Kisan Drone: 100 ಕಿಸಾನ್​ ಡ್ರೋನ್​​ಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಆಧುನಿಕ ಕೃಷಿ ಪದ್ಧತಿಯಲ್ಲೊಂದು ಹೊಸ ಅಧ್ಯಾಯ

| Updated By: Lakshmi Hegde

Updated on: Feb 19, 2022 | 11:47 AM

ಈ ಬಾರಿಯ ಗಣರಾಜ್ಯೋತ್ಸವ ಬೀಟಿಂಗ್​ ರಿಟ್ರೀಟ್​ ಆಚರಣೆಯಲ್ಲಿ 100 ಡ್ರೋನ್​​ಗಳು ಪ್ರದರ್ಶನ ನೀಡಿದ್ದವು. ಹಾಗೇ, ಮುಂದಿನ ಎರಡು ವರ್ಷಗಳಲ್ಲಿ ಗರುಡಾ ಏರೋಸ್ಪೇಸ್ ಸುಮಾರು 1 ಲಕ್ಷ ಡ್ರೋನ್​​ಗಳ ತಯಾರಿಕೆಯ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ನನಗೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Kisan Drone: 100 ಕಿಸಾನ್​ ಡ್ರೋನ್​​ಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಆಧುನಿಕ ಕೃಷಿ ಪದ್ಧತಿಯಲ್ಲೊಂದು ಹೊಸ ಅಧ್ಯಾಯ
ಕಿಸಾನ್​ ಡ್ರೋನ್​​ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಸಿರು ನಿಶಾನೆ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಿನ್ನೆ (ಫೆ.18) ಭಾರತದ ವಿವಿಧ ನಗರಗಳು, ಪಟ್ಟಣಗಳಲ್ಲಿ 100 ಕಿಸಾನ್​ ಡ್ರೋನ್​​ಗಳಿಗೆ (Kisan Drones) ವಿಡಿಯೋ ಕಾನ್ಫರೆನ್ಸ್​ ಮೂಲಕ ಹಸಿರು ನಿಶಾನೆ ತೋರಿದರು.  ಕೃಷಿ ಭೂಮಿಗಳಿಗೆ ಕೀಟನಾಶಕ ಸಿಂಪಡಿಸುವ ಡ್ರೋನ್​ಗಳು ಇವಾಗಿದ್ದು, ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿವೆ. ಹಾಗೇ, ಆಧುನಿಕ ಕೃಷಿ ಪದ್ಧತಿಯ ನಿರ್ಮಾಣದಲ್ಲಿ ಇದೊಂದು ಹೊಸ ಅಧ್ಯಾಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

100 ಕಿಸಾನ್​ ಡ್ರೋನ್​ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲು ಡ್ರೋನ್​ ಎಂದರೆ ಕೇವಲ ಸೇನೆಗೆ ಸಂಬಂಧಪಟ್ಟಿದ್ದು, ವೈರಿಗಳೊಂದಿಗೆ ಹೋರಾಡಲು ಬಳಸುವಂಥದ್ದು ಎಂದು ಭಾವಿಸಲಾಗುತ್ತಿತ್ತು. ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಧುನಿಕ ಕೃಷಿ ಪದ್ಧತಿಯೆಡೆಗಿನ ಒಂದು ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ. ಇದೊಂದು ಹೊಸ ಅಧ್ಯಾಯ. ಈ ಕಿಸಾನ್​ ಡ್ರೋನ್​​ಗಳಿಂದಾಗಿ ಡ್ರೋನ್​ ವಲಯದ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸೃಷ್ಟಿಯಾಗುವ ಜತೆ, ಅನಂತ ಅವಕಾಶಗಳು ಸೃಷ್ಟಿಯಾಗುತ್ತವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಈ ಬಾರಿಯ ಗಣರಾಜ್ಯೋತ್ಸವ ಬೀಟಿಂಗ್​ ರಿಟ್ರೀಟ್​ ಆಚರಣೆಯಲ್ಲಿ 100 ಡ್ರೋನ್​​ಗಳು ಪ್ರದರ್ಶನ ನೀಡಿದ್ದವು. ಹಾಗೇ, ಮುಂದಿನ ಎರಡು ವರ್ಷಗಳಲ್ಲಿ ಗರುಡಾ ಏರೋಸ್ಪೇಸ್ ಸುಮಾರು 1 ಲಕ್ಷ ಡ್ರೋನ್​​ಗಳ ತಯಾರಿಕೆಯ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ನನಗೆ ನೀಡಲಾಗಿದೆ. ಇದು ಯುವಜನರಿಗೆ ಉದ್ಯೋಗಾವಕಾಶ ನೀಡುತ್ತದೆ. ಅಷ್ಟೇ ಅಲ್ಲ, ಸಂಶೋಧನಾಸಕ್ತರಿಗೂ ಹೊಸ ಅವಕಾಶ ತೆರೆದುಕೊಳ್ಳಲಿದೆ ಎಂದು ಹೇಳಿದರು.

