ರೂಪಾಯಿಗಳ ಬಹುದೊಡ್ಡ ಪ್ಯಾಕೇಜ್ ಘೋಷಿಸಿದ್ರು. ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಜತೆ ಹೆಜ್ಜೆ ಹಾಕ್ತಿದ್ದ ಭಾರತವನ್ನ ಮತ್ತೆ ಮುನ್ನೆಡೆಸಲು ಹೊಸ ಹೆಜ್ಜೆ ಇಟ್ಟಿದ್ದಾರೆ.
ಸೊರಗಿರುವ ಭಾರತಕ್ಕೆ ₹20 ಲಕ್ಷ ಕೋಟಿ ಪ್ಯಾಕೇಜ್! ಆತ್ಮ ನಿರ್ಭರ ಭಾರತ. ಪ್ರಧಾನಿ ಮೋದಿ ಹೇಳಿದ ಇದೊಂದೇ ಮಾತು ಕುಗ್ಗಿರೋ ಬದುಕಿಗೆ ಭರವಸೆ ಸಿಕ್ಕಂತಾಗಿದೆ. ಪ್ರಧಾನಿ ಮೋದಿ ಆಡಿದ ಮಾತುಗಳು ಕೇವಲ ಭರವಸೆ ಮಾತಾಗಿರಲಿಲ್ಲ. ಇಡೀ ದೇಶದ ದಿಕ್ಕನ್ನೇ ಬದಲಿ, ಆರ್ಥಿಕತೆಗೆ ಆಕ್ಸಿಜನ್ ಕೊಡೋ ಭಾಷಣವಾಗಿತ್ತು.
ಕೊರೊನಾ ಸಂಬಂಧ 4 ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಕೇವಲ ಜಾಗೃತಿ, ಎಚ್ಚರಿಕೆಗೆ ಮಾತ್ರ ತಮ್ಮ ಭಾಷಣ ಸೀಮಿತಗೊಳಿಸಿದ್ರು. ಆದ್ರೆ ನಿನ್ನೆ ಆರ್ಥಿಕತೆಯ ಉತ್ತೇಜನಕ್ಕೆ ವಿವಿಧ ಘೋಷಣೆ ಮಾಡಿದ್ದಾರೆ. ಅಷ್ಟಕ್ಕೂ ಮೋದಿ ಪ್ಯಾಕೇಜ್ ಏನು? 20 ಲಕ್ಷ ಕೋಟಿಯ ಪ್ಯಾಕೇಜ್ ಹೇಗಿರುತ್ತೆ? ಇದ್ರಿಂದ ಯಾಱರಿಗೆ ಅನುಕೂಲ ಅನ್ನೋದನ್ನ ನೋಡೋದಾದ್ರೆ.
ಮೋದಿ 20‘20’ಪ್ಯಾಕೇಜ್! ದೇಶದ ಆರ್ಥಿಕತೆ ಹಾಗೂ ಸಂಕಷ್ಟದಲ್ಲಿರೋ ಜನರ ಅನುಕೂಲಕ್ಕಾಗಿ ಪ್ರಧಾನಿ ಮೋದಿ ಬರೋಬ್ಬರಿ ₹20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ದೇಶದ ಜಿಡಿಪಿಯ ಶೇಕಡಾ 10ರಷ್ಟು ಅನುದಾನವಾಗಿದೆ. ಈ ಪ್ಯಾಕೇಜ್‌ನಿಂದ ರೈತರು, ಕಾರ್ಮಿಕರು, ಸಣ್ಣ ಉದ್ಯಮಗಳು, ಗ್ರಾಮೋದ್ಯೋಗ, ದೇಶದ ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ.
ದೇಶದ ಬಡ ಸೋದರ, ಸೋದರಿಯರು, ಕಾರ್ಮಿಕರು, ಬಾಳೆ ಹಣ್ಣು ಮಾರುವವರು, ಬಡ, ದುರ್ಬಲ ವರ್ಗದವರು ಹಾಗೂ ಮನೆಗಳಲ್ಲೇ ಕೆಲಸ ಮಾಡುವವರಿಗಾಗಿ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದೆ . ಜತೆಗೆ ಸಂಘಟಿತ, ಅಸಂಘಟಿತ ವಲಯಗಳಿಗೆ ಯೋಜನೆ ಅನ್ವಯವಾಗಲಿದೆ . ಮೀನುಗಾರರು, ರೈತರು, ನೇಕಾರರು ಸೇರಿದಂತೆ ಎಲ್ಲ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್‌ನಿಂದ ಅನುಕೂಲವಾಗಲಿದೆ.
ಇನ್ನು ಪ್ರಧಾನಿ ಘೋಷಣೆ ಮಾಡಿರೋ 20 ಲಕ್ಷ ಕೋಟಿ ಪ್ಯಾಕೇಜ್‌ನ ಬಳಕೆ ಹೇಗೆ? ರಾಜ್ಯಗಳಿಗೆ ಹೇಗೆ ಅನುದಾನ ಸಿಗಲಿದೆ? ಜನರಿಗೆ ಹೇಗೆ ನೆರವು ಸಿಗುತ್ತೇ ಅನ್ನೋ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಇಂಚಿಂಚು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ನಿನ್ನೆ ಪ್ರಧಾನಿ ಮೋದಿಯವರೇ ಹೇಳಿದ್ದಾರೆ.
