ಬಿಕಾನೇರ್ ನಗರದಲ್ಲಿ ಮಳೆ ನಡುವೆ ಸೈಕ್ಲಿಸ್ಟ್ಗಳೊಂದಿಗೆ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನಕ್ಕೆ ಭೇಟಿ ನೀಡಿದ್ದು, ಬಿಕಾನೇರ್ ನಗರದಲ್ಲಿ ಮಳೆಯೊಂದಿಗೆ ಸೈಕ್ಲಿಸ್ಟ್ಗಳೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ಮಳೆಯನ್ನು ಲೆಕ್ಕಿಸಿದೆ ಒದ್ದೆಯಾಗುತ್ತಲೇ ಮೋದಿಯನ್ನು ನೋಡಲು ರಸ್ತೆಯುದ್ದಕ್ಕೂ ಜನರು ಜಮಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಜುಲೈ 8) ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಸೈಕ್ಲಿಸ್ಟ್ಗಳೊಂದಿಗೆ ಭರ್ಜರಿ ರೋಡ್ ಶೋ (Road Show) ನಡೆಸಿದರು. ಈ ವೇಳೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ರಸ್ತೆಯುದ್ದಕ್ಕೂ ಜಮಾಯಿಸಿದ ಜನರು, ಅಭಿಮಾನಿಗಳು ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡರು. ನಂತರ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟಾಚಾರದ ಅಂಗಡಿ ಮತ್ತು ಸುಳ್ಳಿನ ಮಾರುಕಟ್ಟೆ ಎಂದು ಜರಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಂತ್ಯದತ್ತ ಸಾಗುತ್ತಿದ್ದು, ಅಶೋಕ್ ಗೆಹ್ಲೋಟ್ ಆಡಳಿತವು ಭ್ರಷ್ಟಾಚಾರ, ಅಪರಾಧ ಮತ್ತು ತುಷ್ಟೀಕರಣದ ರಾಜಕಾರಣದ ವಿಷಯದಲ್ಲೇ ಖ್ಯಾತಿಯನ್ನು ಗಳಿಸಿದೆ ಎಂದು ಆರೋಪಿಸಿದರು.
ರಾಜಸ್ಥಾನದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ವಿಳಂಭವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೋದಿ, ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರಬೇಕಿದ್ದ ರಾಜಸ್ಥಾನ ಈಗ ಇತರ ರಾಜ್ಯಗಳಿಗಿಂತ ಹಿಂದುಳಿದಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿದರೆ ಅದು ರಾಷ್ಟ್ರವನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ ಮತ್ತು ಅಧಿಕಾರ ಕಳೆದುಕೊಂಡರೆ ತನ್ನ ನಿಂದನೀಯ ನಡವಳಿಕೆಯ ಮೂಲಕ ದೇಶದ ಘನತೆಗೆ ಧಕ್ಕೆ ತರುತ್ತದೆ ಎಂದು ವಾಗ್ದಾಳಿ ನಡೆಸಿದರು.
#WATCH | Rajasthan: Prime Minister Narendra Modi holds roadshow in Bikaner, cycle rally accompanies him pic.twitter.com/Kauszj71Vp
— ANI (@ANI) July 8, 2023
ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣೆಯ ಹೊಣೆ ಹೊತ್ತವರು ಪರಭಕ್ಷಕರಾಗಿ ಬದಲಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಂತ್ರಸ್ತರಿಗೆ ನ್ಯಾಯವನ್ನು ನೀಡುವ ಬದಲು ಅತ್ಯಾಚಾರ ಮತ್ತು ಕೊಲೆ ಶಂಕಿತರನ್ನು ರಕ್ಷಿಸುವಲ್ಲಿ ಹೆಚ್ಚು ಗಮನ ಹರಿಸಿದಂತೆ ತೋರುತ್ತದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲು ಅನಿವಾರ್ಯ. ಏಕೆಂದರೆ ರಾಜ್ಯ ಸರ್ಕಾರ ಈಗಾಗಲೇ ಬೈ-ಬೈ ಮೋಡ್ನಲ್ಲಿದೆ ಎಂದರು.
ಕಾಂಗ್ರೆಸ್ ನಾಯಕರು ವಿದೇಶಕ್ಕೆ ತೆರಳಿದಾಗ ಅಲ್ಲಿ ಭಾರತದ ವಿರುದ್ಧ ಮಾತನಾಡಿರುವುದು ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ರ್ಯಾಲಿಯಲ್ಲಿ ಮಾತನಾಡುತ್ತಾ ಆಕ್ರೋಶ ಹೊರಹಾಕಿದ ಮೋದಿ, ರಾಜ್ಯದ ಕೆಲವು ನಾಯಕರು ವಿದೇಶದಲ್ಲಿರುವಾಗ ಭಾರತದ ವಿರುದ್ಧ ನಿಂದನೆಯಲ್ಲಿ ತೊಡಗಿದ್ದಾರೆ ಎಂದರು.
ಬಿಕಾನೇರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತಸರ-ಜಮ್ಮು ಕಾಶ್ಮೀರ ಆರ್ಥಿಕ ಕಾರಿಡಾರ್‌ನ ಆರು ಪಥಗಳ ಗ್ರೀನ್‌ಫೀಲ್ಡ್ ಮೋಟಾರು ಮಾರ್ಗವನ್ನು ಉದ್ಘಾಟಿಸಿದರು. ಹನುಮಾನ್‌ಗಢ್ ಜಿಲ್ಲೆಯ ಜಖದವಾಲಿ ಗ್ರಾಮದಿಂದ ಜಲೋರ್ ಜಿಲ್ಲೆಯ ಖೆತ್ಲಾವಾಸ್ ಗ್ರಾಮದವರೆಗೆ ಸುಮಾರು 500 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಈ ಮಾರ್ಗವನ್ನು ಸರಿಸುಮಾರು 11,125 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 pm, Sat, 8 July 23