ಸಿಎಂ ಯೋಗಿ ಹುಟ್ಟುಹಬ್ಬಕ್ಕೆ ವಿಶ್​​ ಮಾಡದ ಪ್ರಧಾನಿ ಮೋದಿ; ಅನುಮಾನಗಳಿಗೆ ಮತ್ತಷ್ಟು ಪುಷ್ಟಿ..ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

| Updated By: Lakshmi Hegde

Updated on: Jun 06, 2021 | 11:58 AM

ಈ ವಾರದ ಪ್ರಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ ಅವರು ಉತ್ತರ ಪ್ರದೇಶ ಸರ್ಕಾರದ ಸಚಿವರ ಜತೆ, ಲಖನೌದಲ್ಲಿ ಒಂದರ ಬೆನ್ನಿಗೆ ಒಂದರಂತೆ ಸಭೆಗಳನ್ನು ನಡೆಸಿದ್ದರು. ಯೋಗಿ ಸರ್ಕಾರದ ಬಗ್ಗೆ ಫೀಡ್​​ಬ್ಯಾಕ್​ ಪಡೆದಿದ್ದರು.

ಸಿಎಂ ಯೋಗಿ ಹುಟ್ಟುಹಬ್ಬಕ್ಕೆ ವಿಶ್​​ ಮಾಡದ ಪ್ರಧಾನಿ ಮೋದಿ; ಅನುಮಾನಗಳಿಗೆ ಮತ್ತಷ್ಟು ಪುಷ್ಟಿ..ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ಯೋಗಿ ಆದಿತ್ಯನಾಥ್​ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಉತ್ತರಪ್ರದೇಶದಲ್ಲಿ ನಾಯಕತ್ವ ಬದಲಾವಣೆಯಾಗಲಿದೆಯಾ? ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನಡುವೆ ಏನೂ ಸರಿಯಿಲ್ಲವಾ? ಯೋಗಿ ಆದಿತ್ಯನಾಥ್​ ಅವರ ಆಡಳಿತದ ಬಗ್ಗೆ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರು ಅಸಮಾಧಾನಗೊಂಡಿದ್ದಾರಾ? ಇಂಥ ಹತ್ತು ಹಲವು ಪ್ರಶ್ನೆಗಳು ಇತ್ತೀಚೆಗೆ ಎದ್ದಿದ್ದವು. ಅದರಲ್ಲೂ ನಿನ್ನೆ ಜೂ.5ರಂದು ಯೋಗಿ ಆದಿತ್ಯನಾಥ್​ರ ಹುಟ್ಟಿದ ದಿನವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟರ್​​ನಲ್ಲಿ ಅವರಿಗೆ ಶುಭ ಹಾರೈಸಲಿಲ್ಲ. ಹೀಗಾಗಿ ಮತ್ತೊಂದಷ್ಟು ಅನುಮಾನಗಳು ಕಾಡಲು ಶುರುವಾಗಿವೆ. ಆದರೆ ಉತ್ತರ ಪ್ರದೇಶದಲ್ಲಿ ಸಂಪುಟ ವಿಸ್ತರಣೆ ಆಗಲಿದ್ದರೂ ನಾಯಕತ್ವದ ಬದಲಾವಣೆ ಇಲ್ಲ. ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದಲ್ಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರು ಸಾಮಾನ್ಯವಾಗಿ ಭಾರತದ ಪ್ರಮುಖ ರಾಜಕಾರಣಿಗಳು, ಗಣ್ಯರಷ್ಟೇ ಅಲ್ಲದೆ, ವಿದೇಶಿ ನಾಯಕರ ಹುಟ್ಟಿದ ದಿನಕ್ಕೆ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಾರೈಕೆಯ ಟ್ವೀಟ್ ಮಾಡುತ್ತಾರೆ. ಅದರ ಹೊರತಾಗಿ ಕೂಡ ಏನಾದರೂ ವಿಶೇಷ ಸಂದರ್ಭಗಳಲ್ಲಿ ಅಭಿನಂದನೆ ಸಲ್ಲಿಸುತ್ತಾರೆ. ಯೋಗಿ ಆದಿತ್ಯನಾಥ್​ ಅವರ ಕಳೆದ ವರ್ಷದ ಬರ್ತ್​ ಡೇ ದಿನವೂ ನರೇಂದ್ರ ಮೋದಿ ಟ್ವೀಟ್​ ಮಾಡಿ, ಅವರನ್ನು ಹೊಗಳಿ ಶುಭ ಹಾರೈಸಿದ್ದರು. ಆದರೆ ಈ ಸಲ ವಿಶ್​ ಮಾಡಲಿಲ್ಲ. ಇದು ಸಹಜವಾಗಿಯೇ ಟ್ವೀಟಿಗರಲ್ಲಿ ಅಚ್ಚರಿ ಮೂಡಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಬಗ್ಗೆ ನರೇಂದ್ರ ಮೋದಿ ಅಸಮಾಧಾನ ಹೊಂದಿದ್ದಾರೆ ಎಂಬರ್ಥದ ಟ್ವೀಟ್​​ಗಳೂ ಮಾಡಲ್ಪಟ್ಟಿವೆ.

