ಲಖನೌನಲ್ಲಿ ಆಜಾದಿ@75ರಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ; ವಸತಿ ಫಲಾನುಭವಿಗಳೊಂದಿಗೆ ಸಂವಾದ
ಪ್ರಧಾನಿ ನರೇಂದ್ರ ಮೋದಿಯವರು ನವಭಾರತ ನಿರ್ಮಾಣದ ಕನಸು ಕಂಡಿದ್ದಾರೆ. ಅದನ್ನು ಪೂರೈಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಲಖನೌಗೆ ಆಗಮಿಸಿ ಆಜಾದಿ@75: ನ್ಯೂ ಅರ್ಬನ್ ಇಂಡಿಯಾ: ಟ್ರಾನ್ಸ್ಫರ್ಮಿಂಗ್ ಅರ್ಬನ್ ಲ್ಯಾಂಡ್ಸ್ಕೇಪ್ ಸಮ್ಮೇಳನ ಮತ್ತು ಎಕ್ಸ್ಪೋ ಉದ್ಘಾಟಿಸಿದ್ದಾರೆ. ಒಟ್ಟು 75 ವಿವಿಧ ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ 75 ಜಿಲ್ಲೆಗಳ 75 ಸಾವಿರ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ-ಅರ್ಬನ್(PMAY-U) ಯಡಿ ಮನೆಗಳ ಕೀಯನ್ನು ವರ್ಚ್ಯುವಲ್ ಆಗಿ ವಿತರಿಸಿದ್ದಾರೆ. ಹಾಗೇ, ಲಖನೌ, ಕಾನ್ಪುರ, ವಾರಾಣಸಿ, ಪ್ರಯಾಗ್ರಾಜ್, ಗೋರಖ್ಪುರ, ಝಾನ್ಸಿ ಮತ್ತು ಘಾಜಿಯಾಬಾದ್ಗಳಿಗೆ ಸಂಚಾರ ಮಾಡುವಂತೆ 75 ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ನೀಡಿದ್ದಾರೆ. ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ವಿವಿಧ ಪ್ರಮುಖ ಕಾರ್ಯಕ್ರಮಗಳಡಿ ಜಾರಿಗೊಳಿಸಿದ 75 ಯೋಜನೆಗಳ ವಿವರಗಳನ್ನೊಳಗೊಂಡ ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಈ ಎಕ್ಸ್ಪೋ ಮತ್ತು ನವನಗರ ಭಾರತ ನಿರ್ಮಾಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಸತಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ.
Lucknow: PM Narendra Modi digitally handover keys of Pradhan Mantri Awas Yojana – Urban (PMAY-U) houses to 75,000 beneficiaries in 75 districts of Uttar Pradesh.
He also interacts with beneficiaries of the scheme in Uttar Pradesh, virtually pic.twitter.com/zpdnucexwr
— ANI UP (@ANINewsUP) October 5, 2021
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವ ಹರ್ದೀಪ್ ಪುರಿ, ಯುಪಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರು ನವಭಾರತ ನಿರ್ಮಾಣದ ಕನಸು ಕಂಡಿದ್ದಾರೆ. ಅದನ್ನು ಪೂರೈಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ಕನಸು ನನಸಾಗುತ್ತಿರುವುದಕ್ಕೆ ಸಾಕ್ಷಿಯಾಗಿ ಹಲವು ಬದಲಾವಣೆಗಳು ಆಗುತ್ತಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರ 17.3 ಲಕ್ಷ ಮನೆಗಳನ್ನು ಮಂಜೂರು ಮಾಡಿದೆ. ಇದುವರೆಗೆ 8.8 ಲಕ್ಷ ಫಲಾನುಭವಿಗಳು ಈ ಯೋಜನೆಯಡಿ ಮನೆ ಪಡೆದಿದ್ದಾರೆ ಎಂದು ತಿಳಿಸಿದರು. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಇದೇ ವೇಳೆ, ಅಯೋಧ್ಯೆ ಅಭಿವೃದ್ಧಿ ಯೋಜನೆಯ ಬಗ್ಗೆಯೂ ಸಿಎಂ ಯೋಗಿ ಆದಿತ್ಯನಾಥ್ ಬಳಿ ಕೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: SBI PO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗೆ ಅರ್ಜಿ ಆಹ್ವಾನ
Published On - 1:23 pm, Tue, 5 October 21