PM Modi Birthday Karnataka News: ನಮ್ಮ ಈ ಪಯಣ ಮುಂದುವರಿಯುತ್ತದೆ.. ಧನ್ಯವಾದ ರೂಪದ ಟ್ವೀಟ್ ಮಾಡಿದ ಮೋದಿ

| Updated By: ganapathi bhat

Updated on: Sep 17, 2021 | 10:46 PM

PM Narendra Modi Birthday Celebration Live Updates: ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ ಕಾರ್ಯಕ್ರಮಗಳು, ಗಣ್ಯರ ಹಾರೈಕೆ ಮೊದಲಾದವುಗಳ ಸಂಪೂರ್ಣ ಮಾಹಿತಿ ಈ ಪುಟದಲ್ಲಿ ಲಭ್ಯವಾಗಲಿದೆ.

PM Modi Birthday Karnataka News: ನಮ್ಮ ಈ ಪಯಣ ಮುಂದುವರಿಯುತ್ತದೆ.. ಧನ್ಯವಾದ ರೂಪದ ಟ್ವೀಟ್ ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ (ಚಿತ್ರ: Reuters)

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು 1950ರ ಸೆಪ್ಟೆಂಬರ್ 17ರಂದು ಉತ್ತರ ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ವಡ್​ನಗರದಲ್ಲಿ ಜನಿಸಿದರು. ಆರ್ಥಿಕವಾಗಿ ಅಷ್ಟು ಸಬಲವಾಗಿಲ್ಲದ ಕುಟುಂಬದಿಂದ ಬಂದ ಮೋದಿ, ಬೆಳೆದ ಪರಿ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂಥದ್ದು. RSSನಲ್ಲಿ ಸಕ್ರಿಯರಾಗಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಸಾಗಿದ ಮೋದಿ, ನಂತರ ಭಾರತೀಯ ಜನತಾ ಪಕ್ಷದ ಜವಾಬ್ದಾರಿಗಳನ್ನು ವಹಿಸಿಕೊಂಡರು. ಅನಿರೀಕ್ಷಿತವಾಗಿ 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗುವ ಯೋಗ ಒದಗಿ ಬಂತು. ನಂತರದ ಮೂರು ಚುನಾವಣೆಗಳಲ್ಲೂ ಬಿಜೆಪಿಯ ಜಯಭೇರಿಗೆ ಕಾರಣರಾದ ಮೋದಿ, ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಧಾಟಿಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ಈ ಪಯಣ ಮುಂದುವರಿಯುತ್ತದೆ. ಮಾಡಬೇಕಾದ ಕೆಲಸ ಬಹಳಷ್ಟಿದೆ. ಸದೃಢ, ಸಮೃದ್ಧ ಭಾರತದ ಕನಸು ನನಸಾಗುವವರೆಗೆ ನಾವು ವಿಶ್ರಮಿಸುವುದಿಲ್ಲ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಅರ್ಪಿಸಿದ ಭಾರತ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅನೇಕ ಗಣ್ಯರು ಮೋದಿಯವರಿಗೆ ಶುಭ ಹಾರೈಸುತ್ತಿದ್ದಾರೆ. ಹಾಗೆಯೇ ಕರ್ನಾಟಕ ಬಿಜೆಪಿಯು ಲಸಿಕಾ ಅಭಿಯಾನವನ್ನು ಕೈಗೊಂಡಿದೆ. ಈ ಎಲ್ಲವುಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಇಲ್ಲಿದೆ.

LIVE NEWS & UPDATES

The liveblog has ended.
  • 17 Sep 2021 10:42 PM (IST)

    ನಮ್ಮ ಈ ಪಯಣ ಮುಂದುವರಿಯುತ್ತದೆ..

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸುವ ರೀತಿಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ. ನಮ್ಮ ಈ ಪಯಣ ಮುಂದುವರಿಯುತ್ತದೆ. ಮಾಡಬೇಕಾದ ಕೆಲಸ ಬಹಳಷ್ಟಿದೆ. ಸದೃಢ, ಸಮೃದ್ಧ ಭಾರತದ ಕನಸು ನನಸಾಗುವವರೆಗೆ ನಾವು ವಿಶ್ರಮಿಸುವುದಿಲ್ಲ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಅರ್ಪಿಸಿದ ಭಾರತ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

  • 17 Sep 2021 05:44 PM (IST)

    ಸ್ವಾತಂತ್ರ್ಯ ನಂತರ ಭಾರತಕ್ಕೆ ದೊರೆತ ಒಬ್ಬ ಸಮರ್ಥ ನಾಯಕ

    ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ವಾತಂತ್ರ್ಯದ ನಂತರ ಭಾರತಕ್ಕೆ ದೊರೆತ ಒಬ್ಬ ದಿಟ್ಟ ಸ್ಪಷ್ಟ, ಸಮರ್ಥ ನಾಯಕ, ಭಾರತವನ್ನು ಒಗ್ಗೂಡಿಸಿ ಜನರಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸಿ ಹೊಸ ಭಾರತ ಕಟ್ಟಲು ಅಣಿಯಾಗಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರಿಗೆ 71 ನೇ ಜನ್ಮ ದಿನದ ಹಾರ್ದಿಕ ಶುಭಾಶಯಗಳು’ ಎಂದು ಕೂ ಮಾಡಿದ್ದಾರೆ.

  • 17 Sep 2021 05:44 PM (IST)

    ಮಾದರಿ ಯೋಜನೆಗಳನ್ನು ಕಲ್ಪಿಸಿದ ನರೇಂದ್ರ ಮೋದಿಗೆ ಶುಭಾಶಯ

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಆತ್ಮನಿರ್ಭರದ ಮೂಲಕ ಭಾರತಕ್ಕೆ ಅಂತ್ಯೋದಯದಂತಹ ಮಾದರಿ ಯೋಜನೆಗಳನ್ನು ಕಲ್ಪಿಸಿದ ನಾಯಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರಿಗೆ, ಜನ್ಮದಿನದ ಶುಭಾಶಯಗಳು’ ಎಂದು ಕೂ ಮಾಡಿದ್ದಾರೆ.

  • 17 Sep 2021 05:42 PM (IST)

    ಪ್ರಧಾನಿ ಮೋದಿಗೆ ‘ಕೂ’ ಮೂಲಕ ಶುಭ ಕೋರಿದ ಬಿಜೆಪಿ ಕರ್ನಾಟಕ

    71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಬಿಜೆಪಿ ಕರ್ನಾಟಕ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮೂರೂ ಭಾಷೆಗಳಲ್ಲಿ ತನ್ನ ಶುಭಾಶಗಳನ್ನು ‘ಕೂ’ ಮಾಡಿದೆ. ಸಂಸದ ಪ್ರತಾಪ್ ಸಿಂಹ ಅವರು ಕನ್ನಡ ಹಾಗು ಇಂಗ್ಲಿಷ್ ಅಲ್ಲಿ ತಮ್ಮ ವಿಶ್ ಮಾಡಿದೆ.

