ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲ್ ಎನ್‌ಕೌಂಟರ್; 5 ಲಕ್ಷ ರೂ. ಬಹುಮಾನ ಹೊಂದಿದ್ದ ಮಹಿಳಾ ನಕ್ಸಲೈಟ್ ಹತ್ಯೆ
ನಿನ್ನೆಯಷ್ಟೇ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ 12 ನಕ್ಸಲೈಟ್‌ಗಳು ಶರಣಾಗಿದ್ದರು. ಅವರಲ್ಲಿ ಒಟ್ಟು 18 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಂದಿಯೂ ಸೇರಿದ್ದರು. 2025ರಲ್ಲಿ ಇಲ್ಲಿಯವರೆಗೆ ಛತ್ತೀಸ್‌ಗಢದಾದ್ಯಂತ ವಿವಿಧ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಒಟ್ಟು 247 ನಕ್ಸಲೀಯರನ್ನು ಕೊಂದಿವೆ. ಭದ್ರತಾ ಸಿಬ್ಬಂದಿ 35 ವರ್ಷದ ಬುಸ್ಕಿ ನುಪ್ಪೊ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.

ರಾಯ್‌ಪುರ, ಸೆಪ್ಟೆಂಬರ್ 18: ಇಂದು ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ಎನ್‌ಕೌಂಟರ್ (Encounter) ಕಾರ್ಯಾಚರಣೆಯಲ್ಲಿ 5 ಲಕ್ಷ ರೂ. ಬಹುಮಾನ ಹೊಂದಿದ್ದ ಮಹಿಳಾ ನಕ್ಸಲೈಟ್ ಸಾವನ್ನಪ್ಪಿದ್ದಾರೆ. ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಬುಸ್ಕಿ ನುಪ್ಪೊ ಎಂದು ಗುರುತಿಸಲ್ಪಟ್ಟ ಈ ನಕ್ಸಲೈಟ್ ಅನೇಕ ಹಿಂಸಾತ್ಮಕ ಘಟನೆಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಅಧಿಕಾರಿಗಳ ಪ್ರಕಾರ, ಗಡಿರಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಫ್ಡಿ ಮತ್ತು ಪೆರ್ಮಾಪರ ಗ್ರಾಮಗಳ ನಡುವಿನ ಅರಣ್ಯ ಬೆಟ್ಟದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ. ರಾಜ್ಯ ಪೊಲೀಸರ ವಿಶೇಷ ಘಟಕವಾದ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ತಂಡವು ಈ ಪ್ರದೇಶದಲ್ಲಿ ನಕ್ಸಲೈಟ್ ಇರುವಿಕೆಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಗುಂಡಿನ ಚಕಮಕಿ ಮುಗಿದ ನಂತರ, ಭದ್ರತಾ ಸಿಬ್ಬಂದಿ 35 ವರ್ಷದ ಬುಸ್ಕಿ ನುಪ್ಪೊ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಅವರು ಮಾವೋವಾದಿಗಳ ಮಲಂಗೀರ್ ಪ್ರದೇಶ ಸಮಿತಿಯ ಸದಸ್ಯರಾಗಿದ್ದರು. ಸುಕ್ಮಾ ಮತ್ತು ದಂತೇವಾಡ ಜಿಲ್ಲೆಗಳ 3 ಪೊಲೀಸ್ ಠಾಣೆಗಳಲ್ಲಿ ಹರಡಿರುವ 9 ಗಂಭೀರ ನಕ್ಸಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದರು. ಎನ್‌ಕೌಂಟರ್ ಸ್ಥಳದಿಂದ ಪೊಲೀಸರು 315 ಬೋರ್ ರೈಫಲ್ ಜೊತೆಗೆ 5 ಕಾರ್ಟ್ರಿಡ್ಜ್‌ಗಳು, 1 ವೈರ್‌ಲೆಸ್ ಸೆಟ್, 8 ಡಿಟೋನೇಟರ್‌ಗಳು, ಸುಮಾರು 10 ಮೀಟರ್ ಕಾರ್ಡೆಕ್ಸ್ ವೈರ್, 4 ಜೆಲಾಟಿನ್ ಸ್ಟಿಕ್‌ಗಳು, ಗನ್‌ಪೌಡರ್, ಒಂದು ರೇಡಿಯೋ, ಮಾವೋವಾದಿ ಸಾಹಿತ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಹೈ ಪ್ರೊಫೈಲ್ ನಕ್ಸಲ್ ಸೇರಿದಂತೆ ಮೂವರು ಮಾವೋವಾದಿಗಳ ಎನ್‌ಕೌಂಟರ್
ಇದಕ್ಕೂ ಒಂದು ದಿನ ಮೊದಲು, ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ 12 ನಕ್ಸಲರು ಶರಣಾಗಿದ್ದರು. ಅವರನ್ನು ಹಿಡಿದುಕೊಟ್ಟರೆ ಒಟ್ಟು 18 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. 9 ಮಂದಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಅವರಲ್ಲಿ 5 ಮಹಿಳೆಯರು ಸೇರಿದ್ದಾರೆ. ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ಅವರ ಪ್ರಕಾರ, ಅವರು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು.
2025ರಲ್ಲಿ ಇಲ್ಲಿಯವರೆಗೆ ಛತ್ತೀಸ್‌ಗಢದಾದ್ಯಂತ ವಿವಿಧ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಒಟ್ಟು 247 ನಕ್ಸಲೀಯರನ್ನು ಕೊಂದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




