ಸೋನು ಸೂದ್ ಮನೆ ಮೇಲೆ ಐಟಿ ದಾಳಿ: ಬಿಜೆಪಿ ಪಕ್ಷ ತಾಲಿಬಾನ್ ಮನಸ್ಥಿತಿ ಹೊಂದಿದೆ ಎಂದ ಶಿವ ಸೇನಾ
ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದ್ದಾಗ ಸೂದ್ ಅವರು ವಲಸೆ ಕಾರ್ಮಿಕರು ತಮ್ಮ ರಾಜ್ಯ, ಊರು ತಲುಪಲು ಸಾಧ್ಯವಾಗುವ ಹಾಗೆ ಟ್ರೇನ್ ಮತ್ತು ವಿಮಾನಗಳನ್ನೂ ಸಹ ಏರ್ಪಾಟು ಮಾಡಿದರು.
ತೆರಿಗೆ ಇಲಾಖೆ ಅಧಿಕಾರಿಗಳು ಸತತವಾಗಿ ಎರಡನೇ ದಿನವೂ ಬಾಲಿವುಡ್ ನಟ ಸೋನು ಸೂದ್ ಅವರ ಮುಂಬೈ ಮನೆಯಲ್ಲಿ ಕಾಣಿಸಿಕೊಂಡರು. ನಿಮಗೆ ನೆನಪಿರಬಹುದು ತೆರಿಗೆ ಅಧಿಕಾರಿಗಳು ಬುಧವಾರ ನಟನ ಮನೆ ಮೇಲೆ ದಾಳಿ ನಡೆಸಿ ತಡರಾತ್ರಿಯವರೆಗೆ ಅವರ ಕಾಗದ ಪತ್ರಗಳ ತಪಾಸಣೆ ನಡೆಸಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಸೋನು ಸೂದ್ ಅವರು ಲಖನೌ-ಮೂಲದ ರೀಯಲ್ ಎಸ್ಟೇಟ್ ಕಂಪನಿಯೊಂದರ ಜೊತೆ ನಡೆಸಿರುವ ಆಸ್ತಿಯ ಬಗ್ಗೆ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದ್ದಾರೆ. ಬುಧವಾರದಂದು ಅಧಿಕಾರಿಗಳು ಸೋನು ಸೂದ್ ಜುಹುನಲ್ಲಿನ ತಮ್ಮ ಮನೆಯಲ್ಲಿ ನಡೆಸುವ ಚಾರಿಟಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಆವರಿಗೆ ಸೇರಿರುವ ಆಸ್ತಿ/ಕಚೇರಿಗಳಿರುವ ಒಟ್ಟು ಆರು ಸ್ಥಳಗಳ ಮೇಲೆ ಸಹ ದಾಳಿ ನಡೆಸಿ ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದರು.
‘ಸೋನು ಸೂದ್ ಅವರು ಲಖನೌ-ಮೂಲದ ರೀಯಲ್ ಎಸ್ಟೇಟ್ ಕಂಪನಿಯೊಂದರ ಜೊತೆ ಇತ್ತೀಚಿಗೆ ನಡೆಸಿರುವ ಡೀಲ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ತೆರಿಗೆ ವಂಚನೆ ನಡೆದಿರುವುದು ತೆರಿಗೆ ಇಲಾಖೆಯ ಗಮನಕ್ಕೆ ಬಂದಿರುವುದರಿಂದ ಒಂದು ‘ಸಮೀಕ್ಷೆಯನ್ನು’ ಮಾಡಲಾಗುತ್ತಿದೆ,’ ಎಂದು ತಿಳಿಸಿರುವ ಮೂಲಗಳು ಸದರಿ ದಾಳಿಯನ್ನು ‘ಸರ್ವೇ’ (ಸಮೀಕ್ಷೆ) ಎಂದು ಕರೆದಿವೆ.
ಆದರೆ, ವಿರೋದಪಕ್ಷದ ನಾಯಕರು 48 ವರ್ಷ ವಯಸ್ಸಿನ ನಟನಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕೊವಿಡ್ ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿ ವಲಸೆ ಕಾರ್ಮಿಕರ ಬದುಕನ್ನು ನರಕ ಮಾಡಿದ ಸಂದರ್ಭದಲ್ಲಿ ಅವರಿಗೆ ಎಲ್ಲ ರೀತಿಯ ಸಹಕಾರ ಒದಗಿಸಿ ಕಾರ್ಮಿಕರ ಮತ್ತು ಅವರ ಕುಟುಂಬಗಳ ಪಾಲಿಗೆ ಮಸೀಯನಾಗಿದ್ದ ಸೋನು ಅವರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆಪಾದಿಸುತ್ತಿದ್ದಾರೆ.
ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದ್ದಾಗ ಸೂದ್ ಅವರು ವಲಸೆ ಕಾರ್ಮಿಕರು ತಮ್ಮ ರಾಜ್ಯ, ಊರು ತಲುಪಲು ಸಾಧ್ಯವಾಗುವ ಹಾಗೆ ಟ್ರೇನ್ ಮತ್ತು ವಿಮಾನಗಳನ್ನೂ ಸಹ ಏರ್ಪಾಟು ಮಾಡಿದರು. ಈ ವರ್ಷ ಎರಡನೇ ಅಲೆ ದೇಶವನ್ನು ಅಪ್ಪಳಿಸಿದಾಗ ಅವರು ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೂದ್ ಅವರು ಇತ್ತೀಚಿಗೆ ಭೇಟಿ ಮಾಡಿ ಒಂದು ಸುದೀರ್ಘವಾದ ಸಭೆ ನಡೆಸಿದ ಬಳಿಕ ಕೇಜ್ರಿವಾಲ್ ಅವರು ನಟನನ್ನು ದೆಹಲಿ ಶಾಲಾ ಮಕ್ಕಳಿಗಾಗಿ ಅವರ ಸರ್ಕಾರ ರೂಪಿಸಿರುವ ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಅಂಬ್ಯಾಸಿಡರ್ ಆಗಿ ಘೋಷಿಸಿದರು.
ಅನೇಕ ಪಾರ್ಟಿ ಮತ್ತು ನಾಯಕರು ತಮ್ಮ ಪಕ್ಷ ಸೇರುವಂತೆ ದುಂಬಾಲು ಬಿದ್ದಿದ್ದರೂ ನಟ ಸೂದ್ ಮಾತ್ರ ತಾನು ಜನರಿಗೆ ಮಾಡಿದ ಸಹಾಯ ಮತ್ತು ರಾಜಕಾರಣದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಕೇಜ್ರಿವಾಲ್ ಅವರೊಂದಿಗೆ ನಡೆಸಿದ ಭೇಟಿ ಸೋನು ಅವರ ರಾಜಕೀಯ ಪ್ರವೇಶಕ್ಕೆ ನಾಂದಿಯಾಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಮುಂದಿನ ವರ್ಷ ಪಂಜಾಬ್ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಸೂದ್ ಅವರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಲ್ಲಿಸುವ ಯೋಚನೆ ಕೇಜ್ರಿವಾಲ್ ಅವರಿಗೆ ಇದೆಯೆಂದು ಹೇಳಲಾಗುತ್ತಿದೆ.
ಸೋನು ಸೂದ್ ಅವರ ಆಸ್ತಿಗಳ ಮೇಲೆ ನಡೆದ ತೆರಿಗೆ ದಾಳಿಗಳು ರಾಜಕೀಯ ಪ್ರೇರಿತವಲ್ಲ ಎಂದು ಬಿಜೆಪಿ ಹೇಳಿದೆ.
‘ಯಾವುದೇ ಕೇಂದ್ರೀಯ ಏಜೆನ್ಸಿ ಕ್ರಮವೊಂದನ್ನು ತೆಗೆದುಕೊಂಡರೆ, ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳ ನಾಯಕರು ಅದನ್ನು ರಾಜಕೀಯ ಪ್ರೇರಿತ ಎನ್ನುತ್ತಾರೆ. ಅದರರ್ಥ ಏನು? ಈ ಏಜೆನ್ಸಿಗಳೆಲ್ಲ ಕೆಲಸ ಮಾಡುವುದನ್ನು ನಿಲ್ಲಿಸಬೇಕೇ? ಈ ದಾಳಿಗಳು ಪಾರದರ್ಶಕವಾಗಿವೆ,’ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದಾರೆ.
ಕದಮ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವ ಸೇನಾದ ವಕ್ತಾರೆ ಮನೀಷಾ ಕಾಯಂಡೆ ಅವರು, ‘ಆಯ್ದ ಜನರ ಮೇಲೆ ಮಾತ್ರ ತೆರಿಗೆ ದಾಳಿ ನಡೆಯುತ್ತಿವೆ. ಅವರನ್ನು ಟಾರ್ಗೆಟ್ ಮಾಡಿ ಏಜೆನ್ಸಿಗಳನ್ನು ಛೂ ಬಿಡಲಾಗುತ್ತಿದೆ, ಬಿಜೆಪಿಯದ್ದು ತಾಲಿಬಾನ್ನಂಥ ಮನಸ್ಥಿತಿ,’ ಎಂದಿದ್ದಾರೆ.