ಎಷ್ಟೇ ಒತ್ತಡ ಬಂದರೂ ರೈತರಿಗೆ ತೊಂದರೆಯಾಗಲು ಬಿಡೋದಿಲ್ಲ; ಟ್ರಂಪ್ ಸುಂಕದ ಬಗ್ಗೆ ಪ್ರಧಾನಿ ಮೋದಿ ಭರವಸೆ

ನಮ್ಮ ಮೇಲೆ ಎಷ್ಟೇ ಒತ್ತಡ ಬಂದರೂ ಅದಕ್ಕೆ ನಾವು ಪರಿಹಾರ ಕಂಡುಕೊಳ್ಳುತ್ತೇವೆ. ನಮಗೆ ರೈತರ ಹಿತಾಸಕ್ತಿ ಮುಖ್ಯ ಎಂದು ಅಮೆರಿಕದ ಶೇ. 50ರಷ್ಟು ಸುಂಕಗಳ ನಡುವೆ ರೈತರು, ಸಣ್ಣ ವ್ಯಾಪಾರ ಮಾಲೀಕರಿಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಅಹಮದಾಬಾದ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಷ್ಟೇ ಒತ್ತಡ ಬಂದರೂ ಭಾರತ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್ 27ರಿಂದ ಭಾರತದ ಮೇಲೆ ಅಮೆರಿಕದ ಶೇ.50ರಷ್ಟು ಸುಂಕ ಜಾರಿಯಾಗಲಿದೆ.

ಎಷ್ಟೇ ಒತ್ತಡ ಬಂದರೂ ರೈತರಿಗೆ ತೊಂದರೆಯಾಗಲು ಬಿಡೋದಿಲ್ಲ; ಟ್ರಂಪ್ ಸುಂಕದ ಬಗ್ಗೆ ಪ್ರಧಾನಿ ಮೋದಿ ಭರವಸೆ
Modi In Ahmedabad

Updated on: Aug 25, 2025 | 8:46 PM

ಅಹಮದಾಬಾದ್, ಆಗಸ್ಟ್ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump Tariff) ಭಾರತದ ಮೇಲೆ ವಿಧಿಸಿರುವ ಹೆಚ್ಚುವರಿ ಸುಂಕಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), “ನಮ್ಮ ಸರ್ಕಾರ ಸಣ್ಣ ಉದ್ಯಮಿಗಳು, ರೈತರು ಮತ್ತು ಪ್ರಾಣಿ ಪಾಲನೆ ಮಾಡುವವರಿಗೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ಎಷ್ಟೇ ಒತ್ತಡ ಬಂದರೂ ನಮ್ಮ ಸರ್ಕಾರ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತದೆ” ಎಂದು ಹೇಳಿದ್ದಾರೆ. ಆಗಸ್ಟ್ 27ರಿಂದ ಅಮೆರಿಕದ ಹೊಸ ಸುಂಕ ನೀತಿ ಅನ್ವಯವಾಗಲಿದೆ. ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸುವ ಮೂಲಕ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಇಂದು ಸಂಜೆ ಅಹಮದಾಬಾದ್​​ ರ್ಯಾಲಿಯ ಬಳಿಕ ಪ್ರತಿಕ್ರಿಯಿಸಿದ್ದಾರೆ.