  • 17 Sep 2021 03:59 PM (IST)

    ಮೈಸೂರಿನಲ್ಲಿ ಮೋದಿ ಭಾವಚಿತ್ರವಿರುವ ಕೋಟ್ ಧರಿಸಿ ಶುಭಾಶಯ ಕೋರಿದ ಅಭಿಮಾನಿ

    ಮೈಸೂರಿನಲ್ಲಿ ಅಭಿಮಾನಿಯೊಬ್ಬರು ಮೋದಿ ಭಾವಚಿತ್ರದ ಕೋಟ್ ಧರಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಚಾಮರಾಜನಗರ 8ನೇ ವಾರ್ಡ್ ನಗರಸಭಾ ಸದಸ್ಯರಾಗಿರುವ ಕೆ.ರಾಘವೇಂದ್ರ ಮೋದಿ ಭಾವಚಿತ್ರದ ಕೋಟ್ ಧರಿಸಿ, ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ್ದಾರೆ. ಅವರು ನರೇಂದ್ರ ಮೋದಿ ಸಿಎಂ, ಪಿಎಂ ಆಗುವ ಮೊದಲಿನಿಂದಲೂ ಅಭಿಮಾನಿಯಾಗಿದ್ದು,
    ಗುಜರಾತ್‌ನಲ್ಲಿ ಮೋದಿ ಬಿಜೆಪಿ ಕಾರ್ಯಕರ್ತರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದರು. ಅಕ್ಷರಧಾಮ ಮೇಲೆ ದಾಳಿ, ಗುಜರಾತ್ ಭೂಕಂಪದ ವೇಳೆಯಲ್ಲಿ ನರೇಂದ್ರ ಮೋದಿ ಜೊತೆ ಸೇವೆಯಲ್ಲಿ ನಿರತರಾಗಿದ್ದರು. ಇದೀಗ ಮೋದಿ ಭಾವಚಿತ್ರವಿರುವ ಕೋಟ್ ಧರಿಸಿ ಅಭಿಮಾನ ಮೆರೆದಿದ್ದಾರೆ.

  • 17 Sep 2021 03:13 PM (IST)

    ಆಹಾರ ಧಾನ್ಯಗಳನ್ನು ಬಳಸಿ 8 ಅಡಿ ಉದ್ದದ ಮೋದಿ ಕಲಾಕೃತಿ ತಯಾರಿಸಿದ ಯುವತಿ

    ಒಡಿಸ್ಸಾ: ಕಲಾವಿದೆ ಪ್ರಿಯಾಂಕಾ ಸಹಾನಿ ಆಹಾರ ಧಾನ್ಯಗಳನ್ನು ಬಳಸಿ 8 ಅಡಿ ಉದ್ದದ ಕಲಾಕೃತಿಯನ್ನು ತಯಾರಿಸಿದ್ದಾರೆ. ‘‘ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಈ ಮಾದರಿಯಲ್ಲಿ ಕಲಾಕೃತಿ ತಯಾರಿಸಿದ್ದೇನೆ. ಜೊತೆಗೆ ಇದು ಒಡಿಸ್ಸಾದ ಪರಂಪರೆಯಾದ ‘ಪಟ್ಟಚಿತ್ರ’ವನ್ನು ಪ್ರತಿಬಿಂಬಿಸುತ್ತದೆ’’ ಎಂದು ಅವರು ನುಡಿದಿದ್ದಾರೆ.

  • 17 Sep 2021 03:09 PM (IST)

    ‘ಸೇವಾ ಔರ್ ಸಮರ್ಪಣ್’ ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

    ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ‘ಸೇವಾ ಔರ್ ಸಮರ್ಪಣ್’ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ್ದಾರೆ. ದೆಹಲಿಯ ಬಿಜೆಪಿ ಮುಖ್ಯ ಕಛೇರಿಯಲ್ಲಿ ಅವರು ಚಾಲನೆ ನೀಡಿದ್ದು, ಅಭಿಯಾನವು ಅಕ್ಟೋಬರ್ 7ರವರೆಗೆ ನಡೆಯಲಿದೆ.

  • 17 Sep 2021 02:53 PM (IST)

    ಮೋದಿಗೆ ಶುಭಾಶಯ ತಿಳಿಸಿದ ಮಲಯಾಳಂನ ಖ್ಯಾತ ನಟ ಮೋಹನ್​ಲಾಲ್

    ಮಲಯಾಳಂನ ಖ್ಯಾತ ನಟ ಮೋಹನ್​ಲಾಲ್ ಟ್ವಿಟರ್ ಮುಖಾಂತರ ಪ್ರಧಾನಿ ನರೇಂದ್ರ ಮೋದಿಗೆ ಶುಭ ಕೋರಿದ್ದಾರೆ. ‘ನಿಮಗೆ ಯಶಸ್ಸು ಸಿಗಲಿ’  ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 17 Sep 2021 02:52 PM (IST)

    ಹಲವು ಕಾಯ್ದೆಗಳ ಮೂಲಕ ಮೋದಿ ಸುಧಾರಣೆ ತಂದಿದ್ದಾರೆ; ಆರ್​.ಅಶೋಕ್ ಶ್ಲಾಘನೆ

    ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಕಂದಾಯ ಸಚಿವ ಆರ್.ಅಶೋಕ್, ‘‘ದೇಶವನ್ನು ಪ್ರಪಂಚದ ಸಾಲಿನಲ್ಲಿ ನಿಲ್ಲಿಸಿದ್ದಾರೆ. 370 ಆರ್ಟಿಕಲ್ ತೆಗೆದು ಹಾಕುವ ಮೂಲಕ ಕಾಶ್ಮೀರ ನಮ್ಮದು ಅಂತ ಮಾಡಿದ್ದಾರೆ. ಸ್ವಚ್ಚ ಭಾರತ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣಿ ಮಾಡಿದ್ದಾರೆ. ತ್ರಿವಳಿ ತಲಾಕ್ ಗೆ ಬಹಳ ಜನ ವಿರೋಧ ಮಾಡಿದ್ದರು. ಆದರೆ ಅದನ್ನು ತೆಗೆದು ಹಾಕಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ’’ ಎಂದಿದ್ದಾರೆ.

