ಕಣ್ಣು ಕುಕ್ಕುತ್ತಿದೆ ಗುಜರಾತ್​ನ ಗಾಂಧಿನಗರದ ಫೈವ್ ಸ್ಟಾರ್ ರೈಲು ನಿಲ್ದಾಣ; ಏನಿದರ ವಿಶೇಷತೆ?

| Updated By: ಸುಷ್ಮಾ ಚಕ್ರೆ

Updated on: Jul 16, 2021 | 7:14 PM

Gandhinagar Railway Station: ಗಾಂಧಿನಗರದ ರೈಲು ನಿಲ್ದಾಣದೊಳಗೆ ಫೈವ್ ಸ್ಟಾರ್ ಹೋಟೆಲ್ ಕೂಡ ಇದೆ. ಈ ರೈಲು ನಿಲ್ದಾಣದ ಮುಂಭಾಗದಲ್ಲಿ 32 ಥೀಮ್ ಲೈಟ್​ಗಳ ವ್ಯವಸ್ಥೆ ಮಾಡಲಾಗಿದೆ.

ಕಣ್ಣು ಕುಕ್ಕುತ್ತಿದೆ ಗುಜರಾತ್​ನ ಗಾಂಧಿನಗರದ ಫೈವ್ ಸ್ಟಾರ್ ರೈಲು ನಿಲ್ದಾಣ; ಏನಿದರ ವಿಶೇಷತೆ?
ಗಾಂಧಿನಗರ ರೈಲು ನಿಲ್ದಾಣ
Follow us on

ಅಹಮದಾಬಾದ್: ಗುಜರಾತ್​ನ ಗಾಂಧಿನಗರದಲ್ಲಿ ಸುಮಾರು 71 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಶ್ವದರ್ಜೆಯ ರೈಲು ನಿಲ್ದಾಣವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಸಂಪೂರ್ಣ ಲೈಟಿಂಗ್​ನಿಂದ ಅಲಂಕೃತವಾಗಿರುವ ಈ ರೈಲು ನಿಲ್ದಾಣದ ಒಳಗೆ ಪಂಚತಾರಾ ಹೋಟೆಲ್ ಕೂಡ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ.

ಅತ್ಯಾಧುನಿಕ ಸೌಲಭ್ಯಗಳಿರುವ ಗಾಂಧಿನಗರದ ಈ ರೈಲು ನಿಲ್ದಾಣವನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಇಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ವಿಶೇಷವಾದ ಟಿಕೆಟ್ ಬುಕಿಂಗ್ ಕೌಂಟರ್, ಲಿಫ್ಟ್​ ವ್ಯವಸ್ಥೆ, ಪಾರ್ಕಿಂಗ್ ಏರಿಯಾದ ಜೊತೆಗೆ ಈ ರೈಲು ನಿಲ್ದಾಣದೊಳಗೆ ಫೈವ್ ಸ್ಟಾರ್ ಹೋಟೆಲ್ ಕೂಡ ಇದೆ. ಈ ರೈಲು ನಿಲ್ದಾಣದ ಮುಂಭಾಗದಲ್ಲಿ 32 ಥೀಮ್ ಲೈಟ್​ಗಳ ವ್ಯವಸ್ಥೆ ಮಾಡಲಾಗಿದೆ. ಈ ನಿಲ್ದಾಣದ ರೈಲ್ವೆ ಹಳಿಗಳು ಮತ್ತು ಪ್ಲಾಟ್​ಫಾರ್ಮ್​ಗಳನ್ನು ಅಲ್ಯುಮಿನಿಯಂ ಶೀಟ್​ಗಳಿಂದ ಮುಚ್ಚಲಾಗಿದೆ.