“ಇಂದು ಜಗತ್ತಿನಲ್ಲಿ ಎಲ್ಲರೂ ಆರ್ಥಿಕ ಹಿತಾಸಕ್ತಿಗಳನ್ನು ಆಧರಿಸಿದ ರಾಜಕೀಯದಲ್ಲಿ ನಿರತರಾಗಿದ್ದಾರೆ. ಅಹಮದಾಬಾದ್‌ನ ಈ ಭೂಮಿಯಿಂದ ನಾನು ನನ್ನ ಸಣ್ಣ ಉದ್ಯಮಿಗಳು, ಸಣ್ಣ ಅಂಗಡಿಯ ಮಾಲೀಕರು, ರೈತರು, ಪಶುಸಂಗೋಪನೆ ಮಾಡುವವವರಿಗೆ ಭರವಸೆ ನೀಡುತ್ತೇನೆ; ನಿಮ್ಮ ಹಿತಾಸಕ್ತಿಗಳು ಈ ನಿಮ್ಮ ಮೋದಿಗೆ ಬಹಳ ಮುಖ್ಯ. ನನ್ನ ಸರ್ಕಾರವು ಸಣ್ಣ ಉದ್ಯಮಿಗಳು, ರೈತರು ಮತ್ತು ಪ್ರಾಣಿ ಪಾಲಕರಿಗೆ ಯಾವುದೇ ಹಾನಿಯಾಗಲು ಎಂದಿಗೂ ಬಿಡುವುದಿಲ್ಲ. ಎಷ್ಟೇ ಒತ್ತಡ ಬಂದರೂ, ನಾವು ತಡೆದುಕೊಳ್ಳುತ್ತೇವೆ. ಇಂದು, ಆತ್ಮನಿರ್ಭರ ಭಾರತ ಅಭಿಯಾನವು ಗುಜರಾತ್‌ನಿಂದ ಸಾಕಷ್ಟು ಶಕ್ತಿಯನ್ನು ಪಡೆಯುತ್ತಿದೆ. ಇದರ ಹಿಂದೆ ಎರಡು ದಶಕಗಳ ಕಠಿಣ ಪರಿಶ್ರಮವಿದೆ” ಎಂದು ಮೋದಿ ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ಭಾರತ, ಚೀನಾ ಏಷ್ಯಾದ ಡಬಲ್ ಎಂಜಿನ್‌ಗಳು; ಟ್ರಂಪ್ ಸುಂಕದ ವಿರುದ್ಧ ಭಾರತಕ್ಕೆ ಬೀಜಿಂಗ್ ಬೆಂಬಲ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಆಪರೇಷನ್ ಸಿಂಧೂರ್ ನಮ್ಮ ಸೇನೆಯ ಶೌರ್ಯದ, ಭಾರತದ ಇಚ್ಛಾಶಕ್ತಿಯ ಸಂಕೇತವಾಗಿದೆ. ಭಯೋತ್ಪಾದಕರು ಮತ್ತು ಭಯೋತ್ಪಾದಕರ ಯಜಮಾನರು ಎಲ್ಲಿ ಅಡಗಿದ್ದರೂ ಭಾರತ ಬಿಡುವುದಿಲ್ಲ. ಭಾರತ ಪಹಲ್ಗಾಮ್‌ ದಾಳಿಗೆ ಹೇಗೆ ಸೇಡು ತೀರಿಸಿಕೊಂಡಿದೆ ಎಂದು ಜಗತ್ತು ನೋಡಿದೆ. ನಾವು ನೂರಾರು ಕಿಲೋಮೀಟರ್ ಪಾಕಿಸ್ತಾನದ ಒಳಗೆ ಹೋಗಿ ಭಯೋತ್ಪಾದನೆಯ ಕೇಂದ್ರದ ಮೇಲೆ ದಾಳಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ನಿಮಗೆ ಇಷ್ಟವಿಲ್ಲದಿದ್ದರೆ ಖರೀದಿಸಬೇಡಿ; ರಷ್ಯಾ ತೈಲ ಖರೀದಿ ಕುರಿತು ಹೆಚ್ಚಿನ ಸುಂಕ ವಿಧಿಸಿದ ಅಮೆರಿಕಕ್ಕೆ ಸಚಿವ ಜೈಶಂಕರ್ ತಿರುಗೇಟು


ಅಮೆರಿಕದಲ್ಲಿ ಸುಂಕಗಳ ಪರಿಣಾಮವನ್ನು ಎದುರಿಸುತ್ತಿರುವ ಭಾರತೀಯ ರಫ್ತುದಾರರಿಗೆ ಕ್ರಮಗಳನ್ನು ಪರಿಶೀಲಿಸಲು ಪ್ರಧಾನ ಮಂತ್ರಿ ಕಚೇರಿ ಆಗಸ್ಟ್ 26ರಂದು ಉನ್ನತ ಮಟ್ಟದ ಸಭೆಯನ್ನು ಕರೆಯಲಿದೆ. ಈ ಸಭೆಯು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ನಿರೀಕ್ಷೆಯಿದೆ. ಆಗಸ್ಟ್ 27ರಿಂದ ಅಮೆರಿಕದ ನೂತನ ಸುಂಕ ನೀತಿ ಜಾರಿಗೆ ಬರಲಿದೆ. ಆಗಸ್ಟ್‌ನಲ್ಲಿ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾರತೀಯ ರಫ್ತಿನ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕವನ್ನು ವಿಧಿಸಿತು. ಇದರಿಂದ ಒಟ್ಟು ಸುಂಕದ ಪ್ರಮಾಣ ಶೇ. 50ಕ್ಕೆ ಏರಿಕೆಯಾಗಿದೆ. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ ಎಂಬ ಆರೋಪದಲ್ಲಿ ದಂಡದ ರೂಪದಲ್ಲಿ ಅಮೆರಿಕ ಶೇ. 25ರಷ್ಟು ಹೆಚ್ಚುವರಿ ಸುಂಕ ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:44 pm, Mon, 25 August 25