ED, CBI ತನಿಖೆಯಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ -ಉದ್ಧವ್ ಠಾಕ್ರೆ
ನಮ್ಮ ಮಹಾ ವಿಕಾಸ ಅಘಾಡಿ( ಎಂವಿಎ) ಸರ್ಕಾರವನ್ನು ಇ.ಡಿ. ಮತ್ತು ಸಿಬಿಐ ತನಿಖೆಯಿಂದ ಬೆದರಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದರು.
ಮುಂಬೈ: ನಮ್ಮ ಮಹಾ ವಿಕಾಸ ಅಘಾಡಿ( ಎಂವಿಎ) ಸರ್ಕಾರವನ್ನು ಇ.ಡಿ. ಮತ್ತು ಸಿಬಿಐ ತನಿಖೆಯಿಂದ ಬೆದರಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದರು. ಉದ್ಧವ್ ಠಾಕ್ರೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷ ಮಾಡಿರುವ ಆರೋಪದ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ರ ಮುಂಬೈ ಮತ್ತು ಥಾಣೆಯಲ್ಲಿರುವ ನಿವಾಸ ಹಾಗೂ ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿದ 3 ದಿನಗಳ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರ ಮಾಡುತ್ತಿರುವ ಇಂಥ ರಾಜಕೀಯ ಕುತಂತ್ರದಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಉದ್ಧವ್ ಠಾಕ್ರೆರನ್ನು ಅಧಿಕಾರದಿಂದ ಕೆಳಗಿಳಿಸಲು ಮೋದಿ ಸರ್ಕಾರದ ನಿರಂತರ ಪ್ರಯತ್ನಗಳ ನಡುವೆಯೂ ಮಹಾರಾಷ್ಟ್ರದ ಮೈತ್ರಿ ಸರ್ಕಾರವು ಜನರ ಆಶೀರ್ವಾದದಿಂದ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಠಾಕ್ರೆ ಹೇಳಿದರು.
ದ್ವೇಷದ ರಾಜಕಾರಣಕ್ಕೆ ಅಂತ್ಯವೇ ಇಲ್ಲ. ಇಂತಹ ಹಾದಿಯನ್ನು ನಾನು ಎಂದಿಗೂ ಹಿಡಿಯುವುದಿಲ್ಲ. ಈ ರೀತಿಯ ರಾಜಕೀಯ ವಿಕೃತಿಯನ್ನು ನಿಲ್ಲಿಸಿ ಎಂದು ಹೇಳಿದರು. ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ತಮ್ಮ ಸರ್ಕಾರ ಮುಂದಿನ 4 ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಶಿವಸೇನೆ ಮತ್ತು ಬಿಜೆಪಿ 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು, ಫಲಿತಾಂಸ ಹೊರಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಶಿವಸೇನೆ ಅಂದಿನ ತನ್ನ ಮಿತ್ರಪಕ್ಷವಾದ ಬಿಜೆಪಿಯೊಂದಿಗೆ ಚರ್ಚೆ ನಡಿಸಿತ್ತು. ಆಗ ತನ್ನ ತಂದೆಯ ಆಶಯದಂತೆ ಠಾಕ್ರೆ ಮುಖ್ಯಮಂತ್ರಿಯಾಗುವ ಪಟ್ಟು ಹಿಡಿದಿದ್ದರು. ನಂತರ ಕೆಲವು ರಾಜಕೀಯ ಬೆಳವಣಿಗೆಗಳು ನಡೆದು, ಕಾಂಗ್ರೆಸ್, ಎನ್ಸಿಪಿಯೊಂದಿಗೆ ಕೈಜೋಡಿಸಿ ಮಹಾ ವಿಕಾಸ ಅಘಾಡಿ ರಚಿಸಿ ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾಯಿತು. ಉದ್ಧವ್ ಠಾಕ್ರೆ ನವೆಂಬರ್ 28ರಂದು ಅಧಿಕಾರ ಸ್ವಿಕರಿಸಿದ್ದರು.
ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯ ತಲೆ ಎತ್ತಿದ್ದು, ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನ ಪಡುತ್ತಲೇ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಪುತ್ರ ಆದಿತ್ಯ ಠಾಕ್ರೆಯನ್ನು ಬಂಧಿಸುವ ವಿಫಲ ಪ್ರಯತ್ನಗಳು ಮತ್ತು ಮುಖ್ಯಮಂತ್ರಿ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂತು. ಆದರೆ, ಇವೆಲ್ಲದರ ನಡುವೆಯೂ ನಾನು ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆ ಊರಿದ್ದೇನೆ ಎಂದು ಉದ್ಧವ್ ಠಾಕ್ರೆ ಹೇಳಿದರು.
(ಪಿಟಿಐ)