ಸಚಿವರನ್ನು ವಜಾಗೊಳಿಸುವ ಮಸೂದೆಯಲ್ಲಿ ಮೋದಿ ತಮಗೆ ವಿನಾಯಿತಿ ಬೇಡ ಎಂದಿದ್ದರು; ಕಿರಣ್ ರಿಜಿಜು
30 ದಿನಗಳಿಗಿಂತಲೂ ಹೆಚ್ಚು ದಿನ ಜೈಲಿನಲ್ಲಿದ್ದರೆ ಅಥವಾ ಗಂಭೀರ ಅಪರಾಧಕ್ಕೆ ಒಳಗಾದರೆ ಅಂತಹ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಯನ್ನು ಆ ಸ್ಥಾನದಿಂದ ವಜಾಗೊಳಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಈ ಮಸೂದೆಯಲ್ಲಿ ಪ್ರಧಾನಮಂತ್ರಿಗೆ ವಿನಾಯಿತಿ ನೀಡುವ ಪ್ರಸ್ತಾಪ ಬಂದಾಗ ಅದನ್ನು ನರೇಂದ್ರ ಮೋದಿ ನಿರಾಕರಿಸಿದ್ದರು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ನವದೆಹಲಿ, ಆಗಸ್ಟ್ 23: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಪ್ರಧಾನಿಗಳು (Prime Ministers), ಮುಖ್ಯಮಂತ್ರಿಗಳು (Chief Ministers) ಮತ್ತು ಸಚಿವರನ್ನು ಪದಚ್ಯುತಗೊಳಿಸುವುದನ್ನು ಕಡ್ಡಾಯಗೊಳಿಸುವ ಹೊಸ ಮಸೂದೆಯ ನಿಬಂಧನೆಗಳಿಂದ ತಮಗೆ ವಿನಾಯಿತಿ ನೀಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿರಸ್ಕರಿಸಿದ್ದರು. ನನ್ನನ್ನೂ ಈ ಮಸೂದೆಯಲ್ಲಿ ಸೇರಿಸಿ ಎಂದು ಅವರು ಹೇಳಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ.
ಸಂಪುಟ ಚರ್ಚೆಯ ಸಮಯದಲ್ಲಿ ಪ್ರಧಾನಿ ಮೋದಿಯನ್ನು ಈ ಕ್ರಮದಿಂದ ಹೊರಗಿಡಬೇಕು ಎಂಬ ಸಲಹೆ ಇತ್ತು. ಆದರೆ, ಪ್ರಧಾನಿ ಮೋದಿ ಈ ವಿಚಾರವನ್ನು ನಿರಾಕರಿಸಿದರು ಎಂದು ಕಿರಣ್ ರಿಜಿಜು ಹೇಳಿದ್ದಾರೆ. “ಪ್ರಧಾನಿಯನ್ನು ಈ ಮಸೂದೆಯಿಂದ ಹೊರಗಿಡುವ ಶಿಫಾರಸನ್ನು ಪ್ರಧಾನಿ ಮೋದಿ ಒಪ್ಪಲಿಲ್ಲ. ಈ ಮಸೂದೆಯಿಂದ ಪ್ರಧಾನಿಗೆ ವಿನಾಯಿತಿ ನೀಡುವ ಪ್ರಸ್ತಾಪವನ್ನು ಮೋದಿ ನಿರಾಕರಿಸಿದರು. ಪ್ರಧಾನಿ ಕೂಡ ಒಬ್ಬ ನಾಗರಿಕ, ಅವರಿಗೆ ವಿಶೇಷ ರಕ್ಷಣೆ ಇರಬಾರದು ಎಂದು ಮೋದಿ ಹೇಳಿದ್ದರು” ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಇದನ್ನೂ ಓದಿ: ತಿದ್ದುಪಡಿ ಮಸೂದೆಯ ಪೇಪರ್ ಹರಿದು ಅಮಿತ್ ಶಾ ಮೇಲೆಸೆದ ವಿರೋಧ ಪಕ್ಷಗಳ ಸಂಸದರು
ಬಿಜೆಪಿ ಸೇರಿದಂತೆ ಪಕ್ಷಗಳಾದ್ಯಂತದ ನಾಯಕರಿಗೆ ಈ ಮಸೂದೆ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚಿನ ಮುಖ್ಯಮಂತ್ರಿಗಳು ನಮ್ಮ ಪಕ್ಷದವರು. ನಮ್ಮ ಜನರು ತಪ್ಪುಗಳನ್ನು ಮಾಡಿದರೆ ಅವರು ತಮ್ಮ ಹುದ್ದೆಗಳನ್ನು ತ್ಯಜಿಸಬೇಕಾಗುತ್ತದೆ. ನೀತಿಶಾಸ್ತ್ರವೂ ಅರ್ಥಪೂರ್ಣವಾಗಿರಬೇಕು. ಕೇಂದ್ರದಲ್ಲಿ ನೀತಿಶಾಸ್ತ್ರವನ್ನು ಉಳಿಸಿಕೊಂಡಿದ್ದರೆ ವಿರೋಧ ಪಕ್ಷಗಳು ಈ ಮಸೂದೆಯನ್ನು ಸ್ವಾಗತಿಸುತ್ತಿದ್ದವು” ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
#WATCH | Delhi | On the bill for removal of the PM, CMs, and ministers held on serious criminal charges, Union Minister Kiren Rijiju says, “PM Modi told the cabinet that the recommendation is to keep the prime minister out of this bill, but he did not agree. PM Modi refused to… pic.twitter.com/5zCHyCcddj
— ANI (@ANI) August 23, 2025
ಸಂವಿಧಾನ (130ನೇ ತಿದ್ದುಪಡಿ) ಮಸೂದೆ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ ಈ ಮೂರು ಮಸೂದೆಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ಅನುಭವಿಸಿದರೆ ಹಾಲಿ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು ಬಂಧಿಸಿದರೆ ಅಥವಾ ಸತತ 30 ದಿನಗಳ ಕಾಲ ಬಂಧನದಲ್ಲಿಟ್ಟರೆ 1 ತಿಂಗಳೊಳಗೆ ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು ಎಂದು ಪ್ರಸ್ತಾಪಿಸುತ್ತವೆ. ಆದರೆ, ಈ ಮಸೂದೆಯನ್ನು ಅಮಿತ್ ಶಾ ಮಂಡಿಸುತ್ತಿದ್ದಂತೆ ವಿರೋಧ ಪಕ್ಷಗಳು ವಿರೋಧಿಸಿದವು.
ಇದನ್ನೂ ಓದಿ: ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಮಂಡಿಸಿದ ಅಮಿತ್ ಶಾ
ಲೋಕಸಭೆಯ ನಿರ್ಣಯವು ಶಾಸನವನ್ನು ಪರಿಶೀಲಿಸಲು 31 ಸದಸ್ಯರ ಜಂಟಿ ಸಮಿತಿಯನ್ನು ಸ್ಥಾಪಿಸಿತು. ಇದರಲ್ಲಿ ಕೆಳಮನೆಯ 21 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರು ಸೇರಿದ್ದಾರೆ. ನವೆಂಬರ್ ಮೂರನೇ ವಾರದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ರಾಜ್ಯಸಭೆಯು ಗುರುವಾರ ತನ್ನ 10 ಪ್ರತಿನಿಧಿಗಳ ನಾಮನಿರ್ದೇಶನವನ್ನು ಸಹ ಅನುಮೋದಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Sat, 23 August 25




