ಬಂಗಾಳಿ ಹಿಂದೂಗಳಿಗೆ ಕಾಳಿ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ: ಅಮಿತ್ ಮಾಳವೀಯಗೆ ಟಿಎಂಸಿ ಸಂಸದ ತಿರುಗೇಟು
ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಉಲ್ಲೇಖಿಸಿ ಅಮಿತ್ ಮಾಳವೀಯ ಅವರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು.
ಬಿಜೆಪಿ ನಾಯಕ ಅಮಿತ್ ಮಾಳವೀಯ (Amit Malviya) ಅವರು ಕಾಳೀ ಬಗ್ಗೆ ಹೇಳಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿ(TMC) ಸಂಸದ ಸೌಗತ ರಾಯ್ (Saugata Roy), ಮಾ ಕಾಳಿ ಬಗ್ಗೆ ಬಂಗಾಳಿ ಹಿಂದೂಗಳಿಗೆ ನೀವು ಹೇಳಿಕೊಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಾಳವೀಯ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದ ರಾಯ್ ಹೇಳಿದ್ದಾರೆ. ಪ್ರಧಾನಿ ಮೋದಿ (PM Modi) ಯಾವತ್ತೂ ಕಾಳಿ ಸಾಧನಾ ಮಾಡಿಲ್ಲ. ಇಂದು ಅವರು ರಾಮಕೃಷ್ಣ ಮಿಷನ್ ನ ಕಾರ್ಯಕ್ರಮಕ್ಕೆ ಹೋಗಿದ್ದರು. ಅಮಿತ್ ಮಾಳವೀಯ ಹೇಳಿರುವುದು ತಪ್ಪು. ನಾವು ಯಾವುದೇ ಧಾರ್ಮಿಕ ವಿಷಯಗಳಲ್ಲಿ ತಲೆ ಹಾಕುವುದಿಲ್ಲ. ಇದು ನಮ್ಮ ಪಕ್ಷದ ನಿಲುವು. ನಾವು ವಿವಾದ ಮಾಡುವುದಿಲ್ಲ. ಆದ್ದರಿಂದಲೇ ನಾವು ನಮ್ಮ ಸಂಸದೆಯ ಹೇಳಿಕೆ ಬೆಂಬಲಿಸಿಲ್ಲ. ಆದರೆ ನಾವು ಮಾ ಕಾಳಿ ಬಗ್ಗೆ ಅಮಿತ್ ಮಾಳವೀಯರಿಂದ ಪಾಠ ಕಲಿಯಬೇಕಿಲ್ಲ ಎಂದು ಕಮರ್ಹಟಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾಧ್ಯಮದವರಲ್ಲಿ ಮಾತನಾಡಿದ ರಾಯ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಉಲ್ಲೇಖಿಸಿ ಅಮಿತ್ ಮಾಳವೀಯ ಅವರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಮಾ ಕಾಳಿ ಬಗ್ಗೆ ಗೌರವಪೂರ್ವಕವಾಗಿಯೇ ಮಾತನಾಡಿದ್ದಾರೆ. ಕಾಳಿಯನ್ನು ಬಂಗಾಳದಲ್ಲಿ ಮಾತ್ರ ಅಲ್ಲ ಇಡೀ ದೇಶದ ಜನರು ಪೂಜಿಸುತ್ತಾರೆ. ಆದರೆ ಇನ್ನೊಂದೆಡೆ ಟಿಎಂಸಿ ಸಂಸದೆ ಮಾ ಕಾಳಿಯನ್ನು ಅವಮಾನಿಸುತ್ತಾರೆ. ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಮಮತಾ ಬ್ಯಾನರ್ಜಿ ಆಕೆಯನ್ನು ಬೆಂಬಲಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
Prime Minister Narendra Modi speaks reverentially about Maa Kaali being the center of devotion, not just for Bengal but whole of India. On the other hand, a TMC MP insults Maa Kaali and Mamata Banerjee instead of acting against her, defends her obnoxious portrayal of Maa Kaali… pic.twitter.com/6O4vYGkasi
— Amit Malviya (@amitmalviya) July 10, 2022
ಮಾ ಕಾಳಿ ಬಗ್ಗೆ ಮೋದಿ ಹೇಳಿದ್ದೇನು?
ಸ್ವಾಮಿ ಆತ್ಮಸ್ಥಾನಂದ ಅವರ ನೂರನೇ ಜಯಂತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಮೇಲೆ ಮಾ ಕಾಳಿಯ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದ್ದಾರೆ.
ಸ್ವಾಮಿ ರಾಮಕೃಷ್ಣ ಪರಮಹಂಸ ಅವರು ಮಾ ಕಾಳಿಯನ್ನು ತಮ್ಮ ಕಣ್ಣ ಮುಂದೆಯೇ ಕಂಡವರು ಎಂದು ಹೇಳಿದ ಮೋದಿ ಬಂಗಾಳದ ಕಾಳಿ ಪೂಜೆ ಮತ್ತು ಸ್ವಾಮಿ ವಿವೇಕಾನಂದರ ಬಗ್ಗೆಯೂ ಮಾತನಾಡಿದ್ದಾರೆ. ಸ್ವಾಮಿ ವಿವೇಕಾನಂದರಂಥಾ ಧೀಮಂತ ವ್ಯಕ್ತಿ ಮಾ ಕಾಳಿ ಭಕ್ತಿಯ ಮುಂದೆ ಮಗುವಾಗುತ್ತಿದ್ದರು. ಸ್ವಾಮಿ ಆತ್ಮಸ್ಥಾನಂದ ಅವರಲ್ಲಿಯೂ ಇದೇ ರೀತಿಯ ಭಕ್ತಿ ಇತ್ತು ಎಂದು ಮೋದಿ ಹೇಳಿದ್ದಾರೆ. ಈ ಇಡೀ ಜಗತ್ತು, ಈ ಚರ ಮತ್ತು ಸ್ಥಿರ, ಎಲ್ಲವೂ ಮಾ ಕಾಳಿಯ ಪ್ರಜ್ಞೆಯಿಂದ ವ್ಯಾಪಿಸಿದೆ. ಇದು ಬಂಗಾಳದ ಕಾಳಿ ಪೂಜೆಯಲ್ಲಿ ಕಾಣಿಸುತ್ತದೆ ಎಂದು ಹೇಳಿದ್ದಾರೆ.