ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಟಿವಿ9ಗೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಮುಂದೆ ಇಲ್ಲ. ಪರ್ಯಾಯ ನಾಯಕರು ಇಲ್ಲ ಎಂಬ ಪ್ರಶ್ನೆ ಉದ್ಭವಿಸಲ್ಲ. ಬಿಎಸ್‌ವೈ 45 ವರ್ಷಗಳಿಂದ ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯಡಿಯೂರಪ್ಪ ಮಾಡಬೇಕಾದ ಕೆಲಸವನ್ನು ಮಾಡಿದ್ದಾರೆ. ಬಿಎಸ್‌ವೈ 2ನೇ ಹಂತದ ನಾಯಕರನ್ನು ಕೂಡ ಬೆಳೆಸಿದ್ದಾರೆ. ಬದಲಾವಣೆ ಜಗದ ನಿಯಮ. ಆದರೆ ಈಗ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಜೊತೆಗೆ ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬಿಜೆಪಿಯಲ್ಲಿ ಯಡಿಯೂರಪ್ಪ ಅಗ್ರಮಾನ್ಯ ನಾಯಕ. ಕರ್ನಾಟಕದಲ್ಲಿ ಬಿಜೆಪಿ ಇಲ್ಲದಾಗ ಶ್ರಮ ಪಟ್ಟು ಯಡಿಯೂರಪ್ಪ, ಆನಂತ್ ಕುಮಾರ್ ಪಕ್ಷ ಕಟ್ಟಿದ್ದಾರೆ. ಪಕ್ಷ ಇಷ್ಟು ಬೆಳೆಯಲು ಅದರ ಹೋರಾಟ ಇದೆ. ಆರ್ಎಸ್ಎಸ್ ಹಿನ್ನೆಲೆಯಲ್ಲಿ ಬಂದು ಪಕ್ಷ ಕಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವ ಸಂದರ್ಭದಲ್ಲಿ ಸಿಎಂ ಹಾಗೇ ಹೇಳಿದ್ದಾರೆಂದು ಗೊತ್ತಿಲ್ಲ. ಹೈಕಮಾಂಡ್ ಹೇಳಿದಂತೆ ಮಾಡುತ್ತೇನೆಂದು ಸಂದೇಶ ಕೊಟ್ಟಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಲಿ ಎಂದು ನಾವು 17 ಜನ ಬಂದಿದ್ದೇವೆ. ನಮ್ಮ ನಿಷ್ಠೆ ಸಿಎಂ ಯಡಿಯೂರಪ್ಪ, ಪಕ್ಷಕ್ಕೆ ಇದೆ ಎಂದು ಹೇಳಿಕೆ ನೀಡಿದರು.
ಸಿಎಂ ಹೇಳಿಕೆ ಬಹಳ ಸ್ಪಷ್ಟವಾಗಿದೆ, ಗೊಂದಲ ಇಲ್ಲ: ಹೆಚ್.ವಿಶ್ವನಾಥ್ ಹೈಕಮಾಂಡ್ ಸೂಚಿಸಿದಂತೆ ಮಾಡುತ್ತೇನೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಹೇಳಿಕೆಯಲ್ಲಿ ಬಹಳ ಸ್ಪಷ್ಟತೆ ಇದೆ. ರಾಜ್ಯದಲ್ಲಿ ಪರ್ಯಾಯ ನಾಯಕರು ಬಹಳಷ್ಟು ಜನರಿದ್ದಾರೆ. ಮತ್ತೊಬ್ಬ ನಾಯಕ ವೀರಶೈವ ಸಮುದಾಯದವರೇ ಬರಲಿ. ವೀರಶೈವರಲ್ಲಿ ಮುಖ್ಯವಾಗಿ ಪಂಚಮಸಾಲಿಗರು ಬಹಳಷ್ಟಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದರು.
ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಆಗುತ್ತಿವೆ. ಹೀಗಾಗಿ ಸಿಎಂ ಯಡಿಯೂರಪ್ಪ ಈ ರೀತಿ ಹೇಳಿಕೆ ಕೊಟ್ಟಿರಬಹುದು. ಆದರೆ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಪ್ರಶ್ನೆ ನಮ್ಮ ಪಕ್ಷದ ಮುಂದಿಲ್ಲ. ಕೊರೊನಾ ಸಂಕಷ್ಟದಲ್ಲೂ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ಸಿಎಂ ಬಿಎಸ್‌ವೈ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರನ್ನು ಬದಲಾವಣೆ ಮಾಡುವ ಯಾವುದೇ ವಿಚಾರವಿಲ್ಲ. ಹೈಕಮಾಂಡ್‌ನಿಂದಲೂ ಯಾವುದೇ ರೀತಿಯ ಸೂಚನೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹೈಕಮಾಂಡ್‌ಗೆ ಸಿಎಂ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ಹೀಗಾಗಿ ಅವರನ್ನ ಮುಂದುವರಿಸಿದ್ದಾರೆಂದು ಸಿಎಂ ಹೇಳಿದ್ದಾರೆ. ತನಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಹೈಕಮಾಂಡ್‌ಗೆ ಸಿಎಂ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ಹೀಗಾಗಿ ಸಿಎಂ ಆಗಿ ಮುಂದುವರಿದಿದ್ದೇನೆಂದು ಹೇಳಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆಂದು ಸಿಎಂ ಹೇಳಿದ್ದಾರೆ. ಅಧಿಕಾರಕ್ಕಾಗಿ ಅಂಟಿಕೊಂಡು ಕೂರಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿಎಂ ಬಿಎಸ್‌ವೈ ಹೇಳಿಕೆ ಬಗ್ಗೆ ಚರ್ಚೆ ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ. ಯಡಿಯೂರಪ್ಪ ಆದರ್ಶವಾಗಿ ಹೇಳಿಕೆ ನೀಡಿದ್ದಾರೆ. ಪಕ್ಷದ ಸೂಚನೆಗೆ ಬದ್ಧ ಎಂದು ಸಂದೇಶ ನೀಡಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ಪಾಲಿಸುತ್ತೇನೆ ಎಂದಿದ್ದಾರೆ. ಸಹಜವಾಗಿ ಪರ್ಯಾಯ ನಾಯಕರು ಇದ್ದಾರೆಂದು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಮ್ಮಲ್ಲಿ ಯಾವುದೇ ರೆಬೆಲ್ ನಾಯಕರು ಇಲ್ಲ, ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿಯ ಅಪಸ್ವರ ಇಲ್ಲ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಬದಲಾಗಲ್ಲ. ಕೊರೊನಾ ನಿರ್ವಹಣೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ: ಬಿ.ಎಸ್.ಯಡಿಯೂರಪ್ಪ
ವರ್ಗಾವಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ರೋಹಿಣಿ ಸಿಂಧೂರಿ ಭೇಟಿ
(Govind Karajola said there was no mention of CM change)