2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದ ನಿಗ್ರಹಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ ಯಶಸ್ಸು: ಗೃಹ ಸಚಿವ ಅಮಿತ್ ಶಾ

|

Updated on: Oct 06, 2023 | 9:24 PM

ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಡಪಂಥೀಯ ಉಗ್ರವಾದ ಕುರಿತ ಪರಿಶೀಲನಾ ಸಭೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದ ನಿಗ್ರಹಿಸುವಲ್ಲಿ ಪ್ರಧಾನಿ ಮೋದಿ ಸರ್ಕಾರ ಯಶಸ್ಸು: ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ
Follow us on

ನವದೆಹಲಿ, ಅಕ್ಟೋಬರ್​​ 06: ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಎಡಪಂಥೀಯ ಉಗ್ರವಾದ ಕುರಿತ ಪರಿಶೀಲನಾ ಸಭೆ ಮಾಡಿದ್ದಾರೆ. ಕೇಂದ್ರ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮಹಾನಿರ್ದೇಶಕರು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸುವಲ್ಲಿ ಯಶಸ್ಸು ಸಾಧಿಸಲಾಗಿದ್ದು, ಈ ಹೋರಾಟವು ನಿರ್ಣಾಯಕ ಹಂತವನ್ನು ತಲುಪಿದೆ ಎಂದಿದ್ದಾರೆ. ಪ್ರಧಾನಿ ಮೋದಿಯವರ ಸಂಕಲ್ಪ ಮತ್ತು ಎಡಪಂಥೀಯ ಉಗ್ರವಾದದಿಂದ ಬಾಧಿತವಾದ ಎಲ್ಲಾ ರಾಜ್ಯಗಳ ಸಹಕಾರದಿಂದ ಈ ಯಶಸ್ಸು ಸಾಧ್ಯವಾಗಿದೆ. ಮುಂದಿನ 2 ವರ್ಷಗಳಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲಾಗುವುದು ಎಂದು ಹೇಳಿದ್ದಾರೆ.

ಎಡಪಂಥೀಯ ಉಗ್ರವಾದದ ವಿರುದ್ಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ನಿಯೋಜಿಸುವುದು, ಅಭಿವೃದ್ಧಿಯನ್ನು ತರ್ಕಬದ್ಧಗೊಳಿಸುವುದು ಮತ್ತು ನಿರ್ವಾತ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವುದು ಮೋದಿ ಸರ್ಕಾರದ ಆದ್ಯತೆಗಳಾಗಿವೆ. ಎಡಪಂಥೀಯ ಉಗ್ರವಾದದಿಂದ ಮುಕ್ತವಾದ ಪ್ರದೇಶಗಳ ಮೇಲೆ ಕಣ್ಗಾವಲು ಅವಶ್ಯಕತೆಯಿದೆ. ಇದರಿಂದ ಈ ಸಮಸ್ಯೆ ಮತ್ತೆ ಹುಟ್ಟಿಕೊಳ್ಳುವುದಿಲ್ಲ. ಎಡಪಂಥೀಯ ಉಗ್ರಗಾಮಿಗಳು ಇತರೆ ರಾಜ್ಯಗಳಲ್ಲಿ ಆಶ್ರಯ ಪಡೆಯದಂತೆ ಮೇಲ್ವಿಚಾರಣೆ ಮಾಡುವ ಅಗತ್ಯವೂ ಇದೆ ಎಂದಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 13ರಂದು G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ ಉದ್ಘಾಟಿಸಲಿದ್ದಾರೆ ಮೋದಿ

ಎಡಪಂಥೀಯ ಉಗ್ರವಾದಕ್ಕೆ ಹಣಕಾಸು ನೆರವು ನೀಡುವವರ ವಿರುದ್ಧ ಕ್ರಮಕೈಗೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಎಲ್ಲಾ ರಾಜ್ಯಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿವೆ. ಎಡಪಂಥೀಯ ಉಗ್ರವಾದದ ಆರ್ಥಿಕ ಬೆಂಬಲದ ಜಾಲವನ್ನು ತೊಡೆದುಹಾಕಲು ಎಲ್ಲಾ ಪೀಡಿತ ರಾಜ್ಯಗಳು ನಾಗರಿಕ ಮತ್ತು ಪೊಲೀಸ್ ಆಡಳಿತ ಜಂಟಿಯಾಗಿ ಕಾರ್ಯನಿರ್ವಹಿಸಬೇಕಿದೆ. ಮೋದಿ ಸರ್ಕಾರವು 2017 ರಲ್ಲಿ ಎಡಪಂಥೀಯ ಉಗ್ರವಾದದ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು 5 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಿತ್ತು, ಈಗ ಅದನ್ನು 40 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಲು ಮೋದಿ ಸರ್ಕಾರ ಹಲವು ಯೋಜನೆಗಳನ್ನು ತೆಗೆದುಕೊಳ್ಳುತ್ತಿದೆ. ರಸ್ತೆ ನಿರ್ಮಾಣ, ದೂರಸಂಪರ್ಕ, ಆರ್ಥಿಕ ಸೇರ್ಪಡೆ, ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣದಂತಹ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ನಿಜವಾದ ಸವಾಲು: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಎಡಪಂಥೀಯ ಉಗ್ರವಾದದಿಂದ ಹೆಚ್ಚು ಬಾಧಿತವಾಗಿರುವ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರವು ವಿಶೇಷ ಕೇಂದ್ರ ನೆರವು ಯೋಜನೆಯಡಿ 14,000 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಈ ಯೋಜನೆಗಳು 80% ಕ್ಕೂ ಹೆಚ್ಚು ಪೂರ್ಣಗೊಂಡಿವೆ. ಈ ಯೋಜನೆಯಡಿ ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಿಗೆ 3,296 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವಿಶೇಷ ಮೂಲಸೌಕರ್ಯ ಯೋಜನೆ ಅಡಿಯಲ್ಲಿ, ಭದ್ರವಾದ ಪೊಲೀಸ್ ಠಾಣೆಗಳ ನಿರ್ಮಾಣ, ರಾಜ್ಯ ಗುಪ್ತಚರ ಶಾಖೆಗಳು ಮತ್ತು ವಿಶೇಷ ಪಡೆಗಳನ್ನು ಬಲಪಡಿಸಲು 992 ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಕಳೆದ 9 ವರ್ಷಗಳಲ್ಲಿ ಮೋದಿ ಸರ್ಕಾರವು ಭದ್ರತಾ ಸಂಬಂಧಿತ ವೆಚ್ಚವನ್ನು ಹಿಂದಿನ ಅವಧಿಗೆ ಹೋಲಿಸಿದರೆ ದ್ವಿಗುಣಗೊಳಿಸಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.