ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಇಂದು ರಾತ್ರಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಪ್ರಮಾಣ ವಚನ ಸ್ವೀಕಾರ
ಯುವಜನರ ತೀವ್ರ ಪ್ರತಿಭಟನೆಯ ನಂತರ ನೇಪಾಳದ ಸರ್ಕಾರ ಪತನವಾಗಿದೆ. ಇದೀಗ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಇಂದು ರಾತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರತಿಭಟನಾಕಾರರ ಬೇಡಿಕೆಗಳನ್ನು ಅವರು ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಉಸ್ತುವಾರಿ ವಹಿಸಿಕೊಳ್ಳಲು ಜೆನ್-ಝಡ್ ಪ್ರತಿಭಟನಾಕಾರರು ಸುಶೀಲಾ ಕರ್ಕಿ ಅವರನ್ನು ಆಯ್ಕೆ ಮಾಡಿದ್ದಾರೆ.

ಕಠ್ಮಂಡು, ಸೆಪ್ಟೆಂಬರ್ 12: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಇಂದು ರಾತ್ರಿ 8.45ಕ್ಕೆ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದ ಜೆನ್-ಝಡ್ ನೇತೃತ್ವದಲ್ಲಿ ದಿನಗಟ್ಟಲೆ ನಡೆದ ಮಾರಕ ಪ್ರತಿಭಟನೆಗಳು ಕೆಪಿ ಶರ್ಮಾ ಓಲಿ ಅವರ ಸರ್ಕಾರವನ್ನು ಉರುಳಿಸಲು ಕಾರಣವಾದ ನಂತರ ಈ ಬೆಳವಣಿಗೆ ಕಂಡುಬಂದಿದೆ.
ಪ್ರತಿಭಟನಾಕಾರರು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಸಂಸತ್ತನ್ನು ವಿಸರ್ಜಿಸಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಬೇಕೆಂಬ ಪ್ರತಿಭಟನಾಕಾರರ ಬೇಡಿಕೆಗಳನ್ನು ಅಂಗೀಕರಿಸಿದ ನಂತರ 73 ವರ್ಷದ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಕ
ಸಂಸತ್ತಿನ ಸ್ಪೀಕರ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರನ್ನು ಸಹ ಪ್ರಮಾಣವಚನ ಸಮಾರಂಭಕ್ಕೆ ಕರೆಯಲಾಗಿದೆ.
ಸುಶೀಲಾ ಕರ್ಕಿ 1979ರಲ್ಲಿ ಬಿರಾಟ್‌ನಗರದಲ್ಲಿ ವಕೀಲರಾಗಿ ತಮ್ಮ ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಉನ್ನತ ಹುದ್ದೆಗಳಿಗೆ ಏರಿದರು, 2009ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು. 2016ರಲ್ಲಿ ಅವರು ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಭ್ರಷ್ಟಾಚಾರದ ವಿರುದ್ಧದ ತಮ್ಮ ರಾಜಿಯಿಲ್ಲದ ನಿಲುವಿನಿಂದಾಗಿ ಅವರು ಮನ್ನಣೆ ಗಳಿಸಿದರು. ಅದರಲ್ಲೂ ಮುಖ್ಯವಾಗಿ ಭ್ರಷ್ಟಾಚಾರದ ಆರೋಪದ ಮೇಲೆ ಹಾಲಿ ಸಚಿವ ಜಯಪ್ರಕಾಶ್ ಗುಪ್ತಾ ಅವರನ್ನು ದೋಷಾರೋಪಣೆ ಮಾಡಿ ಜೈಲಿಗೆ ಹಾಕಿದರು.
ಇದನ್ನೂ ಓದಿ: ನೇಪಾಳದಲ್ಲಿ ಹಿಂಸಾಚಾರ; ಜೈಲಿನಲ್ಲಿ 5 ಬಾಲಾಪರಾಧಿಗಳ ಸಾವು, 7000ಕ್ಕೂ ಅಧಿಕ ಕೈದಿಗಳು ಪರಾರಿ
ಸುಶೀಲಾ ಕರ್ಕಿ ಅವರಿಗೂ ಭಾರತಕ್ಕೂ ಸಂಬಂಧವಿದೆ. ಅವರು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು 1975ರಲ್ಲಿ ಪೂರ್ಣಗೊಳಿಸಿದರು. 1978ರಲ್ಲಿ ನೇಪಾಳದ ತ್ರಿಭುವನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