ಈ ವಾರದ ಪ್ರಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ ಅವರು ಉತ್ತರ ಪ್ರದೇಶ ಸರ್ಕಾರದ ಸಚಿವರ ಜತೆ, ಲಖನೌದಲ್ಲಿ ಒಂದರ ಬೆನ್ನಿಗೆ ಒಂದರಂತೆ ಸಭೆಗಳನ್ನು ನಡೆಸಿದ್ದರು. ಯೋಗಿ ಸರ್ಕಾರದ ಬಗ್ಗೆ ಫೀಡ್​​ಬ್ಯಾಕ್​ ಪಡೆದಿದ್ದರು. ಹಾಗೇ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜ್ಯ ಘಟಕದ ಸಿದ್ಧತೆಗಳ ಬಗ್ಗೆಯೂ ಪರಿಶೀಲನೆ ಮಾಡಿದ್ದರು. ಅದಾದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಜತೆ ಗುಪ್ತವಾಗಿ ಸಭೆ ನಡೆಸಿದ್ದರು. ರಾಜ್ಯದ ಹಲವು ಬಿಜೆಪಿ ನಾಯಕರು, ಸಚಿವರು ಕೊವಿಡ್​ 19 ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಭೇಟಿ, ಸಭೆ ನಡೆಸಿದ್ದರು. ಈ ಎಲ್ಲ ಬೆಳವಣಿಗಗಳು ಸಹಜವಾಗಿಯೇ ಒಂದಷ್ಟು ಕುತೂಹಲ, ಅನುಮಾನಗಳನ್ನು ಹುಟ್ಟಿಸಿದ್ದವು. ಆದರೆ ಅದಕ್ಕೆಲ್ಲ ನಿನ್ನೆಯೇ ಸಿಕ್ಕಿದೆ.

ಇನ್ನು ನರೇಂದ್ರ ಮೋದಿಯವರು ಯಾಕಾಗಿ ಯೋಗಿ ಆದಿತ್ಯನಾಥ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಿಲ್ಲ ಎಂಬುದಕ್ಕೂ ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟನೆ ನೀಡಿವೆ. ಕೊವಿಡ್​ 19 ಎರಡನೇ ಅಲೆ ಉಲ್ಬಣಗೊಂಡಾಗಿನಿಂದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟರ್​ ಅಥವಾ ಇನ್ಯಾವುದೇ ಸೋಷಿಯಲ್​ ಮೀಡಿಯಾ ಮೂಲಕ, ಯಾವುದೇ ಗಣ್ಯರು, ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ವಿಶ್​ ಮಾಡಲಿಲ್ಲ ಎಂದು ಸರ್ಕಾರ ತಿಳಿಸಿದೆ.

ಏಪ್ರಿಲ್​ ಕೊನೇ ವಾರದಿಂದ ಪಿಎಂ ಮೋದಿ ಯಾರಿಗೂ ಅಭಿನಂದನೆ, ಬರ್ತ್ ಡೇ ವಿಶ್​​ಗಳನ್ನು ತಿಳಿಸಿಲ್ಲ. ಜನರಿಗೆ ಹಬ್ಬಗಳಿಗೆ ವಿಶ್​ ಮಾಡುತ್ತಿದ್ದಾರೆ. ಆದರೆ ಯಾವುದೇ ಮುಖಂಡರು, ನಾಯಕರಿಗೆ ವೈಯಕ್ತಿಕ ವಿಶ್​ ಮಾಡೋದನ್ನು ಬಿಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಏಪ್ರಿಲ್​ 24ರಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್​ ಜನ್ಮದಿನವಿತ್ತು. ಅವರಿಗೂ ಪ್ರಧಾನಿ ಮೋದಿ ವಿಶ್​ ಮಾಡಲಿಲ್ಲ. ಮೇ 3ರಂದು ಜಾರ್ಖಂಡ ಮುಖಂಡ ಅರ್ಜುನ್​ ಮುಂದಾ ಮತ್ತು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಬರ್ತ್​ ಡೇ ಇತ್ತು. ಹಾಗೇ ಮೇ 5ರಂದು ಹರ್ಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​, ಮೇ 24ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಹುಟ್ಟುಹಬ್ಬವಿತ್ತು. ಅಷ್ಟೇ ಏಕೆ ಮೇ 27ರಂದು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಜನ್ಮದಿನವಿತ್ತು. ಇವರ್ಯಾರ ಹುಟ್ಟುಹಬ್ಬಕ್ಕೂ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ವಿಶ್​ ಮಾಡಲಿಲ್ಲ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕ, ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ: ಗೋವಿಂದ ಕಾರಜೋಳ ಪ್ರತಿಕ್ರಿಯೆ

PM Narendra Modi did not wish on Uttar Pradesh CM Yogi adityanath Birthday

Published On - 11:57 am, Sun, 6 June 21