  • 17 Sep 2021 02:39 PM (IST)

    ಪತ್ರ ಬರೆಯುವ ಮೂಲಕ ಶುಭ ಹಾರೈಸಿದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು

    ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಪ್ರಧಾನಿಗಳಿಗೆ ಪತ್ರ ಬರೆಯುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದಾರೆ.

  • 17 Sep 2021 02:37 PM (IST)

    ಉಡುಪಿ ಲಸಿಕಾ ಕೇಂದ್ರದಲ್ಲಿ ಪಾಯಸ ನೀಡಿ ಮೋದಿ ಜನ್ಮದಿನದ ಸಂಭ್ರಮಾಚರಣೆ

    ಪಾಯಸ ವಿತರಣೆ ಮಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ 71ನೇ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾದ ಬೃಹತ್ ವ್ಯಾಕ್ಸೀನ್ ಮೇಳದಲ್ಲಿ ಜಿಲ್ಲೆಯ 80 ಸಾವಿರ ಜನಕ್ಕೆ ಕೊರೋನಾ ಲಸಿಕೆ ನೀಡಲಾಗಿದೆ. ಉಡುಪಿಯ ಕಡಿಯಾಳಿ ಕಮಲಾಬಾಯಿ ಹೈಸ್ಕೂಲಿನ ಲಸಿಕಾ ಕೇಂದ್ರದಲ್ಲಿ ರಾಘವೇಂದ್ರ ಕಿಣಿ ಕುಟುಂಬದಿಂದ ಪಾಯಸ ವಿತರಣೆ ಮಾಡಿ ಸಂಭ್ರಮಿಸಲಾಗಿದೆ. ಕಿಣಿಯವವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಕಡಿಯಾಳಿಯ ಹೋಟೆಲ್ ಶ್ರೀನಿವಾಸ ಮುಂಭಾಗದಲ್ಲೂ ಪಾಯಸ ವಿತರಣೆ ಮಾಡಲಾಗಿದ್ದು, ಸಾರ್ವಜನಿಕರಿಗೆ, ಹೋಟೆಲ್​ಗೆ ಬಂದ ಗ್ರಾಹಕರಿಗೆ ಪಾಯಸ ನೀಡಲಾಗಿದೆ. ಕಳೆದ ಆರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಕಿಣಿಯವರು ಆಚರಿಸುತ್ತಿದ್ದಾರೆ.

  • 17 Sep 2021 02:33 PM (IST)

    ‘ಮೋದಿ ಯುಗ‘ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಎಸ್​ವೈ ಕಾರಿನ ಬಳಿಯ ಬೈಕ್ ಸೇರಿದ ಹಾವಿನ ಮರಿ

    ಹಾವಿನ ಮರಿಯೊಂದು ‘ಮೋದಿ ಯುಗ ಉತ್ಸವ’ ಕಾರ್ಯಕ್ರಮಕ್ಕೆ ಆಗಮಿಸಿರುವ ಬಿ ಎಸ್ ಯಡಿಯೂರಪ್ಪ ಅವರ ಕಾರಿನ ಬಳಿಯ ಬೈಕ್ ಸೇರಿತ್ತು. ಮೈಸೂರಿನ ವಿದ್ಯಾರಣ್ಯಪುರಂ ಬಳಿ ಘಟನೆ ನಡೆದಿದ್ದು, ಬೈಕ್‌ನಲ್ಲಿ ಹಾವು ಹುಡುಕಲು ಹರಸಾಹಸ ಪಡಲಾಯಿತು. ಕಾರ್ಯಾಚರಣೆ ನಂತರ ಬೈಕ್‌ನಲ್ಲಿದ್ದ ಹಾವಿನ ಮರಿಯನ್ನು ಸಂರಕ್ಷಿಸಲಾಗಿದೆ. ಉರಗ ಸಂರಕ್ಷಕ ಅಯ್ಯ ಎಂಬುವವರು ಸಂರಕ್ಷಣೆಗೆ ಸಹಕರಿಸಿದರು.

  • 17 Sep 2021 02:12 PM (IST)

    ಮೋದಿಗೆ ಶುಭ ಹಾರೈಸಿದ ಸಚಿನ್

    ಪ್ರಧಾನಿ ಮೋದಿಗೆ ಕ್ರಿಕೆಟ್ ಲೋಕದ ದೇವರೆಂದೇ ಅಭಿಮಾನಿಗಳಿಂದ ಕರೆಯಲ್ಪಡುವ ಸಚಿನ್ ತೆಂಡುಲ್ಕರ್ ಶುಭ ಹಾರೈಸಿದ್ದಾರೆ.

  • 17 Sep 2021 01:45 PM (IST)

    ಬೆಂಗಳೂರಿನಲ್ಲಿ ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದಿಂದ ‘ಏಕ್ ರೂಪಾಯಿ ಮೋದಿ’ ಎಂದು ಪ್ರತಿಭಟನೆ

    ಬೆಂಗಳೂರಿನಲ್ಲಿ ಬೆಲೆ ಏರಿಕೆ ವಿರೋಧಿಸಿ ‘ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕ’ದಿಂದ ವಿನೂತನ ಪ್ರತಿಭಟನೆ ನಡೆಸುತ್ತಿದೆ. 1 ರೂ. ಕಡಿಮೆ ದರದಲ್ಲಿ ಪೆಟ್ರೋಲ್ ಹಾಕಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ‘ಏಕ್ ರೂಪಾಯಿ ಮೋದಿ’ ಎಂದು ಘೋಷಣೆ ಕೂಗಿ ಪ್ರತಿಭಟಿಸಲಾಗುತ್ತಿದೆ.

