AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠವು ವಜಾಗೊಳಿಸಿತ್ತು. ಈ ಆದೇಶವನ್ನು ನೀಡುವಾಗ, ಸಿಜೆಐ ಅರ್ಜಿಯಲ್ಲಿ "ನಿಮ್ಮ ದೇವರನ್ನೇ ಏನಾದರೂ ಮಾಡಲು ಕೇಳಿ" ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಸಿಜೆಐ ಸ್ಪಷ್ಟನೆ ನೀಡಿದ್ದಾರೆ.

'ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ'; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ
Cji Gavai
ಸುಷ್ಮಾ ಚಕ್ರೆ
|

Updated on:Sep 18, 2025 | 4:27 PM

Share

ನವದೆಹಲಿ, ಸೆಪ್ಟೆಂಬರ್ 18: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ (BR Gavai) ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾದ ಮಧ್ಯಪ್ರದೇಶದ ಜವರಿ ದೇವಾಲಯದಲ್ಲಿನ ವಿಷ್ಣುವಿನ ವಿಗ್ರಹ ಮರುಸ್ಥಾಪಿಸುವ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಹೇಳಿದ್ದ ಮಾತು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಪಷ್ಟನೆ ನೀಡಿರುವ ಸಿಜೆಐ ಗವಾಯಿ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿರುವ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹದ ಕುರಿತು ತಮ್ಮ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ಈ ವಿವಾದ ಉದ್ಭವಿಸಿತ್ತು. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾದ ಮಧ್ಯಪ್ರದೇಶದ ಜವರಿ ದೇವಾಲಯದಲ್ಲಿ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಗವಾಯಿ ವಜಾಗೊಳಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ಅವರು ಇದನ್ನು “ಪ್ರಚಾರ ಹಿತಾಸಕ್ತಿಯ ಮೊಕದ್ದಮೆ” ಎಂದು ಕರೆದಿದ್ದರು.

ಇದನ್ನೂ ಓದಿ: ನೇಪಾಳದಲ್ಲಿ ಏನಾಗುತ್ತಿದೆ ನೋಡಿ, ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆಪಡಿ; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಶ್ಲಾಘನೆ

“ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿ ಮೊಕದ್ದಮೆ. ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿ. ನೀವು ವಿಷ್ಣುವಿನ ದೊಡ್ಡ ಭಕ್ತ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ನೀವೇ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ” ಎಂದು ಸಿಜೆಐ ಗವಾಯಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ವ್ಯಾಪ್ತಿಗೆ ಬರುತ್ತದೆ. ವಿಗ್ರಹದ ಮರುಸ್ಥಾಪನೆಗೆ ಪುರಾತತ್ವ ಇಲಾಖೆ ಸಮ್ಮತಿ ನೀಡುತ್ತದೆಯೇ ಇಲ್ಲವೇ ಎಂಬಿತ್ಯಾದಿ ಹಲವು ಸಮಸ್ಯೆಗಳು ಇದರಲ್ಲಿವೆ ಎಂದು ಗವಾಯಿ ಅವರ ನ್ಯಾಯಪೀಠ ಹೇಳಿತ್ತು.

ಹಾಗೇ, “ವಿಷ್ಣು ಭಕ್ತರಾದ ನೀವು ಶೈವ ಧರ್ಮವನ್ನು ವಿರೋಧಿಸದಿದ್ದರೆ ನೀವು ಅಲ್ಲಿಗೆ ಹೋಗಿ ಪೂಜಿಸಬಹುದು. ಖಜುರಾಹೊದಲ್ಲಿ ಅತ್ಯಂತ ದೊಡ್ಡ ಶಿವಲಿಂಗವಿದೆ” ಎಂದು ಸಿಜೆಐ ಗವಾಯಿ ಹೇಳಿದ್ದರು. ಈ ಕುರಿತು ತೀವ್ರ ಚರ್ಚೆಗಳು ನಡೆದಿತ್ತು.

ಇದನ್ನೂ ಓದಿ: ನಿವೃತ್ತಿಯ ನಂತರ ಯಾವುದೇ ಸರ್ಕಾರಿ ಹುದ್ದೆ ಸ್ವೀಕರಿಸುವುದಿಲ್ಲ; ಸಿಜೆಐ ಗವಾಯಿ ಘೋಷಣೆ

ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್​​ನಲ್ಲೇ ಸ್ಪಷ್ಟನೆ ನೀಡಿರುವ ಸಿಜೆಐ ಗವಾಯಿ, “ನಾನು ಹೇಳಿದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ಯಾರೋ ನನಗೆ ಹೇಳಿದರು. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:27 pm, Thu, 18 September 25