
ನವದೆಹಲಿ, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ನೇಪಾಳಿ ಪ್ರಧಾನಿ ಸುಶೀಲಾ ಕರ್ಕಿ (Sushila Karki) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇತ್ತೀಚಿನ ಪ್ರತಿಭಟನೆಯ ನಡುವೆ ದೇಶದಲ್ಲಿ ಸಂಭವಿಸಿದ ಜೀವಹಾನಿಗೆ ಅವರು ಸಂತಾಪ ಸೂಚಿಸಿದ್ದಾರೆ. ಸೆಪ್ಟೆಂಬರ್ 19ರಂದು ನಡೆಯಲಿರುವ ನೇಪಾಳದ ರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
“ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿ ಸುಶೀಲಾ ಕರ್ಕಿ ಅವರೊಂದಿಗೆ ಮಾತುಕತೆ ನಡೆಸಿದೆ. ಇತ್ತೀಚಿನ ದುರಂತ ಜೀವಹಾನಿಗೆ ಸಂತಾಪ ಸೂಚಿಸಿದೆ . ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ನೇಪಾಳ ಮಾಡುವ ಪ್ರಯತ್ನಗಳಿಗೆ ಭಾರತದ ದೃಢ ಬೆಂಬಲವನ್ನು ಪುನರುಚ್ಚರಿಸಿದೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಅಲ್ಲದೆ, ನಾಳೆಯ ರಾಷ್ಟ್ರೀಯ ದಿನದಂದು ನಾನು ಅವರಿಗೆ ಮತ್ತು ನೇಪಾಳದ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದೇನೆ” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: PM Modi Birthday: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೂ ಪ್ರಧಾನಿ ಮೋದಿ ಫೋಟೋ!
ನೇಪಾಳದಲ್ಲಿ ನಡೆದ ಪ್ರತಿಭಟನೆಯಿಂದಾಗಿ 59 ಪ್ರತಿಭಟನಾಕಾರರು, 10 ಕೈದಿಗಳು ಮತ್ತು ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರದ ನಂತರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಭಾನುವಾರ, ಸೆಪ್ಟೆಂಬರ್ 8 ಮತ್ತು 9ರಂದು ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು “ಹುತಾತ್ಮರು” ಎಂದು ಘೋಷಿಸಲಾಗುವುದು ಎಂದು ಪ್ರಧಾನಿ ಸುಶೀಲಾ ಕರ್ಕಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಸಬಲೀಕರಣಕ್ಕೆ ಉದಾಹರಣೆ; ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿಗೆ ಮೋದಿ ಅಭಿನಂದನೆ
ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದವರ ಗೌರವಾರ್ಥ ಸೆ. 17ರ ಬುಧವಾರ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಯಿತು. ಇದೇ ಕಾರಣಕ್ಕಾಗಿ ದೇಶಾದ್ಯಂತ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟವು. ಕಳೆದ ವಾರ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ, ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಮತ್ತು ಇದೀಗ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿರುವ ಸುಶೀಲಾ ಕರ್ಕಿ ಭಾರತದಲ್ಲಿ ವ್ಯಾಸಂಗ ಮಾಡಿದ್ದರು. ಹೀಗಾಗಿ. ಅವರಿಗೂ ಭಾರತಕ್ಕೂ ಆರಂಭದಿಂದಲೇ ಸಂಬಂಧವಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