ದೇಶದಲ್ಲಿ ಸ್ವಾಮಿತ್ವ ಯೋಜನೆಯಡಿ, ಡ್ರೋನ್​​ ಮೂಲಕ ಭೂ ದಾಖಲೀಕರಣ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಲಸಿಕೆ ಅಭಿಯಾನ ಶುರುವಾದಾಗ ಅದೆಷ್ಟೋ ದುರ್ಗಮ ಪ್ರದೇಶಗಳಿಗೆ ಡ್ರೋನ್​ ಮೂಲಕವೇ ಔಷಧಗಳು, ಲಸಿಕೆಗಳನ್ನು ಸಾಗಿಸಲಾಗಿದೆ. ಈ ಮಧ್ಯೆ ಕೃಷಿಯಲ್ಲೂ ಡ್ರೋನ್​ ಬಳಕೆ ಪ್ರಾರಂಭವಾಗಿದ್ದು ತುಂಬ ಸಂತೋಷದ ಸಂಗತಿ. ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು, ಕೀಟನಾಶಕ ಸಾಗಿಸಲು ಡ್ರೋನ್​ ಬಳಸುತ್ತಿರುವುದು ಖಂಡಿತ ಹೊಸ ವಿಧಾನ ಎಂದೂ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಬಾರಿಯ 2022-23ನೇ ಬಜೆಟ್​ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೃಷಿ ವಲಯದ ಆಧುನಿಕತೆಗೆ ಒತ್ತುಕೊಡುವುದಾಗಿ ಹೇಳಿದ್ದರು.  ಕೃಷಿ ವಲಯದ ಆಧುನಿಕರಣಕ್ಕಾಗಿ ಕೇಂದ್ರ ಸರ್ಕಾರ ಕಿಸಾನ್​ ಡ್ರೋನ್​​ಗಳಿಗೆ ಉತ್ತೇಜನ ನೀಡಲಿದೆ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತರಿಗೆ ಡಿಜಿಟಲ್​ ಮತ್ತು ಹೈಟೆಕ್​ ಸೇವೆಗಳನ್ನು ನೀಡಲಾಗುವುದು ಎಂದೂ ಹೇಳಿದ್ದರು. ಅಷ್ಟೇ ಅಲ್ಲ, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು, ಬೆಳೆಗಳಿಗೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಣೆ ಮಾಡಲು ಕಿಸಾನ್ ಡ್ರೋನ್​​ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದೂ ಹೇಳಿದ್ದರು.

ಇದನ್ನೂ ಓದಿ: ಕೋಲ್​ ಇಂಡಿಯಾ ಲಿಮಿಟೆಡ್​​ನಲ್ಲಿ ಉದ್ಯೋಗ ಅವಕಾಶ : ಇಲ್ಲಿದೆ ಮಾಹಿತಿ

Published On - 11:34 am, Sat, 19 February 22