ಸಂಸದರೊಂದಿಗಿನ ಸಮನ್ವಯ ಸಮಸ್ಯೆ; ಟಿಎಂಸಿಯ ಲೋಕಸಭಾ ಮುಖ್ಯ ಸಚೇತಕ ಹುದ್ದೆಗೆ ಕಲ್ಯಾಣ್ ಬ್ಯಾನರ್ಜಿ ರಾಜೀನಾಮೆ
ಟಿಎಂಸಿ ಸಂಸದರಲ್ಲಿ ಸಮನ್ವಯದ ಕೊರತೆಯಿದೆ ಎಂದು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿಟೀಕಿಸಿದ್ದರು. ಇದರ ಬೆನ್ನಲ್ಲೇ ಟಿಎಂಸಿಯ ಲೋಕಸಭಾ ಮುಖ್ಯ ಸಚೇತಕ ಹುದ್ದೆಯಿಂದ ಕಲ್ಯಾಣ್ ಬ್ಯಾನರ್ಜಿ ಕೆಳಗಿಳಿದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ ಟಿಎಂಸಿ ಸಂಸದರ ವರ್ಚುವಲ್ ಸಭೆಯ ಕೆಲವೇ ಗಂಟೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ, ಆಗಸ್ಟ್ 4: ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಇಂದು ಟಿಎಂಸಿಯ ಲೋಕಸಭಾ ಮುಖ್ಯ ಸಚೇತಕ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅಧ್ಯಕ್ಷತೆಯಲ್ಲಿ ನಡೆದ ಟಿಎಂಸಿ ಸಂಸದರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ನಂತರ ಕಲ್ಯಾಣ್ ಬ್ಯಾನರ್ಜಿ (Kalyan Banerjee) ತಮ್ಮ ರಾಜೀನಾಮೆಯನ್ನು ಘೋಷಿಸಿದರು. ವರ್ಚುವಲ್ ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರ ಟಿಎಂಸಿ ಸಂಸದರು ಭಾಗವಹಿಸಿದ್ದರು. ಸಂಸತ್ತಿನಲ್ಲಿ ಟಿಎಂಸಿ ಪಕ್ಷದ ಸಂಸದರಲ್ಲಿ ಸಮನ್ವಯದ ಕೊರತೆ ಇದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದರು.
“ನಾನು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ, ಪಕ್ಷದ ಸಂಸದರಲ್ಲಿ ಸಮನ್ವಯದ ಕೊರತೆ ಇದೆ ಎಂದು ‘ದೀದಿ’ (ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ) ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ. ಆದ್ದರಿಂದ ಆ ಆಪಾದನೆ ನನ್ನ ಮೇಲಿದೆ. ಹೀಗಾಗಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಶ್ರೀರಾಂಪುರದಿಂದ 4 ಬಾರಿ ಸಂಸದರಾಗಿರುವ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳಿ ವಲಸಿಗರು ರೋಹಿಂಗ್ಯಾಗಳೆಂದು ಸಾಬೀತುಪಡಿಸಿ; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
“ಮಮತಾ ಬ್ಯಾನರ್ಜಿ ಸಂಸದರನ್ನಾಗಿ ಮಾಡಿದವರು ಲೋಕಸಭೆಗೆ ಬರುವುದಿಲ್ಲ. ದಕ್ಷಿಣ ಕೋಲ್ಕತ್ತಾ, ಬರಾಕ್‌ಪೋರ್, ಬಂಕುರಾ, ಉತ್ತರ ಕೋಲ್ಕತ್ತಾದ ಟಿಎಂಸಿ ಸಂಸದರು, ಸಂಸತ್ತಿಗೆ ಅಪರೂಪವಾಗಿ ಹಾಜರಾಗುತ್ತಾರೆ. ನಾನು ಏನು ಮಾಡಬೇಕು? ನನ್ನ ತಪ್ಪೇನು? ಎಲ್ಲದಕ್ಕೂ ನನ್ನನ್ನೇ ದೂಷಿಸಲಾಗುತ್ತಿದೆ” ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.
ಟಿಎಂಸಿ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಂಸತ್ತಿನ ಕೆಳಮನೆಯಲ್ಲಿ ತನ್ನ ನಾಯಕನನ್ನಾಗಿ ಹೆಸರಿಸಿದೆ. ಡೈಮಂಡ್ ಹಾರ್ಬರ್‌ನಿಂದ 3 ಬಾರಿ ಸಂಸದರಾಗಿರುವ ಅಭಿಷೇಕ್ ಬ್ಯಾನರ್ಜಿ, ಕೊಲ್ಕತ್ತಾದ ಸುದೀಪ್ ಬಂಡೋಪಾಧ್ಯಾಯ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸುದೀಪ್ ಬಂಡೋಪಾಧ್ಯಾಯ ಅವರನ್ನು ಅನಾರೋಗ್ಯದ ಕಾರಣದಿಂದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಲೋಕಸಭೆಯಲ್ಲಿ 29 ಸ್ಥಾನಗಳನ್ನು ಹೊಂದಿರುವ ಟಿಎಂಸಿ, ವಿರೋಧ ಪಕ್ಷದ ಇಂಡಿಯಾ ಬಣದ ಪ್ರಮುಖ ಘಟಕವಾಗಿದೆ.
ಟಿಎಂಸಿಯ ಕೃಷ್ಣನಗರ ಸಂಸದೆ ಮಹುವಾ ಮೊಯಿತ್ರಾ ಅವರೊಂದಿಗಿನ ಕಲ್ಯಾಣ್ ಬ್ಯಾನರ್ಜಿಯ ಇತ್ತೀಚಿನ ಜಗಳ ಮಧ್ಯೆ ಅವರು ರಾಜೀನಾಮೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




