President Ram Nath Kovind: ಇಂದು ಒಡಿಶಾಕ್ಕೆ ಭೇಟಿ ಕೊಡಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್; 21ಕ್ಕೆ ಆಂಧ್ರಪ್ರದೇಶ ಭೇಟಿ
ಫೆ.20ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶ್ರೀಮದ್ ಭಕ್ತಿ ಸಿದ್ಧಾರ್ಥ ಸರಸ್ವತಿ ಗೋಸ್ವಾಮಿ ಪ್ರಭುಪಾದರ 150ನೇ ಜನ್ಮವಾರ್ಷಿಕೋತ್ಸವ ಸಮಾರಂಭಗಳನ್ನು ಉದ್ಘಾಟಿಸುವರು.
ಪುರಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಒಡಿಶಾಕ್ಕೆ ಭೇಟಿ ನೀಡಲಿದ್ದು, ಅಲ್ಲಿಂದ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ. ಫೆ.19 ಮತ್ತು 20ರಂದು ರಾಮನಾಥ್ ಕೋವಿಂದ್ ಅವರು ಒಡಿಶಾದಲ್ಲಿ ಇರಲಿದ್ದು, 21 ಮತ್ತು 22ರಂದು ಆಂಧ್ರಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯಿಂದ ಇಂದು ಮಧ್ಯಾಹ್ನ 12.25ಕ್ಕೆ ವಿಮಾನದಿಂದ ತೆರಳಲಿರುವ ರಾಮನಾಥ ಕೋವಿಂದ್ ಸುಮಾರು 2.45ರ ಹೊತ್ತಿಗೆ ಭುವನೇಶ್ವರ್ದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ರಾಮನಾಥ ಕೋವಿಂದ್ರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ವಾಗತಿಸುವರು. ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುರೇಶ್ ಮೋಹಪಾತ್ರಾ, ಪೊಲೀಸ್ ಡಿಜಿ ಸುನೀಲ್ ಬನ್ಸಾಲ್ ಮತ್ತು ರಾಜ್ಯಪಾಲ ಗಣೇಶ್ ಲಾಲ್ ಕೂಡ ಇರುವರು. ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಹೊರಟು 3.50ರ ಹೊತ್ತಿಗೆ ಪುರಿ ತಲಬಾನಿಯಾ ಹೆಲಿಪ್ಯಾಡ್ ತಲುಪಲಿದ್ದಾರೆ. ನಂತರ ಶ್ರೀ ಚೈತನ್ಯ ಗೌಡಿಯಾ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಮಠದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಾವ ಕಾರಣಕ್ಕೂ ವಿಳಂಬ ಮಾಡಬಾರದು ಮತ್ತು ಭದ್ರತೆಯಲ್ಲಿ ಲೋಪವಾಗಬಾರದು ಎಂದು ಈಗಾಗಲೇ ಮಠಕ್ಕೆ ಆದೇಶ ನೀಡಲಾಗಿದೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಈ ಶ್ರೀಮಂದಿರದಲ್ಲಿ ಮಧ್ಯಾಹ್ನ 4ರಿಂದ ಸಂಜೆ 6ಗಂಟೆವರೆಗೆ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಹಾಗೇ, ಇಂದು ರಾಷ್ಟ್ರಪತಿಗಳು ಯಾವುದೇ ಖಾಸಗಿ ಹೋಟೆಲ್ನಲ್ಲಿ ತಂಗುತ್ತಿಲ್ಲ. ಬದಲಿಗೆ ಪುರಿ ರಾಜಭವನದಲ್ಲಿ ಇರಲಿದ್ದಾರೆ.
ಫೆ.20ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶ್ರೀಮದ್ ಭಕ್ತಿ ಸಿದ್ಧಾರ್ಥ ಸರಸ್ವತಿ ಗೋಸ್ವಾಮಿ ಪ್ರಭುಪಾದರ 150ನೇ ಜನ್ಮವಾರ್ಷಿಕೋತ್ಸವ ಸಮಾರಂಭಗಳನ್ನು ಉದ್ಘಾಟಿಸುವರು. ಇದು ಮೂರು ವರ್ಷಗಳವರೆಗೆ ನಡೆಯುತ್ತಿರುತ್ತದೆ. ಅಂದರೆ, ಪ್ರಭುಪಾದರ 150ನೇ ಜನ್ಮವಾರ್ಷಿಕೋತ್ಸವ ನಿಮಿತ್ತ 3ವರ್ಷಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದಹಾಗೇ, ಶ್ರೀಮದ್ ಭಕ್ತಿ ಸಿದ್ಧಾರ್ಥ ಸರಸ್ವತಿ ಗೋಸ್ವಾಮಿ ಪ್ರಭುಪಾದರು ಗೌಡಿಯಾ ಮಠ ಮತ್ತು ಪುರಿ ಗೌಡಿಯಾ ಮಿಶನ್ನ ಸಂಸ್ಥಾಪಕರು. 2021ರ ಮಾರ್ಚ್ನಲ್ಲಿ ರಾಮನಾಥ ಕೋವಿಂದ್ ಅವರು ತಮ್ಮ ಪತ್ನಿ ಸವಿತಾ ಕೋವಿಂದ್ ಜತೆ ಪುರಿಗೆ ಭೇಟಿ ಕೊಟ್ಟಿದ್ದರು. ಅದಾದ ಬಳಿಕ ಈಗ ಅವರು ಅಲ್ಲಿಗೆ ತೆರಳುತ್ತಿದ್ದಾರೆ.
21ಕ್ಕೆ ಆಂಧ್ರಪ್ರದೇಶ ಭೇಟಿ ಒಡಿಶಾದಿಂದ ಆಂಧ್ರಪ್ರದೇಶಕ್ಕೆ ತೆರಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಫೆ.21ರಂದು ವಿಶಾಖಪಟ್ಟಣಂನಲ್ಲಿ ಫ್ಲೀಟ್ ರಿವಿವ್ಯೂ ಮತ್ತು ಫ್ಲೈಪಾಸ್ಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಶಸ್ತ್ರ ಪಡೆಗಳ ಸರ್ವೋಚ್ಛ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು ಅವರ ಹುದ್ದೆಯ ಅವಧಿಯಲ್ಲಿ ಒಮ್ಮೆಯಾದರೂ ಭಾರತೀಯ ನೌಕಾಪಡೆ ಪರಿಶೀಲನೆ ಮಾಡುತ್ತಾರೆ. ಅದರಂತೆ ಫೆ.21ರಂದು ರಾಮನಾಥ ಕೋವಿಂದ್ ಅವರು ಫೆ.21ಕ್ಕೆ ಇದನ್ನು ನಡೆಸಲಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಐಪಿಎಸ್ ಅಧಿಕಾರಿಯನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ದಳ
Published On - 9:44 am, Sat, 19 February 22