  • 17 Sep 2021 01:42 PM (IST)

    ಉತ್ತರ ಕನ್ನಡದ ಬೃಹತ್ ಲಸಿಕಾ ಮೇಳದಲ್ಲಿ ಅವ್ಯವಸ್ಥೆ; ಜನರ ಆಕ್ರೋಶ

    ಉತ್ತರಕನ್ನಡ ಜಿಲ್ಲೆಯಲ್ಲಿ ಬೃಹತ್ ಲಸಿಕಾ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ 1 ಲಕ್ಷ ಲಸಿಕೆ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಕಾರಣದಿಂದ ಕಾರವಾರದ ರಂಗಮಂದಿರದಲ್ಲಿ ಲಸಿಕೆಗಾಗಿ ಸಾಲುಗಟ್ಟಿ ನೂರಾರು ಜನರು ನಿಂತಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಸಿಕೆಗಾಗಿ ಬಿಸಿಲಿನಲ್ಲೇ ಕಾದು ಸುಸ್ತಾಗಿರುವ ಜನರು,  ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ ಲಸಿಕೆ ಸೇರಿ ಒಟ್ಟು 300 ಲಸಿಕೆ ಮಾತ್ರ ರಂಗಮಂದಿರದಲ್ಲಿ ವಿತರಣೆ ಮಾಡಲಾಗುತ್ತಿದೆ. ಆದರೆ, 600ರಷ್ಟು ಮಂದಿ ಕಾಯುತ್ತಿದ್ದು, ‘‘ಲಸಿಕೆ ನೀಡುವಲ್ಲಿ ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ. ಲಸಿಕೆ ನೀಡುತ್ತಾರೆ ಎಂದು ಮೇಸೆಜ್ ಹಾಕಿದ್ದರು. ಆದರೆ ಇಲ್ಲಿ 300 ವ್ಯಾಕ್ಸಿನ್ ಮಾತ್ರವೇ ನೀಡುತ್ತಿದ್ದಾರೆ. 300 ಲಸಿಕೆ ಮಾತ್ರ ಕೊಡ್ತಿದ್ದಾರೆ ಅಂತಾ ಮೊದಲೇ ಹೇಳಿದಿದ್ರೆ 2-3 ಗಂಟೆ ಕಾಯುತ್ತಿರಲಿಲ್ಲ. ಸಾಮಾಜಿಕ ಅಂತರವೂ ಇಲ್ಲ, ಯಾವುದೇ ವ್ಯವಸ್ಥೆಯೂ ಇಲ್ಲ. ಡೇಟಾ ಎಂಟ್ರಿಗೆ ಕೊನೇ ಪಕ್ಷ 2-3 ಲ್ಯಾಪ್‌ ಟಾಪ್ ಆದರೂ ಇಟ್ಟುಕೊಳ್ಳಬೇಕಿತ್ತು. ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಯಾವುದೇ ಮಾಹಿತಿ ನೀಡಿದೆ ಲೆಕ್ಕಭರ್ತಿಗಿದ್ದಂತೆ ಸುಮ್ಮನಿದ್ದಾರೆ’’ ಎಂದು ಸಾರ್ವಜನಿಕರು ಅವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.

  • 17 Sep 2021 01:28 PM (IST)

    ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪ್ರಧಾನಿಗೆ ಹಾರೈಸಿದ್ದು ಹೀಗೆ..

    ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಪರೂಪದ ಚಿತ್ರದೊಂದಿಗೆ ಪ್ರಧಾನಿಗೆ ಶುಭಹಾರೈಸಿದ್ದಾರೆ. ಜೊತೆಗೆ ‘ನೀವು ಹುಟ್ಟಿನಿಂದಲೇ ನಾಯಕ’ ಎಂದು ಬರೆದು ಸೈನಾ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

  • 17 Sep 2021 01:25 PM (IST)

    ‘ನಿಮ್ಮಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲ, ಆದರೆ ನಿಮಗೆ ನನ್ನ ಕಡೆಯಿಂದ ಶುಭಾಶಯ’: ಅಕ್ಷಯ್ ಕುಮಾರ್

    ಪ್ರಧಾನಿ ನರೇಂದ್ರ ಮೋದಿಗೆ ಬಾಲಿವುಡ್​ನ ಖ್ಯಾತ ನಟ ಅಕ್ಷಯ್ ಕುಮಾರ್ ಶುಭಾಶಯ ತಿಳಿಸಿದ್ದಾರೆ. ‘ನೀವು ನನ್ನನ್ನು ಯಾವಾಗಲೂ ಪ್ರೇರೇಪಿಸಿದ್ದೀರಿ. ನಿಮ್ಮಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲ. ಆದರೆ ಜನ್ಮದಿನದ ಶುಭಾಶಯಗಳು. ನಿಮಗೆ ಆಯಸ್ಸು, ಆರೋಗ್ಯವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 17 Sep 2021 01:22 PM (IST)

    ದೇಶದಲ್ಲಿ ಇಂದು ಮುಂಜಾನೆಯಿಂದ 56 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಿಕೆ

    ದೇಶದಲ್ಲಿ ಇಂದು ಬೆಳಿಗ್ಗೆಯಿಂದ ಇಲ್ಲಿಯವರೆಗೆ 56 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಇಂದು ದೇಶಾದ್ಯಂತ ಎರಡು ಕೋಟಿ ಡೋಸ್ ಲಸಿಕೆ ನೀಡಿಕೆಯ ಗುರಿ ಹೊಂದಲಾಗಿದ್ದು, ರಾತ್ರಿ ಹತ್ತು ಗಂಟೆ ವೇಳೆಗೆ ಎರಡು ಕೋಟಿ ಡೋಸ್ ಲಸಿಕೆ ನೀಡುವ ಗುರಿಯಿದೆ. ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಿಂದ ಲಸಿಕೆ ನೀಡಿಕೆಯಲ್ಲಿ ವಿಶ್ವದಾಖಲೆಯ ಗುರಿ ಹೊಂದಲಾಗಿದೆ.

  • 17 Sep 2021 01:20 PM (IST)

    ರಾಷ್ಟ್ರಪತಿಗಳಿಂದ ಮೋದಿಗೆ ಶುಭಾಶಯ

    ರಾಷ್ಟ್ರಪತಿ ರಾಮನಾಥ ಕೋವಿಂದ್ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಅರ್ಹನಿಶಿ ಸೇವೆಯಲ್ಲಿ ಮೋದಿ ತೊಡಗಿದ್ದು, ರಾಷ್ಟ್ರಸೇವಾ ಕಾರ್ಯ ಮಾಡುತ್ತೀರಿ’ ಎಂದು ಅವರು ಹಾರೈಸಿದ್ದಾರೆ.

  • 17 Sep 2021 01:17 PM (IST)

    ದಾವಣಗೆರೆಯಲ್ಲಿ ಲಸಿಕಾ ಅಭಿಯಾನಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಚಾಲನೆ

    1 ಲಕ್ಷ ಲಸಿಕೆ ನೀಡುವ ಗುರಿ

    ದಾವಣಗೆರೆ: ಜಿಲ್ಲೆಯ ಬೃಹತ್ ಲಸಿಕಾ ಮೇಳಕ್ಕೆ ಸಂಸದ ಜಿಎಂ ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದ್ದಾರೆ. ಒಂದು ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಸಂಜೆಯೊಳಗೆ ಒಂದು ಲಕ್ಷ ಟಾರ್ಗೆಟ್ ರೀಚ್ ಆಗುತ್ತೇವೆ ಎಂದು ಆರೋಗ್ಯ ಇಲಾಖೆ ಭರವಸೆ ನೀಡಿದೆ.

