ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆ; ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕಾರ
ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಳ್ಳಲು ಜೆನ್-ಝಡ್ ಪ್ರತಿಭಟನಾಕಾರರು ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಆಯ್ಕೆ ಮಾಡಿದ್ದರು. ಸುಶೀಲಾ ಕರ್ಕಿ ನೇಪಾಳದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಈಗ ನೇಪಾಳ ದೇಶದ ಮೊದಲ ಮಹಿಳಾ ಪ್ರಧಾನಿಯೂ ಆಗಿದ್ದಾರೆ.

ಕಠ್ಮಂಡು, ಸೆಪ್ಟೆಂಬರ್ 12: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಇಂದು (ಶುಕ್ರವಾರ) ರಾತ್ರಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ನೇಪಾಳ ದೇಶದ ಮೊದಲ ಮಹಿಳಾ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಹುದ್ದೆಗೆ ಸ್ಪರ್ಧಿಗಳೆಂದು ಪರಿಗಣಿಸಲಾಗಿದ್ದ ಕುಲ್ಮನ್ ಘಿಸಿಂಗ್ ಮತ್ತು ಸುಡಾನ್ ಗುರುಂಗ್ ಸೇರಿದಂತೆ ಅನೇಕ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಅವರು ಪ್ರಮಾಣವಚನ ಸ್ವೀಕರಿಸಿದರು.
ದೇಶದ ಜೆನ್- ಝಡ್ ನೇತೃತ್ವದ ತೀವ್ರ ಪ್ರತಿಭಟನೆಗಳ ನಂತರ ನೇಪಾಳದ ಪ್ರಧಾನಿ ಹಾಗೂ ಅಧ್ಯಕ್ಷರು ರಾಜೀನಾಮೆ ನೀಡಬೇಕಾಯಿತು. ಇದರಿಂದ ಸರ್ಕಾರ ಪತನವಾಯಿತು, ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿದ್ದು, ಈ ಸರ್ಕಾರದ ಮುಖ್ಯಸ್ಥರಾಗಿ ಸುಶೀಲಾ ಕರ್ಕಿ ನೇತೃತ್ವ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ; ಇನ್ನು 6 ತಿಂಗಳಲ್ಲಿ ಚುನಾವಣೆ
ಪ್ರತಿಭಟನಾಕಾರರು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ, 73 ವರ್ಷದ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ನಂತರ ಸಂಸತ್ತನ್ನು ವಿಸರ್ಜಿಸಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಬೇಕೆಂಬ ಪ್ರತಿಭಟನಾಕಾರರ ಬೇಡಿಕೆಗಳನ್ನು ಅಂಗೀಕರಿಸಲಾಯಿತು. ಪ್ರಮಾಣ ವಚನ ಸಮಾರಂಭಕ್ಕೆ ಸಂಸತ್ತಿನ ಸ್ಪೀಕರ್ ಮತ್ತು ರಾಷ್ಟ್ರೀಯ ಸಭೆಯ ಅಧ್ಯಕ್ಷರನ್ನು ಸಹ ಕರೆಯಲಾಗಿತ್ತು.
VIDEO | Kathmandu, Nepal: Former Chief Justice Sushila Karki set to take oath as Nepal’s interim Prime Minister shortly. Visuals from Shital Niwas.
(Full video available on PTI Videos – https://t.co/n147TvqRQz)
(Source: Third party) pic.twitter.com/xzeF6BJXID
— Press Trust of India (@PTI_News) September 12, 2025
ಇದನ್ನೂ ಓದಿ: ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕ
ನೇಪಾಳದ ಅಧ್ಯಕ್ಷರ ನಿವಾಸವಾದ ಶೀತಲ್ ನಿವಾಸ್‌ನಲ್ಲಿ ಸುಶೀಲಾ ಕರ್ಕಿ ಅವರಿಗೆ ಅಧ್ಯಕ್ಷ ಪೌಡೆಲ್ ಪ್ರಮಾಣವಚನ ಬೋಧಿಸಿದರು. ಸುಶೀಲಾ ಕರ್ಕಿ ಜೊತೆಗೆ, ಕಠ್ಮಂಡು ಮೇಯರ್ ಬಾಲೇಂದ್ರ ಶಾ, ವಿದ್ಯುತ್ ಮಂಡಳಿಯ ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್, ಧರಣ್‌ನ ಮೇಯರ್ ಹರ್ಕಾ ರಾಜ್ ಸಂಪಂಗ್ ರೈ, ಅಕಾ ಹರ್ಕಾ ಸಂಪಂಗ್ ಸೇರಿದಂತೆ ಇತರ ಮೂರು ಹೆಸರುಗಳನ್ನು ಸಹ ಪ್ರಧಾನಿ ಹುದ್ದೆಗೆ ಪರಿಗಣಿಸಲಾಗಿತ್ತು. ಆದರೆ, ಅಂತಿಮವಾಗಿ ಸುಶೀಲಾ ಕರ್ಕಿ ಪರ ಮತಗಳು ಹೆಚ್ಚು ಬಂದಿದ್ದರಿಂದ ಅವರನ್ನು ಆಯ್ಕೆ ಮಾಡಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




