ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಅಂತಿಮ ಹಂತಕ್ಕೆ, ಅನುಮೋದನೆ ಸಿಕ್ಕ ತಕ್ಷಣ ಅನುಷ್ಠಾನ: ಕೇಂದ್ರ ಸರ್ಕಾರ ಭರವಸೆ

ಅಂತಿಮ ಹಂತದಲ್ಲಿರುವ ಲಸಿಕಾ ಪ್ರಯೋಗ ಪೂರ್ಣಗೊಂಡ ನಂತರ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಕೋರಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ.

ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಅಂತಿಮ ಹಂತಕ್ಕೆ, ಅನುಮೋದನೆ ಸಿಕ್ಕ ತಕ್ಷಣ ಅನುಷ್ಠಾನ: ಕೇಂದ್ರ ಸರ್ಕಾರ ಭರವಸೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 16, 2021 | 9:55 PM

ದೆಹಲಿ: ಹದಿನೆಂಟು ವರ್ಷ ವಯೋಮಾನದವರಿಗೂ ಕಡಿಮೆ ಇರುವ ಮಕ್ಕಳ ಮೇಲೆ ನಡೆಯುತ್ತಿದ್ದ ಲಸಿಕಾ ಪ್ರಯೋಗ ಈಗಲೂ ಮುಂದುವರಿದಿದೆ. ಅಂತಿಮ ಹಂತದಲ್ಲಿರುವ ಲಸಿಕಾ ಪ್ರಯೋಗ ಪೂರ್ಣಗೊಂಡ ನಂತರ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಕೋರಲಾಗುವುದು. ಒಮ್ಮೆ ಅನುಮತಿ ಸಿಕ್ಕ ನಂತರ ಮಕ್ಕಳಿಗೆ ಲಸಿಕೆ ನೀಡುವ ಕುರಿತು ನೀತಿ ರೂಪಿಸಲಾಗುವುದು ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್​ಗೆ ಶುಕ್ರವಾರ ಮಾಹಿತಿ ನೀಡಿದೆ.

ದೆಹಲಿಯಲ್ಲಿ 12ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ಈ ಮಾಹಿತಿ ನೀಡಿತು. ಈ ಅರ್ಜಿಯನ್ನು 12 ವರ್ಷದ ಬಾಲಕಿಯು ತನ್ನ ತಾಯಿಯ ಮೂಲಕ ಸಲ್ಲಿಸಿದ್ದಾಳೆ. 8 ವರ್ಷದ ಮಗು ಇರುವ ಮತ್ತೊಂದು ಮಹಿಳೆ ಸಹ ಅರ್ಜಿದಾರರಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್​ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಮಕ್ಕಳಿಗೆ ಬೇಗನೇ ಲಸಿಕೆ ಹಾಕಿಸಬೇಕೆಂದು ಇಡೀ ದೇಶ ಬಯಸುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ದಾಖಲಿಸಲು ಹೆಚ್ಚಿನ ಸಮಯಾವಕಾಶ ನೀಡಿತು. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿತು.

ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ‘ಝೈಡಸ್ ಕೇಡಿಲಾ ಕಂಪನಿಯು ಡಿಎನ್​ಎ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. 12ರಿಂದ 18 ವಯೋಮಾನದ ಮಕ್ಕಳ ಮೇಲೆ ಕಂಪನಿ ನಡೆಸಿದ ಪ್ರಯೋಗ ಮುಗಿದಿದೆ. ಸಂಬಂಧಿಸಿದ ಪ್ರಾಧಿಕಾರಗಳ ಅನುಮೋದನೆ ದೊರೆತ ನಂತರ ಈ ಲಸಿಕೆಯು ದೇಶದ ಎಲ್ಲ ಮಕ್ಕಳಿಗೂ ಶೀಘ್ರದಲ್ಲಿಯೇ ಲಭ್ಯವಾಗುವ ಸಾಧ್ಯತೆಯಿದೆ. ಭಾರತೀಯ ಔಷಧ ಮಹಾ ನಿಯಂತ್ರಕರು ಈಗಾಗಲೇ ಭಾರತ್ ಬಯೋಟೆಕ್ ಸಂಸ್ಥೆಗೂ 2ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಿದೆ ಎಂದು ಮಾಹಿತಿ ನೀಡಿದರು.