  • 17 Sep 2021 01:13 PM (IST)

    ಪ್ರಧಾನಿಗೆ ಶುಭಾಶಯ ಕೋರಿದ ವಿರಾಟ್ ಕೊಹ್ಲಿ

    ಪ್ರಧಾನಿ ನರೇಂದ್ರ ಮೋದಿಗೆ ಭಾರತ ಕ್ರಿಕೆಟ್ ತಂಡದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.

  • 17 Sep 2021 01:10 PM (IST)

    ಶೌಚಾಲಯ ಸ್ವಚ ಮಾಡಿ, ಕಸ ಗುಡಿಸಿ ಅರ್ಥಪೂರ್ಣವಾಗಿ ಮೋದಿ ಜನ್ಮದಿನವನ್ನು ಆಚರಿಸಿದ ಮಂಡ್ಯದ ಅಭಿಮಾನಿಗಳು

    ಮಂಡ್ಯ: ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಶೌಚಾಲಯ ಸ್ವಚ ಮಾಡಿ, ಕಸ ಗುಡಿಸಿ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದ್ದಾರೆ. ನರೇಂದ್ರ ಮೋದಿ ಅವರ ಪರಿಕಲ್ಪನೆಯ ಸ್ವಚ್ಛ ಭಾರತ್ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸುವ ಕರೆಯನ್ನು ಆಶಯವಾಗಿಟ್ಟು, ಬಸ್ ನಿಲ್ದಾಣದ ಶೌಚಾಲಯ ಸ್ವಚ್ಚತೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ ಮಾಡಲಾಗಿದೆ. ಹಾಗೆಯೇ ಪ್ಲಾಸ್ಟಿಕ್ ಮುಕ್ತಗೊಳಿಸಲು ಬಟ್ಟೆಯ ಬ್ಯಾಗ್ ವಿತರಣೆ ಮಾಡಲಾಗಿದೆ.

  • 17 Sep 2021 01:06 PM (IST)

    ‘ನಿರುದ್ಯೋಗ ದಿನಾಚರಣೆ’ ಆಚರಿಸಿ ಪ್ರತಿಭಟಿಸುತ್ತಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರು

    ಜಗಳೂರಿನಲ್ಲಿ ಪತ್ರ ಚಳುವಳಿ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ನಿರುದ್ಯೋಗ ದಿನಾಚರಣೆಯಾಗಿ ಆಚರಿಸಲು ಯೂತ್ ಕಾಂಗ್ರೆಸ್‌ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ಕೊಪ್ಪಳ, ಹಾವೇರಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ.

    ದಾವಣಗೆರೆ: ಜಿಲ್ಲೆಯ ಜಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪತ್ರ ಚಳವಳಿ ನಡೆಸಲಾಗುತ್ತಿದೆ. ‘ರಾಷ್ಟ್ರೀಯ ನಿರುದ್ಯೋಗಿಗಳ ದಿನ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

  • 17 Sep 2021 01:02 PM (IST)

    ಮೋದಿ ಜನ್ಮದಿನದ ನಿಮಿತ್ತ ಕೊರಗ ಜನಾಂಗದ ಮನೆಗಳಿಗೆ ಆಹಾರ ಕಿಟ್ ವಿತರಿಸಿದ ಸಚಿವೆ ಶೋಭಾ ಕರಂದ್ಲಾಜೆ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕೊರಗ ಜನಾಂಗದ ಮನೆಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಹಾರ ಕಿಟ್ ವಿತರಿಸಿದ್ದಾರೆ. ‘‘ದೇಶದ ಬಡಜನರ ಸೇವೆ ಅವರಿಗೆ ಪ್ರಿಯವಾದದ್ದು. ಸೇವಾಚಟುವಟಿಕೆ ನಡೆಸಿದರೆ ಅವರಿಗೆ ಮುದಕೊಡುತ್ತದೆ. ಆದ್ದರಿಂದಲೇ ಬೇರೆ-ಬೇರೆ ರೀತಿಯ ಸೇವಾ ಚಟುವಟಿಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇಶದ ರಕ್ಷಣೆ ಮತ್ತು ಗೌರವ ಹೆಚ್ಚಿಸಲು ದೇವರು ಅವರಿಗೆ ಶಕ್ತಿ ನೀಡಲಿ ಎಂದು ಶ್ರೀಕೃಷ್ಣ- ಚಾಮುಂಡೇಶ್ವರಿ ದೇವರಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಶೋಭಾ ನುಡಿದಿದ್ದಾರೆ.

  • 17 Sep 2021 12:34 PM (IST)

    ಬಾಳೆ ಎಲೆಯಲ್ಲಿ ಮೋದಿ ಚಿತ್ರ ಕೆತ್ತಿ ವಿಶ್ ಮಾಡಿದ ಅಭಿಮಾನಿ ಮಂಜುನಾಥ ಹಿರೇಮಠ

    ಧಾರವಾಡ: ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ವಿಭಿನ್ನ ಶೈಲಿಯಲ್ಲಿ ಅಭಿಮಾನಿಗಳು ಅವರಿಗೆ ಶುಭಕೋರುತ್ತಿದ್ದಾರೆ. ಧಾರವಾಡದ ಕೆಲಗೇರಿ ಬಡಾವಣೆಯ ಕಲಾವಿದ ಮಂಜುನಾಥ ಹಿರೇಮಠ, ಬಾಳೆ ಎಲೆಯಲ್ಲಿ ಮೋದಿ ಚಿತ್ರ ಕೆತ್ತಿ ಶುಭ ಕೋರಿದ್ದಾರೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.

  • 17 Sep 2021 12:19 PM (IST)

    ಹಾವೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಣೆ

    ಹಾವೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯyಲ್ಲಿ ಭಾಗಿಯಾದವರು- ಮೋದಿ ವಿರುದ್ಧ ಘೋಷಣೆ ಕೂಗುತ್ತಾ, ನಗರದ ಮೈಲಾರ ಮಹಾದೇವಪ್ಪ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

  • 17 Sep 2021 12:02 PM (IST)

    ಡಾ.ಸುಧಾಕರ್ ಉದ್ಘಾಟನೆ ಮಾಡಿದ ಸಂಚಾರಿ ರಕ್ತದಾನ ಘಟಕದಲ್ಲಿ ಸಿಎಂ ಎಂದು ಬಿಎಸ್​ವೈ ಫೋಟೋ!

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಕಾಣೆ!

