ಗುವಾಹಟಿ, ಸೆಪ್ಟೆಂಬರ್ 13: ಅಸ್ಸಾಂನ ಪ್ರಸಿದ್ಧ ಗಾಯಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾದ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ (Dr Bhupen Hazarika) ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಇಂದು ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 100 ರೂ. ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದರು. ಹಾಗೇ, ಪ್ರಸಿದ್ಧ ಲೇಖಕಿ ಅನುರಾಧಾ ಶರ್ಮಾ ಬೋರ್ಪುಜಾರಿ ಬರೆದ ಡಾ. ಭೂಪೇನ್ ಹಜಾರಿಕಾ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಕೂಡ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಡಾ. ಭೂಪೇನ್ ಹಜಾರಿಕಾ ಅವರು ಅಸ್ಸಾಂನಲ್ಲಿ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವಿಸಲ್ಪಟ್ಟ ಮೊದಲ ವ್ಯಕ್ತಿಯಾಗಿದ್ದಾರೆ. ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಮುಂಬೈನ ಭಾರತ ಸರ್ಕಾರಿ ಟಂಕಸಾಲೆಯಲ್ಲಿ ಮುದ್ರಿಸಲಾದ 100 ರೂ. ನಾಣ್ಯವು ಒಟ್ಟು 40 ಗ್ರಾಂ ತೂಕವಿದ್ದು, ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟಿದೆ.
ಈ ವೇಳೆ ಭೂಪೇನ್ ಹಜಾರಿಕಾ ಅವರ ಶತಮಾನೋತ್ಸವದ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಹಜಾರಿಕಾ ಭೌತಿಕವಾಗಿ ಇಲ್ಲದಿದ್ದರೂ, ಅವರ ಧ್ವನಿ ಜನರಿಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು. “ಕೆಲವೇ ದಿನಗಳ ಹಿಂದೆ, ಸೆಪ್ಟೆಂಬರ್ 8ರಂದು ಭೂಪೇನ್ ಹಜಾರಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಭೂಪೇನ್ ದಾ ಅವರಿಗೆ ಮೀಸಲಾಗಿರುವ ಲೇಖನದಲ್ಲಿ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಅವರ ಜನ್ಮ ಶತಮಾನೋತ್ಸವ ವರ್ಷದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾವೆಲ್ಲರೂ ಭೂಪೇನ್ ದಾ ಅವರನ್ನು ಪ್ರೀತಿಯಿಂದ ‘ಸುಧಾ ಕೊಂಥೋ’ ಎಂದು ಕರೆಯುತ್ತಿದ್ದೆವು. ಭೂಪೇನ್ ಹಜಾರಿಕಾ ಅವರ ಸಂಗೀತವು ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಒಳಗೊಂಡಿದೆ. ಅವರು ಭಾರತದ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಬೇರೂರಿದ್ದರು” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಸಬಲೀಕರಣಕ್ಕೆ ಉದಾಹರಣೆ; ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿಗೆ ಮೋದಿ ಅಭಿನಂದನೆ
#WATCH | Guwahati, Assam: Prime Minister Narendra Modi attended the function organised to commemorate the 100th Birth Anniversary of Bharat Ratna Dr. Bhupen Hazarika in Guwahati.
(Source: ANI/DD) pic.twitter.com/jabH7foSAs
— ANI (@ANI) September 13, 2025
“ದಶಕಗಳ ಹಿಂದೆ ಈಶಾನ್ಯವು ನಿರ್ಲಕ್ಷ್ಯಕ್ಕೆ ಬಲಿಯಾಗಿ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದದ ಬೆಂಕಿಯಲ್ಲಿ ಸುಟ್ಟುಹೋದಾಗ ಭೂಪೇನ್ ದಾ ಆ ಕಷ್ಟದ ಸಮಯದಲ್ಲೂ ಭಾರತದ ಏಕತೆಗೆ ಧ್ವನಿ ನೀಡುತ್ತಲೇ ಇದ್ದರು. ಅವರು ಸಮೃದ್ಧ ಈಶಾನ್ಯದ ಕನಸು ಕಂಡಿದ್ದರು. ಅವರು ಈಶಾನ್ಯಕ್ಕಾಗಿ ಹಾಡುಗಳನ್ನು ಹಾಡಿದರು. ಅವರು ಅಸ್ಸಾಂಗಾಗಿ ಹಾಡುಗಳನ್ನು ಹಾಡಿದರು. ಇಂದು, ಈಶಾನ್ಯಕ್ಕಾಗಿ ಅವರ ಕನಸುಗಳನ್ನು ನನಸಾಗಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Sat, 13 September 25