ಹಾಗಿದ್ರೆ ಪ್ರಧಾನಿ ಮೋದಿ ಘೋಷಿಸಿರೋ ಐತಿಹಾಸಿಕ ಪ್ಯಾಕೇಜ್ನಲ್ಲಿ ಯಾರಿಗೆಲ್ಲಾ? ಯಾವೆಲ್ಲ ಕ್ಷೇತ್ರಕ್ಕೆ ಬಂಪರ್ ಗಿಫ್ಟ್ ಸಿಗ್ಬೋದು? ಬಡವರು, ಶ್ರಮಿಕರಿಗೆ ಏನ್ ಸಿಗುತ್ತೆ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏನ್ ಗುಡ್ನ್ಯೂಸ್ ಕೊಡ್ತಾರೆ ಅನ್ನೋದನ್ನ ನೋಡೋದಾದ್ರೆ.
ಅನ್ನದಾತರಿಗೆ ಬಂಪರ್? ಲಾಕ್ಡೌನ್ನಿಂದಾಗಿ ದೇಶದ ಅನ್ನದಾತರು ಕಂಗೆಟ್ಟಿದ್ದಾರೆ. ಹೀಗಾಗಿ ದೇಶದ ಬೆನ್ನೆಲುಬಾಗಿರೋ ರೈತರಿಗೆ ಬಂಪರ್ ಗಿಫ್ಟ್ ಸಿಗೋ ಸಾಧ್ಯತೆ ಇದೆ. ಬೆಳೆ ಕಳೆದುಕೊಂಡವರು, ಬೆಳೆ ಮಾರಲಾಗದರಿಗೆ ಸಹಾಯ ಸಿಗ್ಬೋದು. ಅಲ್ದೇ, ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಇರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ನೆರವು ಸಿಗೋ ಸಾಧ್ಯತೆ ಇದೆ.
ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಇರುವ ಅನ್ನದಾತರಿಗೂ ಬಂಪರ್ ಗಿಫ್ಟ್ ನೀಡ್ಬೋದು. ಈ ರೈತರಿಗೆ ವಿಶೇಷ ಪ್ಯಾಕೇಜ್‌ನ ಲಾಭ ಸಿಗುವ ಸಾಧ್ಯತೆ ಇದೆ. ಬಡವರಿಗೆ, ಮಧ್ಯಮವರ್ಗದ ಜನರಿಗೆ, ರೈತರಿಗೆ ಸಹಾಯವಾಗಲಿದೆ. ಕಂಗೆಟ್ಟಿರೋ ಮೀನುಗಾರರು, ನೇಕಾರರಿಗೆ ಗುಡ್ನ್ಯೂಸ್ ಸಿಗೋ ನಿರೀಕ್ಷೆ ಹೆಚ್ಚಾಗಿದೆ. ಜೊತೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಸಿಗೋ ಸಾಧ್ಯತೆಯಿದೆ.
ಶ್ರಮಿಕರ ಶ್ರಮಕ್ಕೆ ಫಲ!? ಒಪ್ಪೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದ ಶ್ರಮಿಕರಿಗೆ ಸಹಾಯ ಸಿಗೋ ಸಾಧ್ಯತೆ ಇದೆ. ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಪ್ಯಾಕೇಜ್‌ನಿಂದ ದೊಡ್ಡ ಗಿಫ್ಟ್ ನೀಡೋ ಸಾಧ್ಯತೆ ಇದೆ. ಜೊತೆಗೆ ಸದ್ಯದ ಪರಿಸ್ಥತಿಯಲ್ಲಿ ಕುಟುಂಬ ನಿರ್ವಹಣೆಗೆ ಜನ ಪರದಾಡುತ್ತಿದ್ದಾರೆ ಅಂತವರಿಗೂ ದೊಡ್ಡ ಘೋಷಣೆ ಸಿಗೋ ನಿರೀಕ್ಷೆ ಇದೆ. ಅಲ್ಲದೇ, ಕೆಲಸ ಕಳೆದುಕೊಂಡವರನ್ನ ಕೈ ಹಿಡಿಯೋ ಕೆಲಸ, ಹಾಗೂ ವಲಸಿಗ ಕಾರ್ಮಿಕರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಮಧ್ಯಮವರ್ಗಕ್ಕೆ ಗಿಫ್ಟ್? ಇನ್ನು ಮಧ್ಯಮ ವರ್ಗದ ಕುಟುಂಬಸ್ಥರಿಗೆ ಉದ್ಯೋಗ ಒದಗಿಸೋ ಯೋಜನೆ ಜಾರಿಗೆ ತರ್ಬೋದು. ಹೊಸದಾಗಿ ವ್ಯಾಪಾರ ವಹಿವಾಟು ಆರಂಭಿಸಲು ನೆರವಾಗ್ಬೋದು. ಅಲ್ಲದೇ, ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ದೊಡ್ಡ ಗಿಫ್ಟ್ ನೀಡೋ ಸಾಧ್ಯತೆ ಇದೆ. ಸಣ್ಣ ವ್ಯಾಪಾರಸ್ಥರಿಗೆ ಮತ್ತಷ್ಟು ನೆರವು ನೀಡೋದಲ್ಲದೇ, ಬೀದಿ ಬದಿ ವ್ಯಾಪಾರಸ್ಥರು, ಹಣ್ಣು-ಹೂವು ಮಾರೋರನ್ನ ಕೈ ಹಿಡಿಯೋ ಕೆಲಸವೂ ಆಗೋ ಸಾಧ್ಯತೆ ಇದೆ.