    ಆರೋಗ್ಯ ಸಚಿವ ಡಾ.ಸುಧಾಕರ್ ಉದ್ಘಾಟನೆ ಮಾಡಿರುವ ಸಂಚಾರಿ ರಕ್ತದಾನ ಘಟಕದಲ್ಲಿ ಸಿಎಂ ಅಂತಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರವಿದ್ದು ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಕಾಣೆಯಾಗಿದೆ. ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಇಡೀ ನಗರದಲ್ಲಿ ರಕ್ತದಾನ ಸಂಗ್ರಹಿಸಲು ಓಡಾಡುವ ಸಂಚಾರಿ ಬಸ್ ಇದಾಗಿದೆ. ಹಳೆ ಬಸ್​ಗೆ ಈಗ ಉದ್ಘಾಟನೆ ಭಾಗ್ಯ ಸಿಕ್ಕಿದ್ದರಿಂದ ಈ ಎಡವಟ್ಟಾಗಿದೆ ಎಂದು ತಿಳಿದುಬಂದಿದ್ದು, ಕನಿಷ್ಟ ಪಕ್ಷ ಫೋಟೋವನ್ನು ಕೂಡ ಬದಲಾಯಿಸದೇ ಇರುವುದು ಟೀಕೆಗೆ ಗುರಿಯಾಗಿದೆ.

  • 17 Sep 2021 11:48 AM (IST)

    ಬೆಂಗಳೂರಿನಲ್ಲಿ ಲಸಿಕಾ ಮೇಳಕ್ಕೆ ಅದ್ದೂರಿ ರೆಸ್ಪಾನ್ಸ್

    ಬೆಂಗಳೂರಿನಲ್ಲಿಂದು ಲಸಿಕಾ ಮೇಳಕ್ಕೆ ಅದ್ಧೂರಿ ರೆಸ್ಪಾನ್ಸ್ ಲಭ್ಯವಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದು, ಮಲ್ಲೇಶ್ವರ ಸೇರಿದಂತೆ ಬೆಂಗಳೂರಿನಲ್ಲೆಡೆ ಲಸಿಕಾ ಕ್ಯಾಂಪ್ ನಡೆಸಲಾಗುತ್ತಿದೆ. ಮಹಿಳೆಯರಿಗೆಂದೇ ಪಿಂಕ್ ಬೂತ್ ನಿರ್ಮಿಸಲಾಗಿದೆ.

  • 17 Sep 2021 11:44 AM (IST)

    ಬೆಂಗಳೂರಿನಲ್ಲಿ 5 ಲಕ್ಷ ಲಸಿಕೆ ನೀಡುವ ಗುರಿ

    ಅಭಿಯಾನಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್

    ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ವ್ಯಾಕ್ಸಿನ್ ಅಭಿಯಾನ ನಡೆಸಲಾಗುತ್ತಿದೆ. ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಚಾಲನೆ ನೀಡಿದ್ದಾರೆ. ನಗರದಾದ್ಯಂತ 5 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲು ಬಿಬಿಎಂಪಿ ತಯಾರಿ ನಡೆಸಿದೆ. ಈ ವೇಳೆ ಮಾತನಾಡಿದ ಸುಧಾಕರ್, 1- 5ರವರೆಗಿನ ಮಕ್ಕಳ ಸ್ಕೂಲ್ ಆರಂಭಕ್ಕೆ ನಾವು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸಬೇಕು, ಸಿಎಂ ಜೊತೆ ಮಾತನಾಡಬೇಕು. ವೈದ್ಯಕೀಯವಾಗಿ ಹೇಳುವುದಾದರೆ, ಸಣ್ಣ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದಿದ್ದಾರೆ.

  • 17 Sep 2021 11:36 AM (IST)

    ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ನರೇಂದ್ರ ಮೋದಿಗೆ ಶುಭಾಶಯ ಕೋರಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

    ಕಲ್ಯಾಣ ಕರ್ನಾಟಕ ವಿಮೋಚನೆಗೆ ಕಾರಣವಾದ ಸರದಾರ್ ವಲ್ಲಭಭಾಯಿ ಪಟೇಲ್​ರನ್ನೂ ಸ್ಮರಿಸಿದ ಸ್ಪೀಕರ್

    ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರಹೆಗಡೆ ಕಾಗೇರಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಸಭೆಯ ವತಿಯಿಂದ ಎಲ್ಲರೂ ಶುಭಕೋರೋಣ ಎಂದು ಅವರು ನುಡಿದಿದ್ದಾರೆ.

    ಜೊತೆಗೆ ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನವಾದ ಕಾರಣ, ಸರದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸಬೇಕು ಎಂದು ನುಡಿದಿದ್ದಾರೆ. ‘‘ಸೆಪ್ಟೆಂಬರ್‌ 17 ಕಲ್ಯಾಣ ಕರ್ನಾಟಕ ವಿಮೋಚನಾ ದಿನವಾಗಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾಗಿದೆ. ಇಂದು ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸಬೇಕು. ಆ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದರು. ಕಲ್ಯಾಣ ಕರ್ನಾಟಕದವರ ಖುಷಿಯಲ್ಲಿ ಎಲ್ಲರೂ ಭಾಗಿಯಾಗೋಣ’’ ಎಂದು ಕಾಗೇರಿ ಕರೆ ನೀಡಿದ್ದಾರೆ.

  • 17 Sep 2021 11:29 AM (IST)

    ವಿಜಯನಗರ- ಬಳ್ಳಾರಿ ಜಿಲ್ಲಾಡಳಿತದಿಂದ ‘ಲಸಿಕೆ ಹಾಕಿಸಿಕೊಳ್ಳಿ’ ವಿಶೇಷ ವಿಡಿಯೊ ಬಿಡುಗಡೆ

    ಲಸಿಕೆ ಉತ್ಸವ ಹಿನ್ನಲೆಯಲ್ಲಿ ವಿಜಯನಗರ- ಬಳ್ಳಾರಿ ಜಿಲ್ಲಾಡಳಿತದಿಂದ ‘ಲಸಿಕೆ ಹಾಕಿಸಿಕೊಳ್ಳಿ’ ಎಂಬ ವಿಶೇಷ ವಿಡಿಯೋ ಬಿಡುಗಡೆ ಮಾಡಲಾಗಿದೆ. ಹಂಪಿಯ ಪರಿಸರದಲ್ಲಿ ವಿಡಿಯೊವನ್ನು ಶೂಟ್ ಮಾಡಲಾಗಿದ್ದು, ಸಚಿವ ಆನಂದ್ ಸಿಂಗ್ ಬಿಡುಗಡೆ ಮಾಡಿದ್ದಾರೆ.

