ಹೈದರಾಬಾದ್, ನವೆಂಬರ್ 7: ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) ಹಾಗೂ ಕಾಂಗ್ರೆಸ್ (Congress) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣ ವಿಧಾನಸಭೆ ಪ್ರಚಾರಕ್ಕಾಗಿ ಎಲ್ಬಿ ಸ್ಟೇಡಿಯಂನಲ್ಲಿ ಬಿಜೆಪಿ ಆಯೋಜಿಸಿದ್ದ ಬಿಸಿ ಸ್ವಾಭಿಮಾನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ತುಷ್ಟೀಕರಣ ಎಂಬುದು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಡಿಎನ್ಎಯಲ್ಲೇ ಅಡಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಬಿಆರ್‌ಎಸ್, ಕಾಂಗ್ರೆಸ್ ರಕ್ಷಣೆಯಲ್ಲಿ ಭ್ರಷ್ಟಾಚಾರ ಅರಳುತ್ತದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎಂದಿಗೂ ಅದನ್ನು ಬಿಡುವುದಿಲ್ಲ. ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾಗಲಿ ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ, ಹಿಂದುಳಿದ ವರ್ಗದ ಜನರ ಹಕ್ಕುಗಳನ್ನು ಪೂರೈಸುವುದು ಎನ್‌ಡಿಎ. ಅವರಿಗೆ ನ್ಯಾಯಯುತ ಪ್ರಾತಿನಿಧ್ಯವನ್ನು ಒದಗಿಸುವುದು ಎನ್‌ಡಿಎ. ನಾವು ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. 1996ರಲ್ಲಿ ಬುಡಕಟ್ಟು ಜನಾಂಗದ ನಾಯಕ ಪಿ.ಎಸ್.ಸಂಗಮಾಜಿ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿದಾಗ ಅಟಲ್‌ಜಿ ಸಂಪೂರ್ಣ ಬೆಂಬಲ ನೀಡಿದರು ಎಂದು ಮೋದಿ ಹೇಳಿದರು.
ದೇಶಕ್ಕೆ ಮೊದಲ ಬುಡಕಟ್ಟು ಜನಾಂಗದ ಲೋಕಸಭೆ ಸ್ಪೀಕರ್ ಬಾಲ ಯೋಗಿ ಜೀಯನ್ನು ನೀಡಿದ್ದು ಎನ್‌ಡಿಎ. ಬುಡಕಟ್ಟು ಮಹಿಳೆಯಾಗಿದ್ದ ದ್ರೌಪದಿ ಮುರ್ಮು ಅವರನ್ನು ನಾವು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ನಾವು ಹಿಂದುಳಿದ ವರ್ಗದ ನಾಯಕರಾಗಿರುವ ರಾಮ್ ನಾಥ್ ಕೋವಿಂದ್ ಅವರನ್ನು ಕೂಡ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದೇವೆ. ದೇಶದ ಮೊದಲ ಒಬಿಸಿ ಪ್ರಧಾನಮಂತ್ರಿಯಾದ ನನ್ನನ್ನು ದೇಶವಾಸಿಗಳ ಆಶೀರ್ವಾದದೊಂದಿಗೆ ಎನ್‌ಡಿಎ ಆಯ್ಕೆ ಮಾಡಿದೆ. 27 ಒಬಿಸಿ ಕ್ಯಾಬಿನೆಟ್ ಮಂತ್ರಿಗಳಿದ್ದಾರೆ, ಇದು ದಾಖಲೆಯಾಗಿದೆ ಎಂದು ಅವರು ಹೇಳಿದರು.
ತೆಲಂಗಾಣ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಪ್ರಧಾನಿ, ರಾಜ್ಯದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ರಾಜ್ಯದ ಜನತೆ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ. ಎಲ್ಲರೂ ತೆಲಂಗಾಣದಲ್ಲಿ ಬದಲಾವಣೆಯತ್ತ ಚಿತ್ತ ಹರಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ‘ಅಭಿವೃದ್ಧಿ ವಿರೋಧಿ’ ಸರ್ಕಾರ ಇಲ್ಲಿದೆ. ಈಗ ಅದನ್ನು ಹೊರಹಾಕುವ ಸಮಯ ಬಂದಿದೆ. ರಾಜ್ಯದಲ್ಲಿ ‘ಕಮಲ’ ಅರಳುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.
ಇದನ್ನೂ ಓದಿ: ಮಹಾರಾಷ್ಟ್ರ ಪಂಚಾಯತ್ ಚುನಾವಣೆ ಫಲಿತಾಂಶ: ಮರಾಠಾ vs ಒಬಿಸಿ ಧ್ರುವೀಕರಣ ಸ್ಪಷ್ಟ ಎಂದ ವಿಶ್ಲೇಷಕರು
ಬಿಆರ್‌ಎಸ್ ತನ್ನ ಕುಟುಂಬಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ಲಂಗಾಣ ಸರ್ಕಾರ ಬಿಸಿಯೂಟದತ್ತ ಗಮನ ಹರಿಸಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಿಆರ್‌ಎಸ್ ಸಿ ಟೀಮ್ ಆಗಿದೆ ಎಂದು ಮೋದಿ ಟೀಕಿಸಿದರು. ಮೋದಿಯನ್ನು ಪ್ರಧಾನಿ ಮಾಡಲು ಎಲ್ಬಿ ಸ್ಟೇಡಿಯಂನಲ್ಲಿ ಬುನಾದಿ ಹಾಕಲಾಗಿತ್ತು. ಇದೀಗ ತೆಲಂಗಾಣದಲ್ಲಿ ಹಿಂದುಳಿದ ವರ್ಗದವರನ್ನು ಮುಖ್ಯಮಂತ್ರಿ ಮಾಡುವ ಪ್ರಕ್ರಿಯೆಯ ಆರಂಭವೂ ಇಲ್ಲೇ ನಡೆಯಲಿದೆ ಎಂದು ಪ್ರಧಾನಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Tue, 7 November 23