3.50 ಕೋಟಿ ನೋಂದಣಿ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿಯ ಪರೀಕ್ಷಾ ಪೆ ಚರ್ಚಾ

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು 2018ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರೊಂದಿಗೆ ನೇರವಾಗಿ ಮಾತನಾಡುತ್ತಾರೆ. ಇದರಲ್ಲಿ ಅವರು ಅಧ್ಯಯನ ಮತ್ತು ಪರೀಕ್ಷೆಗಳ ಒತ್ತಡವನ್ನು ಕಡಿಮೆ ಮಾಡಲು ಸಲಹೆಗಳನ್ನು ನೀಡುತ್ತಾರೆ.

3.50 ಕೋಟಿ ನೋಂದಣಿ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿಯ ಪರೀಕ್ಷಾ ಪೆ ಚರ್ಚಾ
Pariksha Pe Charcha 2025 Sets Guinness World Record

Updated on: Aug 04, 2025 | 9:08 PM

ನವದೆಹಲಿ, ಆಗಸ್ಟ್ 4: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಾರ್ಷಿಕ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ 3.53 ಕೋಟಿಗೂ ಹೆಚ್ಚು ನೋಂದಣಿಗಳು ಮತ್ತು ದೂರದರ್ಶನದಲ್ಲಿ 21 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದುವ ಮೂಲಕ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. ಈ ಮೂಲಕ ಪರೀಕ್ಷಾ ಪೆ ಚರ್ಚಾ (Pariksha Pe Charcha) ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendhra Pradhan) ತಿಳಿಸಿದ್ದಾರೆ. ಪರೀಕ್ಷಾ ಪೆ ಚರ್ಚಾವು 2018ರಲ್ಲಿ ಪ್ರಧಾನಿ ಮೋದಿ ಪ್ರಾರಂಭಿಸಿದ ವಾರ್ಷಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ದೇಶದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಒತ್ತಡರಹಿತ ರೀತಿಯಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಮೋದಿ ಅವರು ಮಕ್ಕಳ ಮೇಲೆ ಒತ್ತಡ ಹೇರುವ ಬದಲು ವಿದ್ಯಾರ್ಥಿಗಳ ಕನಸುಗಳನ್ನು ಬೆಂಬಲಿಸುವ ಬಗ್ಗೆ ಪೋಷಕರು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಾರೆ.

“ಅಶ್ವಿನಿ ವೈಷ್ಣವ್ ಮತ್ತು ಜಿತಿನ್ ಪ್ರಸಾದ ಅವರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ವೀಕರಿಸಲು ಬಹಳ ಸಂತೋಷವಾಯಿತು. ಇದು ವೈಯಕ್ತಿಕವಾಗಿಯೂ ನನಗೆ ತೃಪ್ತಿಯ ವಿಷಯ. ಈ ವರ್ಷ 3.53 ಕೋಟಿಗೂ ಹೆಚ್ಚು ನೋಂದಣಿಗಳು ಮತ್ತು ದೂರದರ್ಶನದಲ್ಲಿ 21 ಕೋಟಿಗೂ ಹೆಚ್ಚು ವೀಕ್ಷಕರೊಂದಿಗೆ ಪರೀಕ್ಷಾ ಪೆ ಚರ್ಚಾ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. ಈ ಮಹತ್ವದ ಮೈಲಿಗಲ್ಲಿನಂದು ಎಲ್ಲರಿಗೂ, ವಿಶೇಷವಾಗಿ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರು, ಪೋಷಕರು ಮತ್ತು ಶಾಲೆಗಳಿಗೆ ಅಭಿನಂದನೆಗಳು. ನಾನು ಕ್ಯಾಬಿನೆಟ್ ಸಚಿವನಾಗಿದ್ದಾಗ ಗಿನ್ನೆಸ್ ದಾಖಲೆಯ ಎರಡನೇ ಮನ್ನಣೆ ಇದಾಗಿದೆ. ಈ ಹಿಂದೆ ಎಲ್‌ಪಿಜಿಗೆ ವಿಶ್ವದ ಅತಿದೊಡ್ಡ ನೇರ ಪ್ರಯೋಜನ ವರ್ಗಾವಣೆ ಯೋಜನೆಯಾದ PAHALಗಾಗಿ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿತ್ತು” ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಮಣಿಪುರದ ಕುಗ್ರಾಮದ ಹೆಣ್ಣು ಈಗ ಪ್ರಧಾನಿ ಮೋದಿಯ ಅಂಗರಕ್ಷಕಿ! ಇವರೇ ಮೊದಲ ಮಹಿಳಾ ಎಸ್​​ಪಿಜಿ ಕಮಾಂಡೋ

ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ದೇಶಾದ್ಯಂತ 21 ಕೋಟಿಗೂ ಹೆಚ್ಚು ಜನರು ಪರೀಕ್ಷಾ ಪೆ ಚರ್ಚಾ 2025 ಅನ್ನು ಟಿವಿ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ ಎಂದು ಹೇಳಿದರು. ಪರೀಕ್ಷಾ ಪೆ ಚರ್ಚಾ ಇನ್ನು ಮುಂದೆ ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಾಗಿ ಇದು ದೇಶಾದ್ಯಂತ ಅಭಿಯಾನವಾಗಿ ಮಾರ್ಪಟ್ಟಿದೆ, ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಒತ್ತಡ ನಿರ್ವಹಣೆಯನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು. ಈ ಯಶಸ್ಸಿನ ಕೀರ್ತಿ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ ದೇಶದ ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು, ಶಿಕ್ಷಕರು ಮತ್ತು ಶಾಲೆಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

Published On - 9:00 pm, Mon, 4 August 25