ಪ್ರಯೋಗ ನಡೆಸುವ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಮುಗಿಸಲು ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ನಿರಾಕರಿಸಿತು. ಪ್ರಯೋಗಗಳು ಚಾಲ್ತಿಯಲ್ಲಿದ್ದು, ಮುಕ್ತಾಯದ ಹಂತದಲ್ಲಿದೆ ಎಂದು ಸರ್ಕಾರ ಹೇಳಿದೆ. ಹೀಗಿರುವಾಗ ಕಾಲಮಿತಿಯಲ್ಲಿ ಪ್ರಯೋಗ ಮುಗಿಸುವಂತೆ ಆದೇಶ ನೀಡಬೇಕೆ? ದೇಶದಲ್ಲಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂಬ ಆತುರದಲ್ಲಿದ್ದಾರೆ. ಲಸಿಕೆ ಪ್ರಯೋಗಗಳಿಗೆ ಕಾಲಮಿತಿ ವಿಧಿಸಲು ಆಗುವುದಿಲ್ಲ. ಲಸಿಕೆ ಪ್ರಯೋಗಗಳು ಯಾವುದೇ ಲೋಪಗಳಿಲ್ಲದೆ ಪೂರ್ಣಗೊಳ್ಳುವುದು ಮುಖ್ಯ ಎಂದು ನ್ಯಾಯಪೀಠವು ಹೇಳಿತು.

ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ತೊಂದರೆಯಾಗಿದೆ. 3ನೇ ಅಲೆಯಲ್ಲಿ ಮಕ್ಕಳಿಗೆ ಆಪತ್ತು ಹೆಚ್ಚು ಎಂದು ವೈದ್ಯರು, ವೈರಾಲಜಿಸ್ಟ್​ಗಳು ಎಚ್ಚರಿಸಿದ್ದಾರೆ. ಲಸಿಕೆ ಬಳಕೆಗೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರಗಳು ಈ ವಿಚಾರವನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದರು. ಮಕ್ಕಳಿಗೆ ಮತ್ತು ಅವರ ಯೋಗಕ್ಷೇಮ ನೋಡಿಕೊಳ್ಳುವ ಪೋಷಕರಿಗೆ ಲಸಿಕೆ ವಿತರಣೆಯಲ್ಲಿ ಆದ್ಯತೆ ಸಿಗಬೇಕಿದೆ. ಸರ್ಕಾರಿ ಸಂಸ್ಥೆಗಳು ಈ ಅಂಶವನ್ನು ನಿರ್ಲಕ್ಷಿಸಿದರೆ ಅದು 2013ರಲ್ಲಿ ರೂಪುಗೊಂಡ ಮಕ್ಕಳ ರಾಷ್ಟ್ರೀಯ ನೀತಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.

ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿಶ್ವದ ಹಲವು ದೇಶಗಳು ಈಗಾಗಲೇ ಮಕ್ಕಳಿಗೆ ಸೂಕ್ತ ಲಸಿಕೆ ನೀಡುವ ಕಾರ್ಯ ಆರಂಭಿಸಿವೆ. ವಿದೇಶಗಳಲ್ಲಿ ನಡೆದ ಬೆಳವಣಿಗೆ ಮತ್ತು ನಮ್ಮ ದೇಶದ ತಜ್ಞರು ನೀಡಿದ ವರದಿಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳಿಗೆ ಮತ್ತು ಪೋಷಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

(Coronavirus Vaccine for Children Soon central govt says in Delhi high court)

ಇದನ್ನೂ ಓದಿ: ಕರ್ನಾಟಕಕ್ಕೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಇದನ್ನೂ ಓದಿ: ಕೊರೊನಾ ಲಸಿಕೆ ಜೊತೆಗೆ ಮುನ್ನೆಚ್ಚರಿಕೆಯೂ ಬೇಕು: ಲವ್ ಅಗರ್ವಾಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada