ಬಂಗಾಳಿ ವಲಸಿಗರು ರೋಹಿಂಗ್ಯಾಗಳೆಂದು ಸಾಬೀತುಪಡಿಸಿ; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
ವಿವಿಧ ರಾಜ್ಯಗಳಲ್ಲಿ ಬಂಗಾಳದಿಂದ ಬಂದ 22 ಲಕ್ಷ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಮಾನ್ಯವಾದ ಗುರುತಿನ ದಾಖಲೆಗಳಿವೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲಿನ ಕಿರುಕುಳದ ವಿರುದ್ಧ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕರು ಕೂಡ ಸೇರಿಕೊಂಡಿದ್ದಾರೆ.

ಕೊಲ್ಕತ್ತಾ, ಜುಲೈ 16: ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲಿನ ಕಿರುಕುಳದ ಕುರಿತು ಇಂದು (ಬುಧವಾರ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ರೋಹಿಂಗ್ಯಾಗಳು ಎಂದು ಸಾಬೀತುಪಡಿಸುವಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಇತರ ಪಕ್ಷದ ನಾಯಕರೊಂದಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಗಾಳಿ ವಲಸೆ ಕಾರ್ಮಿಕರ ಬಂಧನ ಮತ್ತು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವುದರ ವಿರುದ್ಧ ಕೊಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
“ಬಂಗಾಳಿ ಮಾತನಾಡುವ ಜನರು ರೋಹಿಂಗ್ಯಾಗಳು ಎಂದು ಸಾಬೀತುಪಡಿಸಲು ನಾನು ನಿಮಗೆ ಸವಾಲು ಹಾಕುತ್ತೇನೆ” ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿ ಬಂಗಾಳಿ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಚುನಾವಣೆಯಲ್ಲಿ ಅಕ್ರಮವೆಸಗಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
#WATCH | Kolkata: West Bengal Chief Minister Mamata Banerjee, TMC MP Abhishek Banerjee and other party leaders and workers take out a protest march alleging harassment of Bengali-speaking people in BJP-ruled states. pic.twitter.com/xLjTlwNHfz
— ANI (@ANI) July 16, 2025
ಇದನ್ನೂ ಓದಿ: ಬಂಗಾಳಿ ಹಿಂದೂಗಳಿಗೆ ಕಾಳಿ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ: ಅಮಿತ್ ಮಾಳವೀಯಗೆ ಟಿಎಂಸಿ ಸಂಸದ ತಿರುಗೇಟು
“ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಬಿಜೆಪಿ ಮಹಾರಾಷ್ಟ್ರದಲ್ಲಿ ಗೆದ್ದಿತು. ಈಗ ಬಿಹಾರದಲ್ಲೂ ಅದೇ ರೀತಿ ಮಾಡುತ್ತಿದೆ. ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಿಜೆಪಿ ಯೋಜಿಸಿದೆ. ನಾವು ಅವರೊಂದಿಗೆ ನೇರವಾಗಿ ಹೋರಾಡುತ್ತೇವೆ” ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
#WATCH | Kolkata | Addressing a public rally, West Bengal CM Mamata Banerjee says, “… we will fight inch by inch…”
“Was ‘Jana, Gana, Mana’ not recited by a Bengali?… They are calling Bengalis as Rohingyas and Bangladeshis. They should be ashamed. Who controls the border?… pic.twitter.com/9gM1CoDAd4
— ANI (@ANI) July 16, 2025
ಬಂಗಾಳದಿಂದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ 22 ಲಕ್ಷ ವಲಸೆ ಕಾರ್ಮಿಕರಿದ್ದಾರೆ ಮತ್ತು ಅವರ ಬಳಿ ಮಾನ್ಯ ಗುರುತಿನ ದಾಖಲೆಗಳಿವೆ ಎಂದು ಮುಖ್ಯಮಂತ್ರಿ ಮಮತಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಭೇಟಿಗೆ ಒಂದು ದಿನ ಮೊದಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಾವಿರಾರು ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




