ಕೊರೊನಾ 2ನೆ ಅಲೆ ಅಪ್ಪಳಿಸುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ 3 ಕೊರೊನಾ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ
ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಲು ಪ್ರಧಾನಿ ಮೋದಿ 3 ನಗರಗಳ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರು, ಅಹಮದಾಬಾದ್ ತಲುಪಿದ್ದಾರೆ.
ಅಹಮದಾಬಾದ್: ಕೊರೊನಾ ಲಸಿಕೆ ತಯಾರಿಯ ಪ್ರಗತಿ ಪರಿಶೀಲಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್, ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ, ಅಹಮದಾಬಾದ್ ತಲುಪಿರುವ ಪ್ರಧಾನಿ ಮೋದಿ ನಗರದಿಂದ 20 ಕಿಮೀ ದೂರದ ಝೈಡಸ್ ಬಯೋಟೆಕ್ ಪಾರ್ಕ್ಗೆ ತೆರಳಲಿದ್ದಾರೆ. ಝೈಕೋವಿಡ್ ಲಸಿಕೆ ತಯಾರಿಸಿರುವ ಝೈಡಸ್ ಬಯೋಪಾರ್ಕ್ ಸಂಸ್ಥೆ ಎರಡನೇ ಹಂತದ ಪ್ರಯೋಗ ನಡೆಸುವ ತಯಾರಿಯಲ್ಲಿದೆ.
ಮಧ್ಯಾಹ್ನದ ಹೊತ್ತಿಗೆ ಪ್ರಧಾನಿ ಮೋದಿ ಅಹಮದಾಬಾದ್ನಿಂದ ಹೈದರಾಬಾದ್ಗೆ ತೆರಳಲಿದ್ದಾರೆ. 3 ನೇ ಹಂತದ ಪ್ರಯೋಗದಲ್ಲಿರುವ ಹೈದರಾಬಾದ್ನ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ತಯಾರಿಯ ಪರಿಶೀಲನೆ ನಡೆಸಲಿದ್ದಾರೆ. ನಂತರ, ಅಹಮದಾಬಾದ್ನಿಂದ ಪುಣೆಗೆ ಭೇಟಿ ನೀಡಲಿರುವ ಅವರು, ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಆಸ್ಟ್ರೋಜೆನೆಕಾ ಮತ್ತು ಆಕ್ಸ್ಫರ್ಡ್ ವಿವಿ ತಯಾರಿಸಿರುವ ಲಸಿಕೆ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಈ ಮೂರು ಲಸಿಕೆ ತಯಾರಿಕಾ ಘಟಕಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಕೊರೊನಾ ಎರಡನೆ ಅಲೆ ಅಪ್ಪಳಿಸುವ ಬೆನ್ನಲ್ಲೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾ ನಿರ್ಲಕ್ಷ್ಯ ಬೇಡ, ವೈರಸ್ ಎದುರಿಸಲು ಸರ್ವಸನ್ನದ್ಧವಾಗಿರಿ: ಪ್ರಧಾನಿ ಮೋದಿ ಕರೆ