ಡ್ರಗ್ ದಂಧೆ ಜಾಲ ಭೇದಿಸಿದ ಮುಂಬೈ ಪೊಲೀಸರು, 300 ಕೋಟಿ ಮೌಲ್ಯದ ಡ್ರಗ್ಸ್ ವಶ
ಮೆಫೆಡ್ರೋನ್ ತಯಾರಿಸುತ್ತಿದ್ದ ನಾಸಿಕ್ನ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 300 ಕೋಟಿ ರೂ.ಗಳ ಮೌಲ್ಯದ 151 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಹಿತಿ ಪ್ರಕಾರ, ಶಿಂಥೆ ಗಾಂವ್ನಲ್ಲಿರುವ ಎಂಐಡಿಸಿ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಮುಂಬೈ, ಅ.8: ಇಲ್ಲಿನ ಪೊಲೀಸರು ಶುಕ್ರವಾರದಂದು ಪ್ರಮುಖ ಡ್ರಗ್ ದಂಧೆಯನ್ನು (Drug Racket) ಭೇದಿಸಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ. ವರದಿ ಪ್ರಕಾರ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಶಿಂಥೆ ಗಾಂವ್ನಲ್ಲಿರುವ ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೋರೇಷನ್ (ಎಂಐಡಿಸಿ) ಕಾರ್ಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಒಟ್ಟು 151 ಕೆಜಿಯಷ್ಟು ಮೆಫೆಡ್ರೋನ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪೊಲೀಸರು ಹಲವು ನಗರಗಳಲ್ಲಿ 12 ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 2015ರ ಡ್ರಗ್ಸ್ ಪ್ರಕರಣ: ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾಗೆ 14 ದಿನಗಳ ಜೈಲು ಶಿಕ್ಷೆ
ಈ ದಂಧೆಯಲ್ಲಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಡ್ರಗ್ಸ್ ದಂಧೆಗೆ ವಿದೇಶಿ ನಂಟು ಇರುವುದು ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 5 ರಂದು ನಡೆದ ಇದೇ ರೀತಿಯ ಘಟನೆಯಲ್ಲಿ ತೆಲಂಗಾಣ ರಾಜ್ಯ ಮಾದಕ ದ್ರವ್ಯ ವಿರೋಧಿ ಬ್ಯೂರೋ ಅಂತಾರಾಜ್ಯ ಡ್ರಗ್ ದಂಧೆಯಲ್ಲಿ ಭಾಗಿಯಾಗಿದ್ದ ಐವರನ್ನು ಬಂಧಿಸಿತ್ತು. ಈ ಘಟನೆಯಲ್ಲಿ ಸುಮಾರು 28 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದರು. ವರದಿ ಪ್ರಕಾರ, ಅಖಿಲ್ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತನ್ನ ಸಹಚರರಿಗೆ ಮಾದಕ ದ್ರವ್ಯವನ್ನು ಪೂರೈಕೆ ಮಾಡುತ್ತಿದ್ದ. ಆಂಧ್ರದ ಸೂರ್ಯ ಮತ್ತು ರೋಹನ್ ಅಖಿಲ್ನಿಂದ ಡ್ರಗ್ಸ್ ಪಡೆದು ಆಂಧ್ರಪ್ರದೇಶ ಮತ್ತು ಹೈದರಾಬಾದ್ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