ಪ್ರಧಾನಿ ನರೇಂದ್ರ ಮೋದಿ ಬಳಿ ಕರ್ನಾಟಕದ ಹಲವು ಯೋಜನೆಗಳಿಗೆ ಕೇಂದ್ರದ ನೆರವು ಕೋರಿದ ಯಡಿಯೂರಪ್ಪ
ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ನಗುತ್ತಾ ಉತ್ತರಿಸಿದರು.
ದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಕೆಲ ಯೋಜನೆಗಳ ವಿಷಯದಲ್ಲಿ ಕೇಂದ್ರ ಸರ್ಕಾರದ ನೆರವು ಒದಗಿಸುವಂತೆ ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು, ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ₹ 6 ಸಾವಿರ ಕೋಟಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಮೇಕೆದಾಟು ಯೋಜನೆ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರದ ನೆರವು ಬೇಕೆಂದು ವಿನಂತಿಸಿದತು. ಈ ಸಂದರ್ಭ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗಿರೀಶ್ ಹೊಸೂರ್ ಉಪಸ್ಥಿತರಿದ್ದರು. ಪ್ರಧಾನಿ ಭೇಟಿಯ ನಂತರ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ರಾಜ್ಯದ ಸಚಿವರನ್ನು ಯಡಿಯೂರಪ್ಪ ಕರ್ನಾಟಕ ಭವನದಲ್ಲಿ ಭೇಟಿಯಾದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಎ.ನಾರಾಯಣಸ್ವಾಮಿ ಅವರೊಂದಿಗೆ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಯಡಿಯೂಪ್ಪ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಪ್ರಧಾನಿಯೊಂದಿಗೆ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಿದೆ. ಮೇಕೆದಾಟು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಅವರ ಗಮನ ಸೆಳೆದೆ. ಕರ್ನಾಟಕದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನ ಕೇಳಿದ್ದೇನೆ. ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲ ಪ್ರಸ್ತಾವಗಳಿಗೂ ಒಪ್ಪಿಗೆ ಕೊಟ್ಟಿದ್ದಾರೆ. ಪ್ರಧಾನಿ ಸಭೆಯ ಬಗ್ಗೆ ಶನಿವಾರ ವಿವರಗಳನ್ನು ನೀಡುತ್ತೇನೆ ಎಂದರು.
ರಾಜ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ನಗುತ್ತಾ ಉತ್ತರಿಸಿದರು.
(Karnataka CM BS Yediyurappa meets PM Narendra Modi amid Talks of His removal and cabinet reshuffle)
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ; ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅಚಲ ನುಡಿ