  • 17 Sep 2021 11:17 AM (IST)

    ಕಲಬುರಗಿಯಲ್ಲಿ ಬೃಹತ್ ಲಸಿಕಾ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ

    ಕಲಬುರಗಿಯ ಡಿ.ಆರ್. ಪರೇಡ್ ಮೈದಾನದಲ್ಲಿ ಬೃಹತ್ ಲಸಿಕಾ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಇಂದು ಸುಮಾರು 30 ಲಕ್ಷ ಡೋಸ್ ಲಸಿಕೆ ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

  • 17 Sep 2021 11:04 AM (IST)

    ಶಿವಮೊಗ್ಗದಲ್ಲಿ ಇಂದು ಒಂದು ಲಕ್ಷ ಲಸಿಕೆ ನೀಡುವ ಗುರಿ

    ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

    ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಲಕ್ಷ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಹೋದರ ವಿಜಯೇಂದ್ರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಡಿಎಚ್​ಒ ರಾಜೇಶ್ ಸುರಗಿಹಳ್ಳಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

  • 17 Sep 2021 10:57 AM (IST)

    ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್​ನಿಂದ ‘ನಿರುದ್ಯೋಗ್ ದಿವಸ್’ ಆಚರಣೆ

    ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಮೋದಿ ಜನ್ಮದಿನವನ್ನು ‘ನಿರುದ್ಯೋಗ ದಿವಸ್’ ಆಗಿ ಆಚರಿಸಲಾಗುತ್ತಿದ್ದು, ಟೀ ಮಾರುವವರು, ಪಕೋಡ ಮಾರುವವರು, ಪೇಪರ್ ಹಾಕುವವರ ವೇಷ ಹಾಕಿಕೊಂಡು ಧರಣಿ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ‘ಮೋದಿ ಹಠಾವೋ ಉದ್ಯೋಗ ಬಚಾವೋ’ ಘೋಷಣೆಗಳನ್ನು ಕೂಗಲಾಗುತ್ತಿದೆ.

    ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಯೂತ್ ಕಾಂಗ್ರೆಸ್ ಸದಸ್ಯರು

  • 17 Sep 2021 10:37 AM (IST)

    ದಿನದ 24 ಗಂಟೆ ಲಸಿಕೆ ನೀಡುವ ಲಸಿಕಾ ಕೇಂದ್ರಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ

    ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಚಾಲನೆ ನೀಡಿದ್ದಾರೆ. ಮಲ್ಲೇಶ್ವರಂನ ಗಾಯತ್ರಿ ನಗರದಲ್ಲಿ ವ್ಯಾಕ್ಸಿನ್ ಮಹಾಮೇಳ ಹಿನ್ನೆಲೆಯಲ್ಲಿ ದಿನದ 24 ಗಂಟೆಯೂ ಲಸಿಕೆ ನೀಡುವ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.

  • 17 Sep 2021 10:08 AM (IST)

    ಪ್ರಧಾನಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಶುಭಾಶಯ

    ಪ್ರಧಾನಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

  • 17 Sep 2021 09:52 AM (IST)

    ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು ಇಂದಿನಿಂದ

    ಹರಾಜಿನಿಂದ ಬಂದ ಹಣ ‘ನಮಾಮಿ ಗಂಗೆ’ ಯೋಜನೆಗೆ ಮೀಸಲು

    ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಜನ್ಮದಿನದ ಸಂದರ್ಭದಲ್ಲಿ ಅವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಆಯೋಜಿಸಿದೆ. ಈ ಹರಾಜಿನಿಂದ ಪಡೆದ ಮೊತ್ತವನ್ನು ನಮಾಮಿ ಗಂಗೆ ಮಿಷನ್‌ಗೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಹರಾಜಿನಲ್ಲಿ ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಪದಕ ವಿಜೇತರ ಉಪಕರಣಗಳು, ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ, ಚಾರ್​​ಧಾಮ್, ರುದ್ರಾಕ್ಷ ಸಮಾವೇಶ ಕೇಂದ್ರದ ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರಗಳು ಇತ್ಯಾದಿಗಳನ್ನು ಹರಾಜು ಹಾಕಲಾಗುವುದು.

    ಸೆಪ್ಟೆಂಬರ್ 17 ರಿಂದ 2021 ರ ಅಕ್ಟೋಬರ್ 7 ರವರೆಗೆ ನಡೆಯುವ ಇ-ಹರಾಜಿನಲ್ಲಿ https://pmmementos.gov.in ವೆಬ್‌ಸೈಟ್ ಮೂಲಕ ಭಾಗವಹಿಸಬಹುದು.

  • 17 Sep 2021 09:31 AM (IST)

    ಪ್ರಧಾನಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶುಭಾಶಯ

    ‘ಪ್ರಧಾನಿಯವರಿಗೆ ಜನ್ಮದಿನದ ಶುಭಾಶಯಗಳು. ಅವರ ನೇತೃತ್ವದಲ್ಲಿ ಭಾರತದ ಎಲ್ಲಾ ನಾಗರಿಕರಿಗೆ ಶಾಂತಿ ಹಾಗೂ ಸಮೃದ್ದಿ ಲಭಿಸಲಿ’ ಎಂದು ಅವರು ಶುಭ ಹಾರೈಸಿದ್ದಾರೆ.

  • 17 Sep 2021 09:11 AM (IST)

    ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ

    ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ಧಾರೆ.

  • 17 Sep 2021 09:02 AM (IST)

    ಬಿಜೆಪಿಯಿಂದ ‘ಸೇವಾ ಔರ್ ಸಮರ್ಪಣ್ ಅಭಿಯಾನ’ದಲ್ಲಿ ಹಲವು ಕಾರ್ಯಕ್ರಮಗಳ ಆಯೋಜನೆ

    ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿಯಿಂದ ‘ಸೇವಾ ಔರ್ ಸಮರ್ಪನ್ ಅಭಿಯಾನ’ ಆಯೋಜನೆ ಮಾಡಲಾಗಿದೆ. ಇದು ಇಂದಿನಿಂದ ಅಕ್ಟೋಬರ್ 7 ವರೆಗೆ ನಡೆಯಲಿದೆ. ಈ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ವರ್ಗಗಳ ಜನರನ್ನು ತಲುಪಲು ನಿರ್ಧರಿಸಲಾಗಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 17-20ರವರೆಗೆ ಆರೋಗ್ಯ ತಪಾಸಣಾ ಶಿಬಿರ, ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ, ಅನುಸೂಚಿತ ಜಾತಿ ಮೋರ್ಚಾದಿಂದ ಅಗತ್ಯವಿರುವವರಿಗೆ ಹಣ್ಣುಗಳ ವಿತರಣೆ, ಒಬಿಸಿ ಮೋರ್ಚಾದಿಂದ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಲ್ಲಿ ಹಣ್ಣುಗಳ ವಿತರಣೆ, ಕಿಸಾನ್ ಮೋರ್ಚಾದಿಂದ ‘ಕಿಸಾನ್ ಸಮ್ಮಾನ್ ದಿವಸ್’ ಆಯೋಜನೆ, 71 ರೈತರು ಮತ್ತು 71 ಯುವಕರಿಗೆ ಸನ್ಮಾನ, 71 ಮಹಿಳಾ ಕರೋನಾ ವಾರಿಯರ್ಸ್ ಗೆ ಮಹಿಳಾ ಮೋರ್ಚಾದಿಂದ ಗೌರವ- ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