ಇನ್ನು ಮಧ್ಯಮ ವರ್ಗಕ್ಕೂ ಪ್ಯಾಕೇಜ್ನಲ್ಲಿ ದೊಡ್ಡ ಬಂಪರ್ ಗಿಫ್ಟ್ ಘೋಷಿಸೋ ನಿರೀಕ್ಷೆ ಇದೆ. ಹಾಗಿದ್ರೆ ಮಧ್ಯಮವರ್ಗ, ಉದ್ದಿಮೆಗಳಿಗೆ ಏನೇನ್ ಸಿಗ್ಬೋದು ಅನ್ನೋದನ್ನ ನೋಡೋದಾದ್ರೆ.
ಉದ್ದಿಮೆಗೆ ಉಡುಗೊರೆ? ಇಷ್ಟೇ ಅಲ್ಲ, ಲಾಕ್‌ಡೌನ್ ಹೊಡೆತದಿಂದ ಕಂಗೆಟ್ಟಿರೋ ಉದ್ದಿಮೆ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಾಧ್ಯತೆ. ಖಾದಿ ಉದ್ಯಮ, ನೇಕಾರ ವರ್ಗದವರಿಗೂ ಉಡುಗೊರೆ ನೀಡ್ಬೋದು. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಹಾಯವಾಗುವಂತ ಬಂಪರ್ ಗಿಫ್ಟ್ ಘೋಷಣೆ ಸಾಧ್ಯತೆ ಇದೆ.
ಅಲ್ಲೇ, ಕಾರ್ಖಾನೆಗಳು ಸಾವಿರಾರು ಕೋಟಿ ನಷ್ಟ ಅನುಭವಿಸಿದ್ದವರಿಗೆ ನೆರವಾಗ್ಬೋದು. ಕೆಲಸದ ಬಂಡವಾಳದ ಸಾಲಕ್ಕೆ ಗ್ಯಾರಂಟಿ ನೀಡುವ ಸಾಧ್ಯತೆ ಕೂಡ ಇದೆ. ಮೊದಲ ಬಾರಿ ಸಾಲ ಪಡೆಯುವವರಿಗೆ ವಿಶೇಷ ನೆರವು ನೀಡಿ ಅಂತವರಿಗ ಸಂಜೀವಿನಿ ನೀಡ್ಬೋದು. ಉದ್ಯೋಗ ಕಡಿತ ಮಾಡದಂತೆ ಕಂಪನಿಗಳಿಗೆ ನೆರವು ಕೂಡ ನೀಡುವ ನಿರೀಕ್ಷೆ ಇದೆ.
ಒಟ್ನಲ್ಲಿ ಕೊರೊನಾ ಅಟ್ಟಹಾಸದಿಂದ ಕಂಪಿಸಿರೋ ಭಾರತಕ್ಕೆ ಪ್ರಧಾನಿ ಮೋದಿ ದೊಡ್ಡ ಭರವಸೆಯ ಬೀಜ ಬಿತ್ತಿದ್ದಾರೆ.. ಕೊರೊನಾ ಒದ್ದೋಡಿಸೋದರ ಜೊತೆಗೆ ದೇಶದ ಆರ್ಥಿಕತೆ ಹಳಿಗೆ ತರೋಕೆ ಬರೋಬ್ಬರಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.
ಭಾರತದ ಧಿಕ್ಕನ್ನ ಬದಲಿಸೋ ಸೂಚನೆ ಕೊಟ್ಟಿದೆ. ಯಾವೆಲ್ಲಾ ಕ್ಷೇತ್ರಕ್ಕೆ ಏನೇನ್ ಸಿಗುತ್ತೆ.. ಈ ಸ್ಪೆಷಲ್ ಪ್ಯಾಕೇಜ್ ಬಳಕೆ ಹೇಗೆ ಅನ್ನೋದು ಇಂದು ಗೊತ್ತಾಗಲಿದೆ. ಲಾಕ್ಡೌನ್ನಿಂದ ಕಮರಿ ಹೋಗಿದ್ದ ಬಡವ, ಶ್ರಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಕೈಗಾರಿಕೆಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಎಲ್ಲರೂ ವಿತ್ತ ಸಚಿವೆ ಏನ್ ಮಾಹಿತಿ ನೀಡ್ತಾರೆ ಅನ್ನೋದನ್ನ ಎದುರು ನೋಡ್ತಿದ್ದಾರೆ.
Published On - 7:30 am, Wed, 13 May 20