ನಾನು ಕೂಡ ಶೀಶ್​ ಮಹಲ್ ನಿರ್ಮಿಸಬಹುದಿತ್ತು; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

|

Updated on: Jan 03, 2025 | 3:17 PM

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೆಜೆ ಕ್ಲಸ್ಟರ್‌ಗಳ ನಿವಾಸಿಗಳಿಗೆ 1,675 ಫ್ಲಾಟ್‌ಗಳು ಮತ್ತು ಎರಡು ನಗರ ಪುನರಾಭಿವೃದ್ಧಿ ಯೋಜನೆಗಳು ಸೇರಿದಂತೆ 4,500 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಮೋದಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಅಶೋಕ್ ವಿಹಾರ್ ಪ್ರದೇಶದ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ಫ್ಲಾಟ್‌ಗಳ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ಮೋದಿ ಕೀಗಳನ್ನು ಹಸ್ತಾಂತರಿಸಿದರು.

ನಾನು ಕೂಡ ಶೀಶ್​ ಮಹಲ್ ನಿರ್ಮಿಸಬಹುದಿತ್ತು; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Pm Modi In Delhi
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಜನವರಿ 3) ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನಸು ಮಾಡಿದ್ದರೆ ನಾನು ಕೂಡ ಶೀಶ್ ಮಹಲ್ ಕಟ್ಟಿಸಿಕೊಳ್ಳಬಹುದಿತ್ತು. ಆದರೆ, ನಾನು ಮನೆಗಳನ್ನು ನೀಡುವ ಮೂಲಕ 4 ಕೋಟಿ ಜನರ ಕನಸುಗಳನ್ನು ನನಸಾಗಿಸಿದೆ. ನಾನು ನನಗಾಗಿ ಎಂದಿಗೂ ಮನೆಯನ್ನು ನಿರ್ಮಿಸಿಕೊಳ್ಳಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕಾರಣ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ದೆಹಲಿಯ ಅಶೋಕ್ ವಿಹಾರ್‌ನ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದಾಗ ತಮಗಾಗಿ ಐಷಾರಾಮಿ ನಿವಾಸವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.


“ಮೋದಿ ಯಾವತ್ತೂ ತಮಗಾಗಿ ಮನೆ ಕಟ್ಟಿಕೊಳ್ಳಲಿಲ್ಲ. ಆದರೆ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ ಎಂಬುದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ನಾನು ಕೂಡ ನನಗಾಗಿ ಶಿಶ್ ಮಹಲ್ ನಿರ್ಮಿಸಿಕೊಳ್ಳಬಹುದಿತ್ತು. ಆದರೆ, ನಾನು ಹಾಗೆ ಮಾಡಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಎಎಪಿ ದೆಹಲಿಗೆ ಆಪತ್ತಾಗಿದೆ. ಮೊದಲು ಕಳ್ಳತನ ಮತ್ತು ದುರಹಂಕಾರವು ದೆಹಲಿಯನ್ನು ದುರಂತದಂತಹ ಪರಿಸ್ಥಿತಿಗೆ ತಳ್ಳಿತು. ಕಳೆದ 10 ವರ್ಷಗಳಿಂದ ದೆಹಲಿಯು ದೊಡ್ಡ ದುರಂತದಿಂದ ಸುತ್ತುವರೆದಿದೆ. ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ. ನಾವು ದುರಂತವನ್ನು ಸಹಿಸುವುದಿಲ್ಲ, ನಾವು ಅದನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


“ಇಂದು ಭಾರತವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ. ಭಾರತದ ಈ ಪಾತ್ರವು 2025ರಲ್ಲಿ ಇನ್ನಷ್ಟು ಬಲಗೊಳ್ಳಲಿದೆ. ಈ ವರ್ಷ ವಿಶ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ವರ್ಷವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ನಾನು ದೆಹಲಿಯ ಕೆಲವು ಮಕ್ಕಳನ್ನು ಭೇಟಿಯಾದಾಗ ಅವರ ಕನಸುಗಳು ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಿಂತ ಎತ್ತರದಲ್ಲಿದೆ ಎಂದು ನಾನು ನೋಡಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಹೇಡಿತನ; ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರಧಾನಿ ಮೋದಿ ಖಂಡನೆ

ಇಂದಿರಾಗಾಂಧಿ ಅವರ ಸರ್ವಾಧಿಕಾರದ ವಿರುದ್ಧ ದೇಶವು ಹೋರಾಡುತ್ತಿದ್ದಾಗ ಭೂಗತ ಚಳವಳಿಯ ಭಾಗವಾಗಿದ್ದ ನನ್ನಂತಹ ಅನೇಕ ಜನರಿಗೆ ದೆಹಲಿಯ ಅಶೋಕ್ ವಿಹಾರ ನೆಲೆ ನೀಡಿದ ಸ್ಥಳವಾಗಿತ್ತು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಇಂದು ಅಶೋಕ್ ವಿಹಾರ್‌ನ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇನ್-ಸಿಟು ಸ್ಲಂ ಪುನರ್ವಸತಿ ಯೋಜನೆಯಡಿ ಜುಗ್ಗಿ ಜೊಪ್ರಿ ಕ್ಲಸ್ಟರ್‌ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲ್ಯಾಟ್‌ಗಳಿಗೆ ಪ್ರಧಾನಮಂತ್ರಿ ಮೋದಿ ಭೇಟಿ ನೀಡಿದರು. ಅಶೋಕ್ ವಿಹಾರ್ ಪ್ರದೇಶದ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ಫ್ಲಾಟ್‌ಗಳ ಅರ್ಹ ಫಲಾನುಭವಿಗಳಿಗೆ ಪಿಎಂ ಮೋದಿ ಕೀಗಳನ್ನು ಹಸ್ತಾಂತರಿಸಿದರು. ನಂತರ ದೆಹಲಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