  • 17 Sep 2021 08:35 AM (IST)

    ‘ನಿಮ್ಮ ನೇತೃತ್ವದಲ್ಲಿ ಭಾರತ ಅತ್ಯುನ್ನತ ಎತ್ತರಕ್ಕೆ ಏರಲಿದೆ’: ಮೋದಿಗೆ ಶುಭ ಹಾರೈಸುತ್ತಾ ನಿತಿನ್ ಗಡ್ಕರಿ ಟ್ವೀಟ್

    ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿgಎ ಶುಭ ಹಾರೈಸಿದ್ದು, ನಿಮ್ಮ ನೇತೃತ್ವದಲ್ಲಿ ಭಾರತ ಅತ್ಯುನ್ನತ ಎತ್ತರಕ್ಕೆ ಏರಲಿದೆ. ಭಾರತ ಸ್ವಾವಲಂಬಿಯಾಗುವ ಕನಸು ಸಾಕಾರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  • 17 Sep 2021 08:19 AM (IST)

    ಮೋದಿಗೆ ಶುಭ ಹಾರೈಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ಮೋದಿಗೆ ಶುಭ ಹಾರೈಸಿದ್ದು, ‘ಮೋದಿಯವರು ದೂರದೃಷ್ಟಿಗೆ, ನಿರ್ಣಯಗಳನ್ನು ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

  • 17 Sep 2021 08:02 AM (IST)

    ದೇಶದಲ್ಲಿ ಬೃಹತ್ ಲಸಿಕಾ ಅಭಿಯಾನಕ್ಕೆ ಸಿದ್ಧತೆ

    ದೇಶದಲ್ಲಿ ಇಂದು ಒಟ್ಟಾರೆ ಎರಡು ಕೋಟಿ ಡೋಸ್ ಗಿಂತ ಹೆಚ್ಚಿನ ಕೊರೊನಾ ಲಸಿಕೆ ನೀಡಿಕೆಗೆ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಭಾಗವಾಗಿ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಇಂದು 30 ಲಕ್ಷ ಡೋಸ್ ಲಸಿಕೆ ನೀಡಿಕೆಯ ಗುರಿ ಹೊಂದಲಾಗಿದೆ. ಉತ್ತರಪ್ರದೇಶ, ಹರಿಯಾಣ, ಗುಜರಾತ್ ರಾಜ್ಯದಲ್ಲಿ ದಾಖಲೆಯ ಲಸಿಕೆ ನೀಡಿಕೆಗೆ ಪ್ಲ್ಯಾನ್ ರೂಪಿಸಲಾಗಿದೆ. ದೇಶದಲ್ಲಿ ಇದುವರೆಗೂ ಮೂರು ಬಾರಿ 24 ಗಂಟೆ ಅವಧಿಯಲ್ಲಿ ಒಂದು ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ನೀಡಲಾಗಿದೆ. ಹೀಗಾಗಿ ಈಗ ಎರಡು ಕೋಟಿ ಡೋಸ್ ಲಸಿಕೆ ನೀಡಿಕೆಯ ಗುರಿಯನ್ನು ಹೊಂದಲಾಗಿದೆ. ಆದರೆ ಇದನ್ನು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಘೋಷಿಸಿಲ್ಲ.

  • 17 Sep 2021 07:59 AM (IST)

    ದೇಶದಲ್ಲಿ ಇಂದಿನಿಂದ 21 ದಿನಗಳ ಕಾಲ ಸೇವೆ ಮತ್ತು ಸಮರ್ಪಣೆ ಅಭಿಯಾನ

    ಪ್ರಧಾನಿ ಮೋದಿಗೆ 71ನೇ ಜನ್ಮದಿನದ ಸಂಭ್ರಮ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ವಿಶೇಷ ಕ್ಯಾಂಪೇನ್ ನಡೆಸಲು ನಿರ್ಧರಿಸಲಾಗಿದೆ. 21 ದಿನಗಳ ಕಾಲ ಸೇವಾ ಮತ್ತು ಸಮರ್ಪಣಾ ಅಭಿಯಾನವನ್ನು ನಡೆಸಲು ಉದ್ದೇಶಿಸಲಾಗಿದೆ.

  • 17 Sep 2021 07:46 AM (IST)

    ಪ್ರಧಾನಿಗೆ ಶುಭಹಾರೈಸಿದ ಗೃಹ ಸಚಿವ ಅಮಿತ್ ಶಾ

    ‘ದೇಶದ ನೆಚ್ಚಿನ ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಆಯಸ್ಸು, ಆರೊಗ್ಯ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. ದೇಶದ ಜನರಿಗೆ ಕೇವಲ ಭವಿಷ್ಯದ ಕನಸುಗಳನ್ನು ನೀಡಿರುವುದಷ್ಟೇ ಅಲ್ಲ, ಅದನ್ನು ಸಾಧಿಸಿ ತೋರಿಸಿದ್ದಾರೆ ಮೋದಿ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

  • 17 Sep 2021 07:38 AM (IST)

    ಪ್ರಧಾನಿಗೆ ಶುಭ ಹಾರೈಸಿದ ಸಿಎಂ ಬಸವರಾಜ ಬೊಮ್ಮಾಯಿ

    ಭಾರತಕ್ಕೆ ದೊರೆತ ದಿಟ್ಟ, ಸ್ಪಷ್ಟ, ಸಮರ್ಥ ನಾಯಕ ಮೋದಿ ಎಂದು ಹೊಗಳಿರುವ ಮುಖ್ಯಮಂತ್ರಿ ಬೊಮ್ಮಾಯಿ, ಪ್ರಧಾನಿಗೆ ಶುಭಹಾರೈಸಿದ್ದಾರೆ.

Published On - 7:10 am, Fri, 17 September 21

Follow us on