ಗಾಂಧಿನಗರ- ವಾರಾಣಸಿ ಮಾರ್ಗದ ವೀಕ್ಲಿ ಸೂಪರ್​ಫಾಸ್ಟ್​ ರೈಲು ಸಂಚಾರಕ್ಕೂ ಇಂದು ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದಾರೆ. ನಿನ್ನೆಯಷ್ಟೇ ಸ್ವಕ್ಷೇತ್ರ ವಾರಾಣಸಿಯಲ್ಲಿ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಇಂದು ಗುಜರಾತ್​ನಲ್ಲಿ 1,100 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಲೋಕಾಪರ್ಣೆಗೊಳಿಸಿದ್ದಾರೆ. ಈ ಮೂಲಕ ತವರು ರಾಜ್ಯವಾದ ಗುಜರಾತ್​ಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ ನೀಡಿದ್ದಾರೆ.

ಮಹೆಸಾನ-ವರೇಥಾ ಗೇಜ್ ಪರಿವರ್ತಿತ ವಿದ್ಯುದೀಕರಣ ಬ್ರಾಡ್ ಗೇಜ್ ಮಾರ್ಗ (ವಡ್ನಗರ್ ನಿಲ್ದಾಣ ಸೇರಿ) ಮಹೆಸಾನ- ವರೇಥಾ ನಡುವಿನ 55 ಕಿ.ಮೀ. ದೂರದ ರೈಲು ಮಾರ್ಗವನ್ನು ಬ್ರಾಡ್ ಗೇಜ್​ಗೆ ಪರಿವರ್ತಿಸಿ ವಿದ್ಯುದೀಕರಣ ಮಾಡಲಾಗಿದೆ. ಗೇಜ್ ಪರಿವರ್ತನೆಗೆ 293 ಕೋಟಿ ರೂ. ಹಾಗೂ ವಿದ್ಯುದೀಕರಣ ಕಾಮಗಾರಿಗೆ 74 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮಾರ್ಗದಲ್ಲಿ 10 ರೈಲ್ವೆ ನಿಲ್ದಾಣಗಳಿದ್ದು, ಅವುಗಳಲ್ಲಿ 4 ಹೊಸ ನಿಲ್ದಾಣಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ವಿಸ್ ನಗರ್, ವದ್ ನಗರ್, ಖೇರಾಲು ಮತ್ತು ವರೇಥಾದಲ್ಲಿ ಹೊಸ ನಿಲ್ದಾಣಗಳು ತಲೆ ಎತ್ತಿವೆ.

ಈ ಮಾರ್ಗದಲ್ಲಿ ವದ್ನಗರ್ ರೈಲು ನಿಲ್ದಾಣವು ಪ್ರಮುಖವಾಗಿದ್ದು, ಇದೇ ರೈಲು ನಿಲ್ದಾಣದ ಒಳಗೆ ನರೇಂದ್ರ ಮೋದಿ ಅವರ ತಂದೆ ದಾಮೋದರದಾಸ್ ಮೋದಿ ಟೀ ಮಾರುತ್ತಿದ್ದರು. ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಇದೇ ರೈಲು ನಿಲ್ದಾಣದಲ್ಲಿ ತಮ್ಮ ತಂದೆಗೆ ಟೀ ಮಾರಲು ಸಹಾಯ ಮಾಡುತ್ತಿದ್ದರು!

ಇದನ್ನೂ ಓದಿ: BS Yediyurappa: ತಿಂಗಳಿಗೆ 1.5 ಕೋಟಿ ಡೋಸ್ ಕೋವಿಡ್ ಲಸಿಕೆ ಒದಗಿಸಿ; ಪ್ರಧಾನಿ ಮೋದಿಗೆ ಸಿಎಂ ಯಡಿಯೂರಪ್ಪ ಮನವಿ

ಇದನ್ನೂ ಓದಿ: Rudraksh Varanasi: ಶಿವಲಿಂಗದ ಆಕಾರದಲ್ಲಿ ವಾರಾಣಸಿಯಲ್ಲಿ ಎದ್ದು ನಿಂತಿದೆ ರುದ್ರಾಕ್ಷ ಸೆಂಟರ್; ಈ ಭವ್ಯ ಕಟ್ಟಡದ ವಿಶೇಷತೆಯೇನು ಗೊತ್ತಾ?

(PM Narendra Modi inaugurates World Class 5 star Gandhinagar Railway station of Gujarat Watch Video)